ಕನ್ನಡಪ್ರಭ ವಾರ್ತೆ ಹನೂರುಮಲೆಮಾದೇಶ್ವರ ಬೆಟ್ಟದ ಕುಗ್ರಾಮಗಳ ಬಳಿ ಪುಂಡಾನೆ ಉಪಟಳ ಹೆಚ್ಚಾಗಿದ್ದು, ಅರಣ್ಯ ಇಲಾಖೆ ವಿರುದ್ಧ ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಆನೆ ಹೊಲ ಹಾಗೂ ಕರಡಿ ಸೀಳು ಸೇರಿದಂತೆ ಆನೆತಲೆ ದಿಂಬ ಇನ್ನಿತರ ಕಡೆಗಳಲ್ಲಿ ಕಾಡಾನೆ ರಾತ್ರಿ ವೇಳೆ ಉಪಟಳ ನೀಡುತ್ತಿದ್ದು, ಆನೆ ಹೊಲ ಗ್ರಾಮದ ಮಾದಯ್ಯ ಅವರಿಗೆ ಸೇರಿದ ಮನೆಯ ಮುಂಭಾಗ ಜಮೀನಿನಲ್ಲಿ ಇದ್ದ 200ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ತಿಂದು ನಾಶಪಡಿಸಿದೆ. ಜೊತೆಗೆ ಹಲಸಿನ ಮರಗಳು ಇರುವುದರಿಂದ ದಿನನಿತ್ಯ ಇಲ್ಲಿಗೆ ಅರಣ್ಯ ಪ್ರದೇಶದಿಂದ ಬರುತ್ತಿರುವ ಪುಂಡಾನೆ ಉಪಟಳ ಹೆಚ್ಚಾಗಿದ್ದು, ರಾತ್ರಿ ವೇಳೆ ಬರುವುದರಿಂದ ಬೆಳೆ ಹಾನಿ ಹಾಗೂ ಈ ಭಾಗದ ಜನತೆಗೆ ಆತಂಕ ಉಂಟು ಮಾಡಿದೆ.
ಮಲೆಮಹದೇಶ್ವರ ಬೆಟ್ಟದ ಆನೆ ಹೊಲ, ಆನೆ ತಲೆ ದಿಂಬ ಸುತ್ತಲಿನ ರೈತರ ಜಮೀನುಗಳಲ್ಲಿ ಬೆಳೆಯಲಾಗಿರುವ ಹಲಸಿನ ಮರಗಳು ಹಾಗೂ ಬಾಳೆ ಗಿಡಗಳನ್ನು ತಿನ್ನಲು ದಿನನಿತ್ಯ ರಾತ್ರಿ ವೇಳೆ ಪುಂಡಾನೆ ಬರುತ್ತಿರುವುದರಿಂದ ಈ ಭಾಗದಲ್ಲಿ ವಾಸಿಸುವ ನಿವಾಸಿಗಳಿಗೆ ಜೀವ ಭಯದಲ್ಲೇ ಕಾಲ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿದೆ.
ಪುಂಡಾನೆ ಸ್ಥಳಾಂತರಕ್ಕೆ ಒತ್ತಾಯ:ದಿನನಿತ್ಯ ಪುಂಡಾನೆ ರಾತ್ರಿ ವೇಳೆ ಬರುತ್ತಿರುವುದರಿಂದ ಈ ಭಾಗದಲ್ಲಿ ವಾಸಿಸುವ ನಿವಾಸಿಗಳಿಗೆ ತೊಂದರೆ ಉಂಟಾಗಿದ್ದು ಜೊತೆಗೆ ಬೆಳೆಗಳು ಸಹ ಹಾನಿ ಉಂಟು ಮಾಡುತ್ತಿದ್ದು ಮನೆಗಳ ಮುಂಭಾಗವೇ ಬರುತ್ತಿರುವುದರಿಂದ ಅರಣ್ಯಾಧಿಕಾರಿಗಳು ಪುಂಡಾಟಿಕೆ ಮಾಡುತ್ತಿರುವ ಆನೆಯನ್ನು ಬೇರೆ ಬಿಡಲು ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಭಕ್ತರು, ಪಾದಯಾತ್ರೆಯಲ್ಲಿ ಬರುವ ಭಕ್ತಾದಿಗಳಿಗೆ ತೊಂದರೆ ಮಾಡುವ ಮುನ್ನ ಅರಣ್ಯಾಧಿಕಾರಿಗಳು ಪುಂಡಾನೆಯನ್ನು ಸ್ಥಳಾಂತರ ಮಾಡಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.