ಯೂರಿಯಾಕ್ಕಾಗಿ ಬೆಳಗಿನ ಜಾವವೇ ಸರದಿ

KannadaprabhaNewsNetwork |  
Published : Aug 22, 2025, 01:00 AM IST
21ಕೆಪಿಎಲ್21 ಕೊಪ್ಪಳದಲ್ಲಿ ಯೂರಿಯಾ ರಸಗೊಬ್ಬರ ಖರೀದಿಗಾಗಿ ರೈತರು ಸರದಿಯಲ್ಲಿ ನಿಂತಿರುವುದು.21ಕೆಪಿಎಲ್22 ಕೊಪ್ಪಳ ನಗರದಲ್ಲಿ ಯೂರಿಯಾ ರಸಗೊಬ್ಬರ ವಿತರಣೆಯನ್ನು ಕೃಷಿ ಇಲಾಖೆಯ ಜೆ.ಡಿ. ಟಿ. ರುದ್ರೇಶಪ್ಪ ಅವರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿರುವುದು. | Kannada Prabha

ಸಾರಾಂಶ

ಕೊಪ್ಪಳ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಳವಾಗಿ ಬೆಳೆಗಳು ಹಾಳಾಗುತ್ತಿವೆ. ಇವುಗಳನ್ನು ರಕ್ಷಿಸಿಕೊಳ್ಳಲು ಯೂರಿಯಾ ರಸಗೊಬ್ಬರ ಅವಶ್ಯಕವಾಗಿದ್ದು ರೈತರು ಯೂರಿಯಾ ಗೊಬ್ಬರಕ್ಕಾಗಿ ಪರದಾಡುವಂತೆ ಆಗಿದೆ.

ಕೊಪ್ಪಳ:

ಅಯ್ಯೋ ದೇವರೇ, ನಮ್ಮ ಪಾಡು ಯಾರಿಗೆ ಹೇಳೋಣ. ನಾಲ್ಕು ಚೀಲ ಗೊಬ್ಬರಕ್ಕಾಗಿ ಪರದಾಡಬೇಕಾದ ಸ್ಥಿತಿ. ಮೊನ್ನೆ ಚೀಟಿ ಕೊಟ್ಟಿದ್ದರು. ಇವತ್ತು ಗೊಬ್ಬರ ಕೊಡ್ತಾರೆ ಅಂತಾ ಬೆಳಗಿನ ಜಾವದಿಂದ ಕಾಯುತ್ತಿದ್ದೇವೆ. ಈಗಲೂ ನನ್ನ ಸರದಿ ಬಂದಿಲ್ಲ. ನನಗಿಂತಲೂ ಮೊದಲೇ ರಾತ್ರಿಯೇ ಬಂದು ಸರದಿಯಲ್ಲಿ ನಿಂತಿದ್ದಾರೆ.

ಇದು, ಯೂರಿಯಾ ರಸಗೊಬ್ಬರ ಖರೀದಿಗಾಗಿ ಕಾಯುತ್ತಿದ್ದ ರೈತರ ಅಳಲು.

ನಗರದ ಟಿಎಪಿಎಂಎಸ್ ಗೋದಾಮ ಮುಂದೆ ರೈತರು ಗೊಬ್ಬರಕ್ಕಾಗಿ ಕಾಯುತ್ತಾ ನಿಂತಾಗ ತೋಡಿಕೊಂಡ ಅಳಲು. ಮಳೆ ಎಡೆಬಿಡದೆ ಸುರಿಯುತ್ತಿದೆ. ಈ ವೇಳೆ ಸಕಾಲದಲ್ಲಿ ಯೂರಿಯಾ ರಸಗೊಬ್ಬರ ಹಾಕದಿದ್ದರೆ ಬೆಳೆ ಹಾಳಾಗುತ್ತದೆ. ಹೀಗಾಗಿ, ಇಷ್ಟೊಂದು ಕಷ್ಟಪಟ್ಟು ಯೂರಿಯಾ ರಸಗೊಬ್ಬರ ತೆಗೆದುಕೊಂಡು ಹೋಗಬೇಕು. ನಾಲ್ಕು ದಿನಗಳಿಂದ ಸುತ್ತಾಡಿದರೂ ಗುರುವಾರ ನಮಗೆ ಗೊಬ್ಬರ ಸಿಗುವ ಯೋಗ ಬಂದಿದೆ. ಅದು ಕೇವಲ ಎರಡು ಚೀಲ ಮಾತ್ರ. ನಮಗೆ ಹತ್ತು ಚೀಲ ಬೇಕು ಎನ್ನುತ್ತಾರೆ ಬೆಳೂರು ಗ್ರಾಮದ ಮಲ್ಲಪ್ಪ. ಇದು, ಕೇವಲ ಇವರೊಬ್ಬರ ಕತೆಯಲ್ಲ, ಯೂರಿಯಾ ರಸಗೊಬ್ಬರಕ್ಕಾಗಿ ಸರದಿಯಲ್ಲಿ ನಿಂತ ಎಲ್ಲರ ಅಳಲು ಇದೇ ಆಗಿದೆ.

ಜಿಲ್ಲಾದ್ಯಂತ ಯೂರಿಯಾ ರಸಗೊಬ್ಬರಕ್ಕಾಗಿ ಹಾಹಾಕಾರ ಎದ್ದಿದೆ. ರೈತರು ಪರದಾಡುತ್ತಿದ್ದರು. ತಾಲೂಕು ಒಕ್ಕಲುತನ ಹುಟ್ಟುವಳಿ ಮಾರುಕಟ್ಟೆ ಸಮಿತಿಯಿಂದ ಆಗಾಗ ಯೂರಿಯಾ ರಸಗೊಬ್ಬರ ವಿತರಣೆ ಆಗುತ್ತಿದೆಯಾದರೂ ಅದು ಎಲ್ಲರಿಗೂ ಸಿಗುವುದೇ ಇಲ್ಲ. ಹೀಗಾಗಿ, ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಬಿಗಿಭದ್ರತೆ:

ಟಿಎಪಿಎಂಎಸ್ ಗೋದಾಮನಲ್ಲಿ ಯೂರಿಯಾ ಗೊಬ್ಬರ ವಿತರಣೆ ಆರಂಭವಾಗುತ್ತದೆ ಎಂದು ಮಾಹಿತಿ ಇದ್ದಿದ್ದರಿಂದ ರೈತರು ಸಾವಿರಾರು ಸಂಖ್ಯೆಯಲ್ಲಿ ಬಂದು, ಸರತಿಯಲ್ಲಿ ನಿಲ್ಲುತ್ತಿದ್ದಂತೆ ಪರಿಸ್ಥಿತಿ ಕೈಮೀರುವ ಹಂತ ತಲುಪಿತು. ಇದಕ್ಕಾಗಿ ಪೊಲೀಸ್ ಇಲಾಖೆ ಬ್ಯಾರಿಕೇಡ್ ಹಾಕಿ, ಬಿಗಿ ಭದ್ರತೆ ವಹಿಸಿದರೂ ಪರಿಸ್ಥಿತಿ ನಿರ್ವಹಣೆ ಕಷ್ಟವಾಯಿತು. ನೂರಾರು ಪೊಲೀಸರು ದೊಡ್ಡ ಸಂಖ್ಯೆಯಲ್ಲಿ ಸೇರಿ ಬಂದೋಬಸ್ತ್ ಒದಗಿಸಿದ್ದರೂ ಆಗಾಗ ನೂಕಾಟ, ತಳ್ಳಾಟ ನಡೆಯುತ್ತಿದೆ.

ಅಧಿಕಾರಿಗಳ ಉಸ್ತುವಾರಿ:

ಕೃಷಿ ಇಲಾಖೆಯ ಜೆ.ಡಿ. ರುದ್ರೇಶಪ್ಪ ಟಿ. ಸ್ಥಳದಲ್ಲಿದ್ದು ಯೂರಿಯಾ ರಸಗೊಬ್ಬರ ವಿತರಣೆಯ ಮೇಲೆ ನಿಗಾ ವಹಿಸಿದ್ದರು. ಯೂರಿಯಾ ರಸಗೊಬ್ಬರಕ್ಕೆ ಬಂದಿದ್ದ ರೈತರ ಮನವೊಲಿಸಿ, ಅತಿಯಾಗಿ ಬಳಕೆ ಮಾಡದೆ ನ್ಯಾನೋ ಯೂರಿಯಾ ಬಳಸುವಂತೆ ಮನವಿ ಮಾಡಿದರು.ನಮಗೆ ತಕ್ಷಣ ಯೂರಿಯಾ ರಸಗೊಬ್ಬರ ಬೇಕಾಗಿದೆ. ಈಗ ಕೊಟ್ಟಿರುವುದು ಯಾತಕ್ಕೂ ಸಾಲುತ್ತಿಲ್ಲ. ದೊಡ್ಡ ಪ್ರಮಾಣದಲ್ಲಿ ವಿತರಣೆ ಮಾಡಿದರೆ ಮಾತ್ರ ಎಲ್ಲರಿಗೂ ಯೂರಿಯಾ ರಸಗೊಬ್ಬರ ದೊರೆಯುತ್ತದೆ.

ಮರಿಯಪ್ಪ ಕಾತರಕಿ ಗ್ರಾಮದ ರೈತ ರೈತರು ಯೂರಿಯಾ ಪ್ರಮಾಣ ಕಡಿಮೆ ಮಾಡಿ, ಭೂಮಿಯ ಗುಣಮಟ್ಟ ಕಾಯ್ದುಕೊಳ್ಳಲು ನ್ಯಾನೋ ಯೂರಿಯಾ ಬಳಕೆ ಮಾಡಬೇಕು. ಈ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದ್ದೇವೆ.

ಟಿ. ರುದ್ರೇಶಪ್ಪ, ಜೆಡಿ ಕೃಷಿ ಇಲಾಖೆ ಕೊಪ್ಪಳ

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ