ಸ್ಥಳೀಯ ಬತ್ತದ ಬೆಲೆ ಹೆಚ್ಚಳ<bha>;</bha> ರಾಜ್ಯಕ್ಕೆ ಬಿಹಾರದ ಬತ್ತ

KannadaprabhaNewsNetwork | Updated : Jan 14 2024, 01:34 AM IST

ಸಾರಾಂಶ

ಬತ್ತದ ಕಣಜ ಎಂದೇ ಪ್ರಸಿದ್ಧಿ ಪಡೆದ ಸಿರುಗುಪ್ಪ, ಗಂಗಾವತಿ, ರಾಯಚೂರುಗಳಲ್ಲಿ ಬತ್ತದ ಕೊರತೆ ಉಂಟಾಗಿದೆ. ಸ್ಥಳೀಯ ಬತ್ತದ ಬೆಲೆ ಏರಿಕೆಯಾಗಿದೆ. ಹೀಗಾಗಿ ರೈಸ್ ಮಿಲ್ ಮಾಲೀಕರು ಬಿಹಾರದಿಂದ ಬತ್ತ ತರಿಸಿಕೊಳ್ಳುತ್ತಿದ್ದಾರೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ಈ ಬಾರಿ ಮುಂಗಾರು ಹಂಗಾಮಿನ ಬತ್ತದ ಮಾರುಕಟ್ಟೆಯಲ್ಲಿ ಬೆಲೆ ಭಾರೀ ಏರಿಕೆ ಕಂಡುಕೊಂಡ ಪರಿಣಾಮ ರೈಸ್ ಮಿಲ್‌ಗಳ ಮಾಲೀಕರು ಬತ್ತದ ಕೊರತೆ ಎದುರಿಸುತ್ತಿದ್ದು, ಸದ್ಯದ ಸಂಕಷ್ಟದಿಂದ ಪಾರಾಗಲು ಬಿಹಾರದಿಂದ ಬತ್ತ ತರಿಸಿಕೊಳ್ಳುತ್ತಿದ್ದಾರೆ.

ಪ್ರಮುಖವಾಗಿ ಸಿರುಗುಪ್ಪ ಸೇರಿದಂತೆ ರಾಜ್ಯಕ್ಕೆ ಈ ವರೆಗೆ ಸುಮಾರು 25 ಸಾವಿರ ಟನ್ ಬಿಹಾರ ಬತ್ತ ತರಿಸಿಕೊಳ್ಳಲಾಗಿದೆ ಎಂದು ಅಂದಾಜಿಸಲಾಗಿದೆ.

ಬತ್ತದ ಕಣಜ ಎಂದೇ ಪ್ರಸಿದ್ಧಿ ಪಡೆದಿರುವ ಜಿಲ್ಲೆಯ ಸಿರುಗುಪ್ಪ, ಕೊಪ್ಪಳ ಜಿಲ್ಲೆಯ ಗಂಗಾವತಿ, ರಾಯಚೂರು ಹಾಗೂ ತುಮಕೂರು ಜಿಲ್ಲೆಗಳಿಗೆ ಬಿಹಾರದಿಂದ ಅಪಾರ ಪ್ರಮಾಣದಲ್ಲಿ ಬತ್ತ ತರಿಸಲಾಗುತ್ತಿದೆ. ಇದರಿಂದ ರೈಸ್ ಮಿಲ್‌ಗಳು ಬತ್ತದ ಕೊರತೆಯಿಂದ ಪಾರಾಗಿ ನಿಟ್ಟಿಸಿರು ಬಿಡುವಂತಾಗಿದೆ. ಆದರೆ, ಈ ಬೆಳವಣಿಗೆ ರೈತರನ್ನು ಆತಂಕಕ್ಕೀಡು ಮಾಡಿದ್ದು, ಬಿಹಾರದಿಂದ ತರಿಸುವ ಬತ್ತದಿಂದಾಗಿ ಸ್ಥಳೀಯವಾಗಿ ಬೆಳೆದ ಬತ್ತದ ಬೆಲೆ ಇಳಿಕೆಯಾಗುವ ದುಗುಡ ಮೂಡಿದೆ.

ಬಿಹಾರದಿಂದ ಬತ್ತ ತರಿಸುವುದು ಏಕೆ?: ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಬಿಹಾರ, ಜಾರ್ಖಂಡ್ ಹಾಗೂ ಛತ್ತೀಸ್‌ಘಡ ರಾಜ್ಯಗಳಲ್ಲಿ ಬತ್ತ ಭಾರೀ ಪ್ರಮಾಣದ ಇಳುವರಿ ಬಂದಿದೆ. ಬಿಹಾರದಲ್ಲಿ ರೈಸ್‌ಮಿಲ್‌ಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಹೀಗಾಗಿ ಹೊರ ರಾಜ್ಯಗಳಿಗೆ ಹೆಚ್ಚಾಗಿ ರವಾನಿಸಲಾಗುತ್ತದೆ. ಬಿಹಾರದಲ್ಲಿ ಕ್ವಿಂಟಲ್ ಬತ್ತ (ಕಟಾರ್ನಿ ಸೋನಾ) ₹2500ರಿಂದ ₹2600 ವರೆಗೆ ದರವಿದೆ (ಸಾರಿಗೆ ವೆಚ್ಚ ಸೇರಿ). ಸ್ಥಳೀಯ ಬತ್ತದ (ಸೋನಾ ಮಸೂರಿ) ದರ ₹3 ಸಾವಿರ ದಾಟಿದೆ. ರಾಜ್ಯದ ರೈಸ್‌ಮಿಲ್‌ಗಳ ಮಾಲೀಕರು ಬತ್ತದ ಕೊರತೆ ನೀಗಿಸಿಕೊಳ್ಳಲು ಬಿಹಾರ ರಾಜ್ಯದ ಬತ್ತಕ್ಕೆ ಮೊರೆ ಹೋಗಿದ್ದಾರೆ.

ಇದಕ್ಕೆ ಕಾರಣವೂ ಇದೆ. ಈ ಬಾರಿ ಮಳೆಯಿಲ್ಲದೆ ಬರ ಎದುರಾಗಿದ್ದು, ಬೇಸಿಗೆ ಬೆಳೆಗೆ ನೀರು ದೊರೆಯುವುದಿಲ್ಲ ಎಂಬುದು ಖಾತ್ರಿಯಾಗಿದೆ. ಇದು ರೈತಾಪಿಗಳಷ್ಟೇ ಅಲ್ಲ; ರೈತರು ಬೆಳೆಯುವ ಬೆಳೆಯನ್ನೇ ಆಶ್ರಯಿಸಿರುವ ರೈಸ್ ಮಿಲ್‌ಗಳ ಮಾಲೀಕರಿಗೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಹಿಂದೆ ಬಳ್ಳಾರಿ ಬತ್ತಕ್ಕೆ ಮುಂಬೈ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಇತ್ತು. ಈ ಬಾರಿ ಉತ್ತರ ಭಾರತದ ರಾಜ್ಯಗಳು ಕಡಿಮೆ ಬೆಲೆಗೆ ಅಪಾರ ಪ್ರಮಾಣದಲ್ಲಿ ಬತ್ತ ಕಳುಹಿಸುತ್ತಿರುವುದರಿಂದ ಸ್ಥಳೀಯವಾಗಿ ದಿಢೀರ್ ಏರಿಕೆ ಕಂಡಿರುವ ಬತ್ತವನ್ನು ಖರೀದಿಸಿ ಅಕ್ಕಿ ಮಾಡಿ ಮಾರಾಟ ಮಾಡುವುದು ಸಾಧ್ಯವಿಲ್ಲ ಎಂಬಂತಾಗಿದೆ.

ಜಿಲ್ಲೆಯ ಬತ್ತ ಬಹುತೇಕ ಖಾಲಿ: ಮುಂಗಾರಿನಲ್ಲಿ ಬೆಳೆದ ಬತ್ತದ ಬೆಳೆಯು ಜಿಲ್ಲೆಯಲ್ಲಿ ಭಾಗಶಃ ಖಾಲಿಯಾಗಿದೆ. ರೈತರೇ ಅಚ್ಚರಿಗೊಳ್ಳುವಂತೆ ಬತ್ತದ ಬೆಲೆ ₹3 ಸಾವಿರ ರು. (ಕ್ವಿಂಟಲ್‌ಗೆ) ದಾಟುತ್ತಿದ್ದಂತೆಯೇ ರೈತರು ಮುಗಿಬಿದ್ದು ಮಾರಿಕೊಂಡರು. ಆರ್ಥಿಕ ಸದೃಢ ರೈತರು ಮಾತ್ರ ಮತ್ತಷ್ಟು ಬೆಲೆ ಏರಿಕೆಯಾಗುತ್ತದೆ ಎಂದು ಗೋದಾಮುಗಳಲ್ಲಿ ಸಂಗ್ರಹಿಸಿಕೊಂಡಿದ್ದಾರೆ. ಹೀಗಾಗಿ ಬೆಳೆಯ ಶೇ. 25ರಿಂದ 30ರಷ್ಟು ಬತ್ತ ಮಾತ್ರ ಉಳಿದಿದೆ. ಸಿರುಗುಪ್ಪದ 80ಕ್ಕೂ ಹೆಚ್ಚು ರೈಸ್ ಮಿಲ್‌ಗಳು ಬತ್ತದ ಅಭಾವ ಎದುರಿಸುತ್ತಿವೆ. ಅನಿವಾರ್ಯವಾಗಿ ಮಿಲ್ ಮಾಲೀಕರು ಬಿಹಾರ ರಾಜ್ಯದ ಬತ್ತಕ್ಕೆ ಮೊರೆ ಹೋಗಿದ್ದಾರೆ. ಬತ್ತದ ಕೊರತೆಯಿಂದಾಗಿ ಮಿಲ್ ನಡೆಸುವುದು ಕಷ್ಟವಾಗಿದ್ದು, ಮಾಸಿಕ ₹2ರಿಂದ ₹2.50 ಲಕ್ಷ ಮಿಲ್ ನಿರ್ವಹಣೆಗೆ ಖರ್ಚು ಬರುತ್ತಿದೆ. ಇದನ್ನು ನಿಭಾಯಿಸುವುದು ಹೇಗೆ ಎಂಬುದೇ ಚಿಂತೆಯಾಗಿದೆ ಎನ್ನುತ್ತಾರೆ ರೈಸ್ ಮಿಲ್ ಮಾಲೀಕರು. ಸ್ಥಳೀಯವಾಗಿ ಬೆಳೆಯುವ ಬತ್ತದ ಬೆಲೆಯು ತೀವ್ರ ಏರಿಕೆಯಾಗಿರುವುದರಿಂದ ರೈಸ್ ಮಿಲ್‌ಗಳ ಮಾಲೀಕರು ಸ್ಥಳೀಯವಾಗಿ ದುಬಾರಿಯ ಬತ್ತ ಖರೀದಿಸಿ ಅಕ್ಕಿ ಮಾರಾಟ ಮಾಡಿಕೊಳ್ಳುವುದು ಕಷ್ಟ ಸಾಧ್ಯ. ಬೇಸಿಗೆ ಬೆಳೆಯೂ ಇಲ್ಲವಾದ್ದರಿಂದ ರೈಸ್ ಮಿಲ್‌ಗಳು ಆತಂಕ ಎದುರಿಸುತ್ತಿವೆ ಎಂದು ಸಿರುಗುಪ್ಪದ ಶ್ರೀಬಸವೇಶ್ವರ ರೈಸ್ ಇಂಡಸ್ಟ್ರೀಸ್‌ನ ಎನ್.ಜಿ. ಬಸವರಾಜ್ ಹೇಳುತ್ತಾರೆ.

Share this article