ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ಸಿಗಲಿ: ಕೆ.ಎಂ. ಮಲ್ಲಿಕಾರ್ಜುನ

KannadaprabhaNewsNetwork |  
Published : Feb 21, 2025, 11:47 PM IST
ಮ | Kannada Prabha

ಸಾರಾಂಶ

ಮಾಸಣಗಿ ಗ್ರಾಮ ಪಂಚಾಯಿತಿ ಆವರಣದಲ್ಲಿ ತಾಲೂಕು ಪಂಚಾಯಿತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಜಲ ಸಂಜೀವಿನಿ ಯೋಜನೆಯಡಿಯಲ್ಲಿ 196 ಎಕರೆ ರೈತರ ವೈಯಕ್ತಿಕ ಭೂಮಿಯಲ್ಲಿ ಜಲಾನಯನ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬ್ಯಾಡಗಿ: ಒಟ್ಟು ಮಳೆಯಾದ ಕೇವಲ ಶೇ. 17 ರಷ್ಟು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇಲ್ಲಿಯವರೆಗೂ ಹೊಂದಿದ್ದು, ಕೆರೆ, ಕಟ್ಟೆ, ಬಾವಿ, ಅಣೆಕಟ್ಟು ಸೇರಿದಂತೆ ಅಂತರ್ಜಲ ಹೆಚ್ಚಳ ಮಾಡುವ ಮೂಲಕ ಶೇ. 50ಕ್ಕಿಂತ ಹೆಚ್ಚು ನೀರು ಸಂಗ್ರಹ ಮಾಡಿಟ್ಟುಕೊಳ್ಳದಿದ್ದರೆ ಬರುವ ದಿನಗಳಲ್ಲಿ ಜಲಕ್ಷಾಮ ಎದುರಿಸಬೇಕಾಗುತ್ತದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ ಎಚ್ಚರಿಸಿದರು.

ಮಾಸಣಗಿ ಗ್ರಾಮ ಪಂಚಾಯಿತಿ ಆವರಣದಲ್ಲಿ ತಾಲೂಕು ಪಂಚಾಯಿತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಜಲ ಸಂಜೀವಿನಿ ಯೋಜನೆಯಡಿಯಲ್ಲಿ 196 ಎಕರೆ ರೈತರ ವೈಯಕ್ತಿಕ ಭೂಮಿಯಲ್ಲಿ ಜಲಾನಯನ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬಿದ್ದಂತ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಾಮೂಹಿಕ ಹೊಣೆಗಾರಿಕೆ ತೋರದಿದ್ದರೆ ಬಹುದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದರು.

ಉದ್ಯೋಗ ಖಾತ್ರಿಗೆ ಒಳಪಡಿಸಿಕೊಳ್ಳಿ: ಮಹಾತ್ಮ ಗಾಂಧೀಜಿ ರಾಷ್ಟ್ರಿಯ ಉದ್ಯೋಗ ಖಾತ್ರಿ ಅಡಿಯಲ್ಲಿ ರೈತರು ಆಸಕ್ತಿ ತೋರಿಸಬೇಕಾಗಿದೆ. ನಿಂತ ನೀರನ್ನು ಭೂಮಿಯಲ್ಲಿ ಇಂಗುವಂತೆ ನೋಡಿಕೊಳ್ಳುವುದೂ ಕೃಷಿಕರ ಜವಾಬ್ದಾರಿ. ಜಲಾನಯನ ಪ್ರದೇಶ ಅಭಿವೃದ್ಧಿ ಯೋಜನೆ ಅಳವಡಿಸಿಕೊಳ್ಳುವ ಮೂಲಕ ನಮ್ಮ ಕೃಷಿ ಭೂಮಿಗಳನ್ನು ಉಪಚರಿಸಿಕೊಳ್ಳಬೇಕಾಗಿದೆ. ಮಣ್ಣು, ನೀರು ಸಂರಕ್ಷಣೆ ಮಾಡಲು ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸರ್ಕಾರದ ಜತೆಗೆ ಕೈಜೋಡಿಸಿದ್ದು ಸ್ವಾಗತಾರ್ಹ ಎಂದರು.

ಮೇಲ್ಮಣ್ಣು ರಕ್ಷಿಸಿಕೊಳ್ಳಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗಣೇಶ ಕಮ್ಮಾರ ಮಾತನಾಡಿ, ಜಲಾನಯನ ಯೋಜನೆಯಲ್ಲಿ ಅಂತರ್ಜಲ ಹೆಚ್ಚಿಸಿ ಫಲವತ್ತಾದ ಮೇಲ್ಮಣ್ಣು ರಕ್ಷಣೆಯೊಂದಿಗೆ ಭೂಮಿ ತೇವಾಂಶ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕೃಷಿ, ಅರಣ್ಯ, ತೋಟಗಾರಿಕೆ ಸೇರಿದಂತೆ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯ ಸಹಕಾರದೊಂದಿಗೆ ಜಲಾನಯನ ಪ್ರದೇಶವನ್ನು ಗುರುತಿಸಿಕೊಳ್ಳುವಂತೆ ಸಲಹೆ ನೀಡಿದ ಅವರು, ನರೇಗಾ ಯೋಜನೆ ಅಡಿ ಸುಮಾರು ₹27 ಲಕ್ಷ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದ್ದು, ಗುಂಪುಗಳನ್ನು ರಚನೆ ಮಾಡಿ ಪ್ರಸಕ್ತ ವರ್ಷದಲ್ಲಿ ಕಾಮಗಾರಿ ಪ್ರಾರಂಭಿಸಲು ರೈತರಿಗೆ ಸಲಹೆ ನೀಡಿದರು.

ಅಂತರ್ಜಲ ಹೆಚ್ಚಳಕ್ಕೆ ಕ್ರಮ: ತಾಪಂ ಸಹಾಯಕ ನಿರ್ದೇಶಕ ಪರಶುರಾಮ ಅಗನಸಹಳ್ಳಿ ಮಾತನಾಡಿ, ಜಲಾನಯನ ಪ್ರದೇಶದ ರೈತರ ಜಮೀನಿನಲ್ಲಿ ಬದುಗಳ ನಿರ್ಮಾಣ, ಕಲ್ಲಿನ ಕೋಡಿ, ಜಲಾನಯನ ಪ್ರದೇಶದ ಮಧ್ಯ ಹಾಗೂ ಕೆಳಭಾಗದಲ್ಲಿ ಕೃಷಿ ಹೊಂಡ ನಿರ್ಮಾಣ, ಕೊಳವೆಭಾವಿಗಳಿಗೆ ಅಂತರ್ಜಲ ಹೆಚ್ಚಳಕ್ಕೆ ಮರುಪೂರಣ ಗುಂಡಿಗಳ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಕೈಗೊಳ್ಳಲು ಸಲಹೆ ನೀಡಿದರು.

ಸಾವಯವ ಕೃಷಿ ಪದ್ಧತಿ: ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಖ್ಯಸ್ಥ ಎಸ್.ಡಿ. ಬಳಿಗಾರ ಮಾತನಾಡಿ, ದೇಶಿ ಬೀಜಗಳ ಉತ್ಪಾದನೆ ಹಾಗೂ ಸಂರಕ್ಷಣೆ ಸಲುವಾಗಿ ಸಂಸ್ಥೆಯು ರೈತರ ಕೃಷಿ ಭೂಮಿಗಳಲ್ಲಿ ರಾಗಿ, ನವಣೆ, ಉದ್ದು, ಹೆಸರು ಬೆಳೆಯಲು ಆದ್ಯತೆ ನೀಡುತ್ತಿದೆ. ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ರೈತರು ಕೃಷಿ ಚಟವಟಿಕೆಗಳ ಮೇಲಿನ ವೆಚ್ಚಕ್ಕೆ ಕಡಿವಾಣ ಹಾಕಿಕೊಳ್ಳುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ರೇಣುಕಾ ತಗಡಿನಮನಿ, ಉಪಾಧ್ಯಕ್ಷ ನೀಲಗಿರಿಯಪ್ಪ ಕಾಕೋಳ, ಐಇಸಿ ಸಂಯೋಜಕ ಅಕ್ಷಯ ದೇಶಪಾಂಡೆ, ಕೃಷಿ ಇಲಾಖೆಯ ತಾಂತ್ರಿಕ ಸಹಾಯಕ ಅರುಣ, ಗಾಯತ್ರಿ ಪಾಲ್ಗೊಂಡಿದ್ದರು. ಪಿಡಿಒ ಪ್ರವೀಣ್ ಬಿಜ್ಜೂರ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭ್ರಷ್ಟಾಚಾರಕ್ಕೆ ಅಂತ್ಯ ಹಾಡಿದಜಿ ರಾಮ್‌ ಜಿ: ಡಾ। ಸುಧಾಕರ್‌
ದೂರು ಕೊಡಲು ಹೋದವರ ಮೇಲೆಯೇ ಪೊಲೀಸರ ದರ್ಪ