ಬೀದಿ ನಾಯಿಗಳ ಹಾವಳಿ ಹೆಚ್ಚಳ: ವಾಯುವಿಹಾರಿಗಳಲ್ಲಿ ಆತಂಕ ಹೆಚ್ಚಳ

KannadaprabhaNewsNetwork |  
Published : Oct 26, 2026, 03:30 AM IST
ಪಟ್ಟಣದ ಎಫ್.ಎಂ. ಡಬಾಲಿ ಹೈಸ್ಕೂಲ್ ಮೈದಾನದಲ್ಲಿ ಬೆಳಗಿನ ಜಾವ ಬೀದಿ ನಾಯಿಗಳ ಗುಂಪು ಕಾಣಿಸಿಕೊಂಡಿರುವುದು. | Kannada Prabha

ಸಾರಾಂಶ

ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬೆಳಗಿನ ಜಾವ ಹಾಗೂ ಸಂಜೆ ವಾಯು ವಿಹಾರಕ್ಕೆ ತೆರಳುವ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.

ದ್ವಿಚಕ್ರ ವಾಹನ ಸವಾರರಿಗೂ ತೊಂದರೆ । ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರಿಗೆ ಭಯ

ಮಹದೇವಪ್ಪ ಎಂ. ಸ್ವಾಮಿ

ಕನ್ನಡಪ್ರಭ ವಾರ್ತೆ ಶಿರಹಟ್ಟಿ

ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬೆಳಗಿನ ಜಾವ ಹಾಗೂ ಸಂಜೆ ವಾಯು ವಿಹಾರಕ್ಕೆ ತೆರಳುವ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಬೀದಿ ನಾಯಿಗಳ ಗುಂಪುಗಳು ರಸ್ತೆಗಳಲ್ಲಿ ಹಾಗೂ ವಸತಿ ಪ್ರದೇಶಗಳಲ್ಲಿ ಸಂಚರಿಸುತ್ತಿರುವುದರಿಂದ ಜನರು ಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆರೋಗ್ಯ ಕಾಪಾಡಿಕೊಳ್ಳುವ ಉದ್ದೇಶದಿಂದ ಪ್ರತಿನಿತ್ಯ ಬೆಳಗ್ಗೆ ವಾಯು ವಿಹಾರಕ್ಕೆ ತೆರಳುವ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳು ಬೀದಿ ನಾಯಿಗಳಿಂದಾಗಿ ಭಯಭೀತರಾಗಿದ್ದಾರೆ. ಕೆಲವೆಡೆ ನಾಯಿಗಳು ದಾರಿಹೋಕರನ್ನು ಅಟ್ಟಿಸಿಕೊಂಡು ಹೋಗುತ್ತಿರುವುದರಿಂದ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುವಂತಾಗಿದೆ. ದ್ವಿಚಕ್ರ ವಾಹನ ಸವಾರರಿಗೂ ಬೀದಿ ನಾಯಿಗಳ ಓಡಾಟ ತೊಂದರೆ ಉಂಟುಮಾಡುತ್ತಿದೆ.

ಪಟ್ಟಣದ ಪ್ರಮುಖ ರಸ್ತೆಗಳು, ಬಡಾವಣೆಗಳು ಹಾಗೂ ಜನವಸತಿ ಪ್ರದೇಶಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಅವುಗಳ ನಿಯಂತ್ರಣಕ್ಕೆ ಪಪಂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ನಾಯಿಗಳ ಹಾವಳಿಯಿಂದ ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ.

ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮ ಪಾಲಿಸುವ ಜತೆಗೆ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ, ಲಸಿಕೆ ಹಾಗೂ ಅಗತ್ಯ ಆರೈಕೆ ಒದಗಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿ, ದೂರುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಯಾವುದೇ ಅನಾಹುತ ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವ ಬದಲು, ಮುನ್ನೆಚ್ಚರಿಕೆ ವಹಿಸಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಪಪಂ ಅಧಿಕಾರಿಗಳು ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ, ಸಾರ್ವಜನಿಕರಿಂದ ದೂರು ಸ್ವೀಕರಿಸಲು ಸಹಾಯವಾಣಿ ಅಥವಾ ಸಂಪರ್ಕ ವ್ಯವಸ್ಥೆ ರೂಪಿಸಬೇಕು. ಜನರನ್ನು ಅಟ್ಟಿಸಿಕೊಂಡು ಹೋಗುವ, ಕಚ್ಚುವ ಅಥವಾ ಅಸಹಜವಾಗಿ ಆಕ್ರಮಣಕಾರಿ ವರ್ತನೆ ತೋರುವ ನಾಯಿಗಳ ಕುರಿತು ದೂರು ಬಂದ ತಕ್ಷಣ ಪಶುವೈದ್ಯಕೀಯ ತಜ್ಞರ ನೆರವಿನಿಂದ ಪರಿಶೀಲನೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಬೀದಿನಾಯಿಗಳ ನಿಯಂತ್ರಿಸಲು ವೈಜ್ಞಾನಿಕ ಹಾಗೂ ಮಾನವೀಯ ಕ್ರಮ ಅನುಸರಿಸುವುದು ಅಗತ್ಯವಾಗಿದೆ. ಪಟ್ಟಣ ಪಂಚಾಯಿತಿಯು ಪಶುಪಾಲನಾ ಇಲಾಖೆ, ಸಂಬಂಧಪಟ್ಟ ತಜ್ಞರ ಸಹಕಾರದೊಂದಿಗೆ ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ರೇಬಿಸ್ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎನ್ನುತ್ತಾರೆ ವಾಯು ವಿಹಾರಿ ಪರಮೇಶ ಶಿಗ್ಲಿ.ಬೀದಿ ನಾಯಿಗಳ ಹಾವಳಿ ಹಾಗೂ ಕಡಿವಾಣಕ್ಕೆ ಕೋರ್ಟ್‌ ಕೂಡ ಈ ಹಿಂದೆ ಆದೇಶ ಮಾಡಿದೆ. ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಕುರಿತಂತೆ ನಮ್ಮ ಗಮನಕ್ಕೆ ಬಂದಿಲ್ಲ. ತುರ್ತು ಪತ್ತೆ ಹಚ್ಚಿ ಬೀದಿ ನಾಯಿಗಳ ಜನನ ನಿಯಂತ್ರಣ ಕ್ರಮದ ಅನುಸಾರ ಕ್ರಮ ಜರುಗಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್.ಎಂ. ಹಾದಿಮನಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶತ ಶತಮಾನದಿಂದಲೂ ಅಭಿವೃದ್ಧಿ ಕಾಣದ ಸ್ಮಾರಕ
ಅಯೋಡಿನ್ ಯುಕ್ತ ಉಪ್ಪು ಕುಟುಂಬದ ಆರೋಗ್ಯ ಸಂರಕ್ಷಕ: ಡಾ. ಪ್ರೀತ್