ಮಂಡ್ಯ ಮಂಜುನಾಥ
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೆಳವಣಿಗೆಗಾಗಿ ಕೇಂದ್ರ ಸರ್ಕಾರ ಹಾಲಿ ಇರುವ ಎಂಬಿಬಿಎಸ್ ಪದವಿ ಹಾಗೂ ಸ್ನಾತಕೋತ್ತರ ಪದವಿ ಸೀಟುಗಳ ಸಂಖ್ಯೆ ಹೆಚ್ಚಿಸುವುದಕ್ಕೆ ಗ್ರೀನ್‌ಸಿಗ್ನಲ್ ಕೊಟ್ಟಿದೆ. ಸೀಟುಗಳ ಹೆಚ್ಚಳಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಜಾಗದ ಕೊರತೆ ಬಹಳವಾಗಿ ಕಾಡುತ್ತಿದೆ.
ಪ್ರಸ್ತುತ ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಒಟ್ಟು ೧೫೦ ಎಂಬಿಬಿಎಸ್ ಸೀಟುಗಳಿವೆ. ಈಗ ಅದನ್ನು ೨೦೦ಕ್ಕೆ ಹೆಚ್ಚಿಸಲು ಸಲ್ಲಿಸಿದ್ದ ಪ್ರಸ್ತಾವಕ್ಕೆ ಕೇಂದ್ರ ಹಸಿರು ನಿಶಾನೆ ತೋರಿಸಿದೆ. ಅದೇ ರೀತಿ ಸ್ನಾತಕೋತ್ತರ ಪದವಿಗೂ ೨೩ ಹೆಚ್ಚುವರಿ ಸೀಟುಗಳನ್ನು ನೀಡಲು ಸಮ್ಮತಿಸಿದೆ. ೫೦ ಎಂಬಿಬಿಎಸ್ ಪದವಿ ಸೀಟುಗಳ ಹೆಚ್ಚಳಕ್ಕೆ ೪೫ ಕೋಟಿ ರು. ಹಾಗೂ ೨೩ ಪಿಜಿ ಸೀಟುಗಳ ಹೆಚ್ಚಳಕ್ಕೆ ೩೪.೫ ಕೋಟಿ ರು.ಗಳನ್ನು ಭರಿಸಲು ಸಿದ್ಧವಿದೆ.ಇದು ಕೇಂದ್ರ ಸರ್ಕಾರದಿಂದ ಸಿಗುವ ಶೇ.೬೦ರಷ್ಟು ಅನುದಾನವಾಗಿದ್ದರೆ, ರಾಜ್ಯ ಸರ್ಕಾರದ ಶೇ.೪೦ರಷ್ಟು ಅನುದಾನವೂ ಮಂಡ್ಯ ಮೆಡಿಕಲ್ ಕಾಲೇಜಿಗೆ ಸಿಗಲಿದೆ. ಹೆಚ್ಚುವರಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಪೀಠೋಪಕರಣಗಳು, ಲೆಕ್ಚರರ್ ಹಾಲ್, ಪ್ರಯೋಗಾಲಯ ಉಪಕರಣಗಳು, ಸಲಕರಣೆಗಳು ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಅನಿವಾರ್ಯವಾಗಿದೆ. ಈಗಿರುವ ಸ್ಥಳದಲ್ಲಿ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಕಷ್ಟಸಾಧ್ಯವಿರುವುದರಿಂದ ಹೆಚ್ಚುವರಿ ಜಾಗಕ್ಕೆ ಹುಡುಕಾಟ ನಡೆಸಲಾಗುತ್ತಿದೆ.
ಆಸ್ಪತ್ರೆ ಜಾಗದಲ್ಲಿ ನೆಲೆಯೂರಿರುವ ತಮಿಳು ಕಾಲೋನಿಯನ್ನು ತೆರವುಗೊಳಿಸುವುದಕ್ಕೆ ಜನ ಪ್ರತಿನಿಧಿಗಳಾದಿಯಾಗಿ ಜಿಲ್ಲಾಡಳಿತವೂ ಧೈರ್ಯ ಮಾಡುತ್ತಿಲ್ಲ. ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಪ್ರಕರಣವನ್ನು ಇತ್ಯರ್ಥಗೊಳಿಸುವುದಕ್ಕೆ ಆಸಕ್ತಿಯನ್ನೇ ತೋರಿಸುತ್ತಿಲ್ಲ. ಪ್ರಕರಣ ನ್ಯಾಯಾಲಯದಲ್ಲಿರುವುದನ್ನೇ ಮುಂದಿಟ್ಟುಕೊಂಡು ವರ್ಷಗಳನ್ನು ದೂಡಲಾಗುತ್ತಿದೆ. ಹೈಕೋರ್ಟ್ ಆದೇಶವಿದ್ದರೂ, ತಮಿಳು ಕಾಲೋನಿ ನಿವಾಸಿಗಳಿಗೆ ಕೆರೆಯಂಗಳದಲ್ಲಿ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಿಕೊಟ್ಟಿದ್ದರೂ ನಿವಾಸಿಗಳನ್ನು ತೆರವುಗೊಳಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.
೧೯ ಎಕರೆ ಜಾಗ ಬಿಡಿಸಿಕೊಡುವಂತೆ ಮನವಿ:
ಈ ೧೯ ಎಕರೆ ಜಾಗವನ್ನು ದೊರಕಿಸಿಕೊಟ್ಟರೆ ಮಿಮ್ಸ್ ಕಾಲೇಜುಗಳ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಕ್ಕೆ ಅವಕಾಶ ಸಿಗಲಿದೆ. ಅದೇ ರೀತಿ ಟ್ರಾಮಾಕೇರ್ ಸೆಂಟರ್ ತೆರೆಯುವುದಕ್ಕೂ ಅನುಕೂಲವಾಗಲಿದೆ. ಆಸ್ಪತ್ರೆಯ ಸೌಲಭ್ಯ ವಿಸ್ತರಣೆಗೂ ಉಪಯುಕ್ತ ಜಾಗ ದೊರಕಲಿದೆ. ಇದೆಲ್ಲವನ್ನು ಕಾರ್ಯಗತಗೊಳಿಸುವುದಕ್ಕೆ ಬದ್ಧತೆ ಮತ್ತು ಇಚ್ಛಾಶಕ್ತಿ ಪ್ರದರ್ಶಿಸುವವರಿಲ್ಲದಿರುವುದು ವಿಪರ್ಯಾಸವಾಗಿದೆ.
ತಮಿಳು ಕಾಲೋನಿ ಸೇರಿದಂತೆ ಆಸ್ಪತ್ರೆಯ ಒಟ್ಟಾರೆ ಜಾಗ ಮಿಮ್ಸ್‌ಗೆ ಹಸ್ತಾಂತರವಾದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಉತ್ತಮ ಸ್ಥಳಾವಕಾಶ ದೊರೆಯಲಿದೆ. ಜೊತೆಗೆ ಟ್ರಾಮಾ ಕೇರ್ ಸೆಂಟರ್ ತೆರೆದು ಜನರಿಗೆ ಗುಣಮಟ್ಟದ ಚಿಕಿತ್ಸೆ ಹಾಗೂ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸೌಲಭ್ಯಗಳನ್ನು ದೊರಕಿಸಬಹುದು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅಗತ್ಯವಿರುವಷ್ಟು ಹಣವಿದ್ದರೂ ಜಾಗದ ಕೊರತೆಯಿಂದ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.
- ಡಾ.ಪಿ.ನರಸಿಂಹಸ್ವಾಮಿ, ನಿರ್ದೇಶಕರು, ಮಿಮ್ಸ್