ಕನ್ನಡಪ್ರಭ ವಾರ್ತೆ, ತುಮಕೂರು
ಸ್ಲಂ ಜನಾಂದೋಲನ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶುಕ್ರವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಸಕ್ತ ಸಂದರ್ಭದಲ್ಲಿ ದುಡಿಯುವ ಮಹಿಳೆಯರ ಸವಾಲುಗಳು ಮತ್ತು ಸಂವಿಧಾನ ಎಂಬ ವಿಚಾರದ ವಿಭಾಗೀಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶರು, ಕುಟುಂಬದ ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದರೆ ಹಲವು ಸಮಸ್ಯೆಗಳಿಗೆ ಮನೆಯಲ್ಲೇ ಪರಿಹಾರ ದೊರೆಯುತ್ತದೆ ಎಂದರು.
ತುಮಕೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಮೂರೂವರೆ ಸಾವಿರ ಕೌಟುಂಬಿಕ ವಿವಾದ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಕೌಟುಂಬಿಕ ಸಮಸ್ಯೆಗಳಿಗೆ ದೊಡ್ಡ ಕಾರಣಗಳಿರುವುದಿಲ್ಲ. ಸಣ್ಣ ವಿಚಾರಗಳೂ ದೊಡ್ಡದಾಗಿ ನ್ಯಾಯಾಲಯ ದ ಮೆಟ್ಟಿಲು ಏರುವಂತಾಗಿದೆ. ಇದಕ್ಕೆ ಮುಖ್ಯ ಕಾರಣ, ಗಂಡ, ಅತ್ತೆ, ಸೊಸೆ ಮುಂತಾದವರು ಕೇವಲ ಪಾತ್ರವಾಗದೆ, ಜವಾಬ್ದಾರಿಯುತ ವ್ಯಕ್ತಿತ್ವವಾಗಿ ರೂಪುಗೊಳ್ಳಬೇಕು. ತಂದೆ-ತಾಯಿ ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಮನೆಯ ಲ್ಲಿ ಮಕ್ಕಳು ಅವರನ್ನು ಅನುಕರಿಸುತ್ತಾರೆ. ಮಕ್ಕಳು ಬಯಸುವಂತಹ ವ್ಯಕ್ತಿತ್ವ ತಂದೆ-ತಾಯಿ ಬೆಳೆಸಿಕೊಳ್ಳಬೇಕಾಗುತ್ತದೆ. ಎಷ್ಟು ಜನ ಪೋಷಕರಿಗೆ ನೀವೂ ನಮ್ಮಂತೆ ಆಗಿರಿ ಎಂದು ಮಕ್ಕಳಿಗೆ ಹೇಳುವ ಧೈರ್ಯವಿದೆ ಹೇಳಿ ಎಂದು ಪ್ರಶ್ನಿಸಿದರು.ಮಹಿಳೆಯರನ್ನು ಮತದಾನದ ಹಕ್ಕಿನಿಂದ, ಶಿಕ್ಷಣದಿಂದ ದೂರವಿಡುತ್ತಿದ್ದ ಕಾಲವಿತ್ತು. ಮಹಿಳೆಯ ಶೋಷಣೆ ಹೆಚ್ಚಾಗಿ ನಡೆ ಯುತ್ತಿದ್ದವು. ಹಲವರ ಹೋರಾಟಗಳ ನಂತರ ಮಹಿಳೆಯರ ರಕ್ಷಣೆಗೆ ಕಾನೂನುಗಳು ಜಾರಿಗೆ ಬಂದಿವೆ. ಸಂವಿಧಾನ ಮಹಿಳೆಯರಿಗೆ ಸಮಾನ ಹಕ್ಕು ನೀಡಿದೆ. ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸಮರ್ಥವಾಗಿ ದುಡಿಯುತ್ತಿದ್ದಾರೆ. ದುಡಿಯುವ ಸ್ಥಳದಲ್ಲಿ ಮಹಿಳೆ ಮೇಲೆ ಆಗುವ ಶೋಷಣೆ ತಡೆಗೆ 2013ರಲ್ಲಿ ಕಾನೂನು ಜಾರಿಗೆ ಬಂದಿದೆ ಎಂದರು.
ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ಕೊಳಗೇರಿ ಹಿತರಕ್ಷಣಾ ಸಮಿತಿ, ಸ್ಲಂ ಜನಾಂದೋಲನದ ಹೋರಾಟ ಮೂಲಕ ಕೊಳೆಗೇರಿ ನಿವಾಸಿಗಳಿಗೆ ಸಿಗಬೇಕಾದ ಸವಲತ್ತುಗಳನ್ನು ಸರ್ಕಾರದಿಂದ ದೊರಕಿಸಿಕೊಡಲು ಸಾಧ್ಯವಾಯಿತು. ಇದರ ಫಲವಾಗಿ ದಿಬ್ಬೂರು, ಮಾರಿಯಮ್ಮ ನಗರದಲ್ಲಿ ವಸತಿ ಸಂಕೀರ್ಣ ನಿರ್ಮಾಣವಾದವು. ಇನ್ನೂ ಅನೇಕ ವಸತಿ ರಹಿತ ಕುಟುಂಬಗಳಿಗೆ ಸರ್ಕಾರ ನಿವೇಶನ ನೀಡಬೇಕು ಎಂದು ಸತತ ಹೋರಾಟ ಮಾಡುತ್ತಿದ್ದು, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಸಾಧ್ಯವಾಗದೆ ಹೋರಾಟ ಮುಂದುವರೆದಿದೆ ಎಂದರು.
ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮತಿ ಅಧ್ಯಕ್ಷೆ ಅನುಪಮಾ ನರಸಿಂಹಮೂರ್ತಿ, ಕಾರ್ಯದರ್ಶಿ ಟಿ.ಜಿ. ಅರುಣ್, ಸಾವಿತ್ರಿಬಾಯಿ ಪುಲೆ ಮಹಿಳಾ ಸಂಘಟನೆಗಳ ಕಾವೇರಿ, ಸುಧಾ, ಮಹಿಳಾ ಸಾಂತ್ವನ ಕೇಂದ್ರದ ಪಾರ್ವತಮ್ಮ ರಾಜಕುಮಾರ್, ಮಾತಂಗಿ ಮಹಿಳಾ ಸಂಘಟನೆಯ ಶಾರದಮ್ಮ, ಗುಲ್ನಾಜ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.