ಖಾಸಗಿ ಆಸ್ಪತ್ರೆಗಳಲ್ಲಿ ಸೀಜರಿನ್‌ ಹೆಚ್ಚಳ, ವರದಿ ನೀಡಿ

KannadaprabhaNewsNetwork | Published : Dec 22, 2024 1:30 AM

ಸಾರಾಂಶ

ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸೀಜರಿನ್‌ ಪ್ರಮಾಣ ಶೇ.46ರಷ್ಟಿದ್ದರೆ, ಖಾಸಗಿ ಆಸ್ಪತ್ರೆಗಳಲ್ಲಿ ಪ್ರಮಾಣ ಶೇ.83ರಷ್ಟಿದೆ.

ಹೊಸಪೇಟೆ: ಖಾಸಗಿ ಆಸ್ಪತ್ರೆಗಳಲ್ಲಿ ಸೀಜರಿನ್‌ ಹೆಚ್ಚಳ, ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಸೂಚಿಸಿದರು.

ನಗರದ ಜಿಲ್ಲಾ ಮತ್ತು ಆರೋಗ್ಯ ಇಲಾಖೆಯ ಸಭಾಂಗಣದಲ್ಲಿ ಶನಿವಾರ ನಡೆದ ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ತಡೆ ಕಾಯ್ದೆ ಕುರಿತ ಜಿಲ್ಲಾ ಮಟ್ಟದ ಪುನರ್‌ ಮನನ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸೀಜರಿನ್‌ ಪ್ರಮಾಣ ಶೇ.46ರಷ್ಟಿದ್ದರೆ, ಖಾಸಗಿ ಆಸ್ಪತ್ರೆಗಳಲ್ಲಿ ಪ್ರಮಾಣ ಶೇ.83ರಷ್ಟಿದೆ. ಇನ್ನು ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಶೇ.100ರಷ್ಟಿದೆ. ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳು ತಕ್ಷಣವೇ ಶೇ.75ಕ್ಕಿಂತ ಹೆಚ್ಚು ಸೀಜರಿನ್‌ ಪ್ರಮಾಣವಿರುವ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ 15 ದಿನಗಳೊಳಗಾಗಿ ವರದಿ ನೀಡಬೇಕು. ಲೋಪ-ದೋಷ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮಜರುಗಿಸಲಾಗುವುದು ಎಂದು ಖಡಕ್ಕಾಗಿ ಸೂಚಿಸಿದರು.

ಪ್ರಸ್ತುತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜಿಲ್ಲೆಯಲ್ಲಿ ಪ್ರತಿ ವರ್ಷ ಸುಮಾರು 24,000 ಹೆರಿಗೆಗಳು ಆಗುತ್ತಿವೆ. ಈ ಪೈಕಿ ಅಂದಾಜು 12,000 ಹೆರಿಗೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಉಳಿದ 12000 ಹೆರಿಗೆಗಳು ಖಾಸಗಿ ಆಸ್ಪತ್ರೆಗಳಲ್ಲಿ ಆಗುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಯಾವ ಕಾರಣಗಳಿಗಾಗಿ ಸೀಜರಿನ್‌ ಪ್ರಮಾಣ ಹೆಚ್ಚಾಗುತ್ತಿದೆ. ಸಾಮಾನ್ಯ ಹೆರಿಗೆಯಾಗುವಂತೆ ಕೈಗೊಳ್ಳಬೇಕಾದ ಕ್ರಮಗಳನ್ನು ಗರ್ಭಿಣಿಯರಿಗೆ ತಿಳಿವಳಿಕೆ ನೀಡಬೇಕು. ಒಂದು ವೇಳೆ ಅನವಶ್ಯಕವಾಗಿ ಸೀಜರಿನ್‌ ಹೆರಿಗೆಗಳು ನಡೆಯುತ್ತಿದ್ದಲ್ಲಿ ಸಂಪೂರ್ಣ ವರದಿಯೊಂದಿಗೆ ನಿಯಮಾನುಸಾರ ಕ್ರಮಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಗರ್ಭಿಣಿಯರಿಗೆ ಸಾಮಾನ್ಯ ಹೆರಿಗೆ ಕುರಿತು ತಿಳಿವಳಿಕೆ ನೀಡುವ ಕಾರ್ಯ ಆಗಬೇಕು. ಒಂದು ನಿರ್ದಿಷ್ಟ ಆಸ್ಪತ್ರೆಯಲ್ಲಿ 103 ಹೆರಿಗೆ ಆಗಿದ್ದು, 103 ಹೆರಿಗೆಗಳು ಸೀಜರಿನ್‌ ಆಗಿವೆ. ಇಂತಹ ಪರಿಸ್ಥಿತಿ ಇರಬಾರದು. ನಾವು ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು. ಏನೇ ಲೋಪ-ದೋಷ ಕಂಡು ಬಂದಲ್ಲಿ ಜಿಲ್ಲಾಡಳಿತ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಿದೆ ಎಂದು ಖಡಕ್ಕಾಗಿ ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಲ್.ಆರ್. ಶಂಕರ್ ನಾಯ್ಕ ಮತ್ತು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಿ. ಜಂಬಯ್ಯ ಮತ್ತು ಖಾಸಗಿ ಆಸ್ಪತ್ರೆ ವೈದ್ಯೆ ಡಾ.ಹೇಮಾವತಿ ಎಂ.ಟಿ.ಪಿ., ರಾಜ್ಯ ಸಂಯೋಜಕ ದೊಡ್ಡನಗೌಡ. ವಿಷಯ ನಿರ್ವಾಹಕ ಎಂ.ಧರ್ಮನಗೌಡ, ತರಬೇತಿಯಲ್ಲಿ ವಿಜಯನಗರ ಜಿಲ್ಲೆಯ ಖಾಸಗಿ ಆಸ್ಪತ್ರೆ ಪ್ರಸೂತಿ ತಜ್ಞರು ಮತ್ತು ರೇಡಿಯಾಲಜಿಸ್ಟ್‌ಗಳು ತರಬೇತಿಯಲ್ಲಿ ಭಾಗವಹಿಸಿದ್ದರು.

ಹೊಸಪೇಟೆಯಲ್ಲಿ ಶನಿವಾರ ನಡೆದ ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ತಡೆ ಕಾಯ್ದೆ ಕುರಿತ ಜಿಲ್ಲಾ ಮಟ್ಟದ ಪುನರ್‌ ಮನನ ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಚಾಲನೆ ನೀಡಿದರು.

Share this article