ಕನ್ನಡಪ್ರಭವಾರ್ತೆ ತೀರ್ಥಹಳ್ಳಿ
ತೀರ್ಥಹಳ್ಳಿ ಡಾಕ್ಟರ್ಸ್ ಅಸೋಸಿಯೇಷನ್‍ನ ಬೆಳ್ಳಿಹಬ್ಬದ ಅಂಗವಾಗಿ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಬೆಳ್ಳಿ ಹಬ್ಬದ ಸಲುವಾಗಿ ಹೊರ ತಂದ ವಿಶೇಷ ಅಂಚೆಚೀಟಿ ಬಿಡುಗಡೆಗೊಳಿಸಿ ಹೃದಯ ಹಾಗೂ ಜೀವನಶೈಲಿಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಹೃದಯರೋಗಕ್ಕೆ ಮುಖ್ಯ ಕಾರಣವಾಗಿರುವ ರಕ್ತದೊತ್ತಡ ಮತ್ತು ಮಧುಮೇಹಿಗಳ ಸಂಖ್ಯೆಯೂ ಹೆಚ್ಚುತ್ತಿದ್ದು ಮಧುಮೇಹದಿಂದ ಪ್ರಸ್ಥುತ ದೇಶದಲ್ಲಿ 15 ಕೋಟಿ ಜನರು ಬಳಲುತ್ತಿದ್ದು ಅಷ್ಠೇ ಸಂಖ್ಯೆಯ ಜನರು ಈ ರೋಗದ ಅಂಚಿಗೆ ತಲುಪಿದ್ದಾರೆ. ಈಚಿನ ವರ್ಷಗಳಲ್ಲಿ ಎಳೆಯ ಪ್ರಾಯದವರಲ್ಲಿ ಹಾಗೂ ಮಹಿಳೆಯರಲ್ಲಿ ಕೂಡ ಹೃದಯಾಘಾತ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.ಬಿಪಿ ಶುಗರ್ ಮುಂತಾದ ಸಮಸ್ಯೆಗಳಿಗೆ ಬಹುಮುಖ್ಯವಾಗಿ ಧೂಮಪಾನ ಮತ್ತು ಮದ್ಯಪಾನ ಆಹಾರ ಮತ್ತು ಸೋಮಾರಿತನದ ಜೀವನಶೈಲಿ ಕಾರಣವಾಗಿದೆ. ನಮ್ಮ ಭಾವನೆ ಅಪೇಕ್ಷೆಗಳು ಕೂಡಾ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಮರೆಯಬಾರದು. ಜೀವನದಲ್ಲಿ ಸಂತೋಷ ಮಾನಸಿಕ ನೆಮ್ಮದಿಗಳೇ ಆರೋಗ್ಯಕ್ಕೆ ಪೂರಕವಾದ ಅಂಶಗಳಾಗಿವೆ ಎಂದರು.
ಸೋಮಾರಿತನ ಮನುಷ್ಯನ ಮೊದಲ ಶತ್ರುವಾಗಿದ್ದು ಪೌಷ್ಟಿಕಾಂಶದ ಕೊರತೆಯೂ ಹೃದಯಸ್ತಂಭನಕ್ಕೆ ಕಾರಣವಾಗುವ ಸಾಧ್ಯತೆ ಇದೆ. ದೇಶದಲ್ಲಿ 22 ಕೋಟಿ ಜನರಿಗೆ ರಕ್ತದೊತ್ತಡ ಇದ್ದು 15 ಲಕ್ಷ ರೋಗಿಗಳು ಕ್ಯಾನ್ಸರ್‌ನಿಂದ ನರಳುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗಳ ಅಭಿವೃದ್ದಿ ಇಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ. ಕರ್ನಾಟಕ ರಾಜ್ಯದಲ್ಲಿ ಮದ್ಯಪಾನಿಗಳ ಸಂಖ್ಯೆ ಆತಂಕಕಾರಿಯಾಗಿ ಏರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಬೆಂಗಳೂರಿನ ನೆಪ್ರೋಯೂರಾಲಜಿ ಇನ್‌ಸ್ಟಿಟ್ಯೂಟ್ ಸ್ಥಾಪಕ ನಿರ್ದೆಶಕ ಡಾ.ಜಿ.ಕೆ.ವೆಂಕಟೇಶ್ ಡಾಕ್ಟರ್ಸ್ ಅಸೋಸಿಯೇಷನ್ ವತಿಯಿಂದ ಹೊರತಂದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ, ಈ ತಾಲೂಕಿನಲ್ಲಿ ಮೊದಲಿಗೆ ಆರೋಗ್ಯ ಸೇವೆಯನ್ನು ಆರಂಭಿಸಿದವರು ಮಿಷನರಿಗಳು. ಹೀಗೇ ಮಂಡಗದ್ದೆಯಲ್ಲಿ ಆರಂಭವಾದ ಆರೋಗ್ಯ ಸೇವೆ ಪ್ರಸ್ತುತ ಶಿವಮೊಗ್ಗದಲ್ಲಿ ಮೆಡಿಕಲ್ ಕಾಲೇಜಿನ ಹಂತಕ್ಕೆ ಏರಿದೆ. ಈ ತಾಲೂಕಿನಲ್ಲಿ ಪ್ರಸ್ತುತ ಎಲ್ಲಾ ವಿಧದ ಆರೋಗ್ಯ ಸೌಲಭ್ಯಗಳು ದೊರೆಯುತ್ತಿದ್ದು ಹಲವಾರು ಮಂದಿ ಹಿರಿಯರು ಸಲ್ಲಿಸಿದ ಸೇವೆ ಸ್ಮರಣೀಯವಾಗಿದೆ ಎಂದರು.
ಇದೇ ವೇಳೆ ಹಿರಿಯ ವೈದ್ಯರಾದ ಡಾ. ಟಿ.ನಾರಾಯಣ ಸ್ವಾಮಿ ಮತ್ತು ಡಾ.ಪಿ.ಎಸ್.ಉಪಾಧ್ಯಾಯರನ್ನು ಗೌರವಿಸಲಾಯಿತು.ಸಭಾ ಕಾರ್ಯಕ್ರಮಕ್ಕೆ ಮುನ್ನ ಹೃದಯ ಮತ್ತು ಶ್ವಾಸಕೋಶ ಸ್ಥಂಭನವಾದಾಗ ನೀಡುವ ತುರ್ತುಚಿಕಿತ್ಸೆಯ ಕುರಿತು ತಜ್ಞರಿಂದ ಆಶಾ ಕಾರ್ಯಕರ್ತೆಯರು ಪೊಲಿಸ್ ಮತ್ತು ಅಗ್ನಿಶಾಮಕದಳ ಸಿಬ್ಬಂದಿಗಳಿಗೆ ತರಬೇತಿ, ಸೀಳುಬಾಯಿ ಮತ್ತು ಸೀಳ್ತುಟಿ ಭಾದಿತರ ಪತ್ತೆ ಹಾಗೂ ಚಿಕಿತ್ಸೆ ಮಾಹಿತಿ ಕಾರ್ಯಾಗಾರ ಮತ್ತು ರೋಟರಿ ಬ್ಲಡ್ ಬ್ಯಾಂಕಿನಲ್ಲಿ ಬ್ಲಡ್ ಕಾಂಪೋನೆಂಟ್ಸ್ ಸಪರೇಶನ್ ಯೂನಿಟ್ಟಿನ ಉದ್ಘಾಟನೆಯನ್ನು ನೆರೆವೇರಿಸಲಾಯಿತು.
ಡಾಕ್ಟರ್ಸ್ ಅಸೋಸಿಯೇಷನ್ ಚೇರ್‍ಮನ್ ಡಾ. ಎನ್.ಎಸ್.ಮನೋಹರರಾವ್, ಅಸೋಸಿಯೇಷನ್ ಅಧ್ಯಕ್ಷ ಡಾ. ಶ್ರೀಕಾಂತ್, ಶಾಸಕ ಆರಗ ಜ್ಞಾನೇಂದ್ರ, ರೋ.ಡಾ.ಪಿ.ನಾರಾಯಣ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಡಾ.ಬಿ.ಜಿ.ನಂದಕಿಶೋರ್, ಡಾ.ಸತ್ಯನಾರಾಯಣ, ಡಾ.ಭರತ್, ಡಾ.ಸುಮೇಧ, ಡಾ. ರವಿಶಂಕರ್ ಉಡುಪ ಇದ್ದರು.