ಕೆಆರ್ ಎಸ್ ಗೆ ಒಳ ಹರಿವು ಹೆಚ್ಚಳ, ಕಾವೇರಿ ನದಿಗೆ ನೀರು ಬಿಡುಗಡೆ: ಎನ್. ಚಲುವರಾಯಸ್ವಾಮಿ

KannadaprabhaNewsNetwork |  
Published : Jul 21, 2024, 01:16 AM IST
20ಕೆಎಂಎನ್ ಡಿ16 | Kannada Prabha

ಸಾರಾಂಶ

ಕಾವೇರಿ ನದಿಗೆ ಹೆಚ್ಚು ನೀರು ಬಿಡುವುದರಿಂದ ನದಿ ಪಾತ್ರದ ಸುಮಾರು 90ಕ್ಕೂ ಹೆಚ್ಚು ಗ್ರಾಮಗಳಿಗೆ ಪ್ರವಾಹ ಭೀತಿಯಿದ್ದು, ಎಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿ ಜಿಲ್ಲೆಯ ಹಿರಿಯ ಅಧಿಕಾರಿಗಳು ವಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಕೆಆರ್‌ಎಸ್ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಮುಂಜಾಗೃತ ಕ್ರಮವಾಗಿ ಅಣೆಕಟ್ಟೆಯಿಂದ ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಬಿಡಲಾಗುತ್ತಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಾಶಯಕ್ಕೆ 50 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರು ಬರುತ್ತಿದೆ. ಭಾನುವಾರದೊಳಗೆ ಅಣೆಕಟ್ಟೆ ನೀರಿನ ಮಟ್ಟ 122 ಅಡಿ ತಲುಪಲಿದೆ ಎಂದು ಹೇಳಿದರು.

ಒಳ ಹರಿವಿನಲ್ಲಿ ಇನ್ನೂ ಹೆಚ್ಚಾಗುವ ಎಲ್ಲಾ ಲಕ್ಷಣಗಳು ಇರುವುದರಿಂದ ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ನೀರನ್ನು ನದಿಗೆ ಬಿಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಒಳ ಹರಿವು 70 ಸಾವಿರ ಕ್ಯುಸೆಕ್ ಗೆ ಹೆಚ್ಚುವ ಸಂಭವವಿದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು.

ಕಾವೇರಿ ನದಿಗೆ ಹೆಚ್ಚು ನೀರು ಬಿಡುವುದರಿಂದ ನದಿ ಪಾತ್ರದ ಸುಮಾರು 90ಕ್ಕೂ ಹೆಚ್ಚು ಗ್ರಾಮಗಳಿಗೆ ಪ್ರವಾಹ ಭೀತಿಯಿದ್ದು, ಎಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿ ಜಿಲ್ಲೆಯ ಹಿರಿಯ ಅಧಿಕಾರಿಗಳು ವಹಿಸಿದ್ದಾರೆ ಎಂದರು.

ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ನದಿ ಪಾತ್ರದ ಜನತೆಗೆ ಸೂಕ್ತ ರಕ್ಷಣೆ ಮತ್ತು ಸೂಕ್ತ ಮಾಹಿತಿ ನೀಡವಂತೆ ಸೂಚಿಸಲಾಗಿದೆ ಹಾಗೂ ಕಂಟ್ರೋಲ್‌ರೂಂ ಸ್ಥಾಪನೆ, ಜಾಗೃತಿ ಪ್ರಚಾರ ಸಮಿತಿ, ನೂಡಲ್ ಅಧಿಕಾರಿಗಳ ನೇಮಕ, ಕಾಳಜಿ ಕೇಂದ್ರ ತೆರೆಯುವುದು ಸೇರಿ ಸಾರ್ವಜನಿಕರ ಸುರಕ್ಷತೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.

ಕೆಆರ್‌ಎಸ್ ನಿಂದ 1 ಲಕ್ಷಕ್ಕೂ ಹಚ್ಚು ಕ್ಯುಸೆಕ್ ನೀರನ್ನು ಬಿಟ್ಟರೂ ನದಿ ಪಾತ್ರದ ಜನತೆಗೆ ಆಗುವ ಎಲ್ಲಾ ತೊಂದರೆಯನ್ನು ನಿಭಾಯಿಸಲು ಸರ್ವ ರೀತಿಯಿಂದಲೂ ಜಿಲ್ಲಾಡಳಿತ ಸಜ್ಜಾಗಿದೆ. ಜಿಲ್ಲೆಯ ಜನತೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಕಿವಿಮಾತು ಹೇಳಿದರು.

ಕಬಿನಿ ಜಲಾಶಯದಿಂದ ಈಗಾಗಲೇ 50 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರು ಬಿಡಲಾಗಿದೆ. ಕೆಆರ್ ಎಸ್ ನಿಂದಲೂ 1 ಲಕ್ಷ ಕ್ಯುಸೆಕ್ ನೀರು ಬಿಡುವ ಸನ್ನಿವೇಶ ಸೃಷ್ಟಿಯಾದರೆ ಬಿಳಿಗುಂಡ್ಲುವಿನಲ್ಲಿ ಅಷ್ಟೂ ನೀರು ಒಮ್ಮೆಲೆ ಮುಂದೆಹೋಗಲು ಸಾಧ್ಯವಿಲ್ಲ. ಇದರ ಪರಿಣಾಮದಿಂದ ನೀರು ನದಿಯಲ್ಲಿ ಹಿಂದಕ್ಕೆ ಚಾಚಿ ನಿಲ್ಲಲಿದೆ. ಇದರಿಂದ ನದಿ ಪಾತ್ರದ ರೈತರ ಹೊಲ ಗದ್ದೆಗಳಿಗೆ ನುಗ್ಗುವ ಅಪಾಯಗಳಿವೆ. ರೈತರು ಎಚ್ಚರಿಕೆಯಿಂದ ಇರಬೇಕು ಎಂದರು.

ಹೇಮಾವತಿ ನದಿಯಿಂದಲೂ ನೀರು ಬಿಡುಗಡೆ:

ಹಾಸನ ಜಿಲ್ಲೆಯ ಸಕಲೇಶಪುರ ಆಸುಪಾಸಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಹೇಮಾವತಿ ಜಲಾಶಯವೂ ಭರ್ತಿಯಾಗಲಿದೆ. ಅಣೆಕಟ್ಟೆ ಸುರಕ್ಷತೆಯಿಂದ ನೀರನ್ನು ಹೊರ ಬಿಡಲಾಗುವುದು.ಹೇಮಾವತಿ ಅಣೆಕಟ್ಟೆಯಿಂದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿ ಕೆರೆ ಕಟ್ಟೆ ತುಂಬಿಸಲು 4500 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ ಎಂದು ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ತಹಸೀಲ್ದಾರ್ ನಯೀಉನ್ನೀಸಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ