ಸಿಹಿ ಸುದ್ದಿ - ಕೊಬ್ಬರಿ ಬೆಂಬಲ ಬೆಲೆ 420 ರು. ಹೆಚ್ಚಳ : ಕರ್ನಾಟಕ ರೈತರ ಬೇಡಿಕೆಗೆ ಮೋದಿ ಸ್ಪಂದನೆ

ಸಾರಾಂಶ

2025ನೇ ಸಾಲಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಕ್ವಿಂಟಲ್‌ಗೆ 420 ರು.ನಷ್ಟು ಹೆಚ್ಚಿಸಲಾಗಿದ್ದು, 12,100 ರು.ಗೆ ಹೆಚ್ಚಿಸಿರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ. ಇದಕ್ಕಾಗಿ 855 ಕೋಟಿ ರು. ತೆಗೆದಿರಿಸಲಾಗಿದೆ.

ನವದೆಹಲಿ : 2025ನೇ ಸಾಲಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಕ್ವಿಂಟಲ್‌ಗೆ 420 ರು.ನಷ್ಟು ಹೆಚ್ಚಿಸಲಾಗಿದ್ದು, 12,100 ರು.ಗೆ ಹೆಚ್ಚಿಸಿರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ. ಇದಕ್ಕಾಗಿ 855 ಕೋಟಿ ರು. ತೆಗೆದಿರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡಿದೆ.

ಕೊಬ್ಬರಿ ಬೆಲೆ ಹೆಚ್ಚಿಸಿ ಎಂದು ಕರ್ನಾಟಕದ ರೈತರು, ಅದರಲ್ಲೂ ವಿಶೇಷವಾಗಿ ಕಲ್ಪತರು ನಾಡು ತುಮಕೂರು ಜಿಲ್ಲೆಯ ತಿಪಟೂರು ರೈತರು ಬೇಡಿಕೆ ಇಟ್ಟಿದ್ದರು. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಕೂಡ ಮನವಿ ಮಾಡಿದ್ದರು. ಇದಕ್ಕೆ ಕೇಂದ್ರ ಸರ್ಕಾರ ಓಗೊಟ್ಟಿದೆ.

ಎಷ್ಟು ಹೆಚ್ಚಳ?:  2025ಕ್ಕೆ ‘ಮಿಲ್ಲಿಂಗ್ ಕೊಬ್ಬರಿ’ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 420 ರು.ನಷ್ಟು ಜಾಸ್ತಿ ಮಾಡಿ 11,582 ರು.ಗೆ ಹೆಚ್ಚಿಸಲಾಗಿದೆ. ಇನ್ನು ಉಂಡೆ ಕೊಬ್ಬರಿಗೆ ಕ್ವಿಂಟಲ್‌ಗೆ 100 ರು. ನಷ್ಟು ಹೆಚ್ಚಿಸಿ 12,100 ರು.ಗೆ ಏರಿಸಲಾಗಿದೆ.

ಸಹಕಾರಿ ಏಜೆನ್ಸಿಗಳಾದ ನಾಫೆಡ್ ಮತ್ತು ಎನ್‌ಸಿಸಿಎಫ್ ಕೊಬ್ಬರಿ ಖರೀದಿಗೆ ಕೇಂದ್ರ ನೋಡಲ್ ಏಜೆನ್ಸಿಗಳಾಗಿರುತ್ತವೆ ಎಂದು ಕೇಂದ್ರ ವಾರ್ತಾ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.

ಸರ್ಕಾರವು 2014ರಿಂದ 2025ರ ನಡುವಿನ ಅವಧಿಯಲ್ಲಿ ಮಿಲ್ಲಿಂಗ್ ಕೋಬ್ರಾ ಬೆಂಬಲ ಬೆಲೆಯನ್ನು 5250 ರು.ನಷ್ಟು ಹಾಗೂ ಉಂಡೆ ಕೊಬ್ಬರಿ ದರವನ್ನು 5500 ರು.ನಷ್ಟು ಹೆಚ್ಚಿಸಿದೆ. ಇದು ಶೇ.120ರಷ್ಟು ಹೆಚ್ಚಳ ಎಂದು ಅವರು ಹೇಳಿದ್ದಾರೆ.

Share this article