-ಜಿಲ್ಲಾ ನ್ಯಾಯಾಧೀಶ ರೋಣ್ ವಾಸುದೇವ್ ಆತಂಕ । ವಿಧಾನ್ ಸೇ ಸಮಾಧಾನ್ ಕಾನೂನು ಅರಿವು ಕಾರ್ಯಕ್ರಮ । ಉಚಿತ ಸಹಾಯವಾಣಿ 15100 ಬಿಡುಗಡೆ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಳವಾಗಿರುವುದು ಕಳವಳಕಾರಿ ಸಂಗತಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ್ ವಾಸುದೇವ ಹೇಳಿದರು.ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ಕಾನೂನು ಸೇವಾ ಪ್ರಾಧಿಕಾರ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾದ ವಿಧಾನ್ ಸೇ ಸಮಾಧಾನ್ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ ಮಹಿಳೆಯರ ಗೌರವಕ್ಕೆ ಚ್ಯುತಿ ಬರದ ಹಾಗೆ ನಡೆದುಕೊಳ್ಳುವಂತೆ ಹೇಳಲಾಗಿದೆ. ಆದಾಗ್ಯೂ ಸಹ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಕಡಿಮೆ ಆಗಿಲ್ಲ. ಮೂಲಭೂತ ಹಕ್ಕುಗಳ ಕೇಳುವ ನಾವು ಮೂಲಭೂತ ಕರ್ತವ್ಯಗಳನ್ನು ಸಹ ಚಾಚು ತಪ್ಪದೇ ಪಾಲಿಸಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಸತಿ ಪದ್ಧತಿ ನಿಷೇಧ ಕಾನೂನು ಜಾರಿಗೆ ತರಲಾಗಿದೆ. ಸ್ವಾತಂತ್ರ್ಯ ನಂತರ ದೇಶದಲ್ಲಿ 16 ಪ್ರಮುಖ ಕಾಯ್ದೆಗಳನ್ನು ಮಹಿಳೆಯರ ಸಬಲೀಕರಣ ಹಾಗೂ ರಕ್ಷಣೆಗಾಗಿ ಜಾರಿಗೆ ತರಲಾಗಿದೆ ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶ ಎಂ.ವಿಜಯ್ ಮಾತನಾಡಿ, ಬ್ಲಾಕ್ ಹಂತದಲ್ಲಿ ಮಹಿಳೆಯರ ಸಬಲೀಕರಣ ಸಲುವಾಗಿ ಸರ್ವೋಚ್ಚ ನ್ಯಾಯಾಲಯದ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದಿಂದ ವಿಧಾನ್ ಸೇ ಸಮಾಧಾನ್ ಎಂಬ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮೊದಲ ಹಂತದಲ್ಲಿ ರಾಷ್ಟ್ರದ ಪ್ರಮುಖ 11 ರಾಜ್ಯಗಳಲ್ಲಿ ಜಾಗೃತಿ ಕಾರ್ಯಕ್ರಮಗಳಿಗೆ ನಡೆಸಲಾಗುತ್ತಿದೆ ಎಂದರು.
ಜಿ.ಪಂ.ಸಿಇಒ ಎಸ್.ಜೆ.ಸೋಮಶೇಖರ್ ಮಾತನಾಡಿ, ವಿಶ್ವ ಸಂಸ್ಥೆ 2030 ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿ, ಮಹಿಳೆಯರ ವಿರುದ್ಧದ ತಾರತಮ್ಯ ತೊಡೆದು ಹಾಕಿ ಲಿಂಗ ಸಮಾನತೆ ತರುವ ಯೋಜನೆ ರೂಪಿಸಿದೆ. ಇದನ್ನು ಸಾಧಿಸಲು ನಮ್ಮ ಮನೋಭಾವದಲ್ಲಿ ಬದಲಾವಣೆ ಮೂಡಬೇಕಿದೆ. ಸಮಾಜದ ಅಂಚಿನಲ್ಲಿರುವ ಮಹಿಳೆಯರನ್ನು ಮುಖ್ಯವಾಹಿನಿಗೆ ತರಬೇಕು. ರಾಜ್ಯ ಸರ್ಕಾರವು ಸಹ ಲಿಂಗ ಸಮಾನತೆ ತರಲು ಅನೇಕ ಕಾರ್ಯಕ್ರಮ ಜಾರಿಗೊಳಿಸಿದೆ ಎಂದರು.
---------------
ಚಿತ್ರದುರ್ಗದಲ್ಲಿ ವಿಧಾನ್ ಸೇ ಸಮಾಧಾನ್ ಕಾನೂನು ಅರಿವು ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಉಚಿತ ಸಹಾಯವಾಣಿ ಸಂಖ್ಯೆ 15100 ಯನ್ನು ಬಿಡುಗಡೆ ಮಾಡಲಾಯಿತು.
ಫೋಟೋ: ಫೈಲ್ ನೇಮ್- 9 ಸಿಟಿಡಿ2