ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಳ: ಡಾ. ಗೋಪಾಲ ದಾಬಡೆ

KannadaprabhaNewsNetwork |  
Published : Jul 25, 2024, 01:17 AM IST
24ಕೆಪಿಎಲ್25 ಜಾಗೃತಿ ಸಂಘಟನೆಯ ಪದಾಧಿಕಾರಿಗಳು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ ಹೊರತು, ತಗ್ಗಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ಅಂಕಿಸಂಖ್ಯೆಯನ್ನು ಮೀರಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಹೆಚ್ಚುತ್ತಲೇ ಇದೆ ಅಪೌಷ್ಟಿಕ ಮಕ್ಕಳ ಸಂಖ್ಯೆ, ಮಗುವಿಗೆ ನೀಡುವ ಪೌಷ್ಟಿಕ ಅಹಾರ ದನಗಳಿಗೆ

ಸರ್ವೆಯಲ್ಲಿ ಅಘಾತಕಾರಿ ಅಂಶಗಳು ಪತ್ತೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ ಹೊರತು, ತಗ್ಗಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ಅಂಕಿಸಂಖ್ಯೆಯನ್ನು ಮೀರಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಧಾರವಾಡದ ಜಾಗೃತಿ ಸಂಸ್ಥೆಯ ಸಂಸ್ಥಾಪಕ ಸದಸ್ಯ ಡಾ. ಗೋಪಾಲ ದಾಬಡೆ ಹೇಳಿದ್ದಾರೆ.

ನಗರದ ಮೀಡಿಯಾ ಕ್ಲಬ್‌ನಲ್ಲಿ ಬುಧವಾರ ಮಾತನಾಡಿದ ಅವರು, ಇದರಿಂದ ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತವಾಗುತ್ತಿದೆ. ಇದು ಅತ್ಯಂತ ಅಪಾಯಕಾರಿಯಾಗುತ್ತಿರುವ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಅಂಗನವಾಡಿಯಲ್ಲಿ ನಡೆಯುವ ಸರ್ವೆಯನ್ನು ಮೀರಿ ಜಾಗೃತಿ ಸಮಿತಿ ಸರ್ವೆ ಮಾಡಿದೆ. ನಾವು ಅಂಗನವಾಡಿಗಳಿಗೆ ಹೋಗಿ ಸರ್ವೆ ಮಾಡುವ ಬದಲು ಮನೆ ಮನೆಗೆ ಹೋಗಿ, ಸರ್ವೆ ಮಾಡಿದ್ದರಿಂದ ಸತ್ಯ ಗೊತ್ತಾಗಿದೆ. ಜಿಲ್ಲಾದ್ಯಂತ ಸುಮಾರು 2000 ಮಕ್ಕಳನ್ನು ಸರ್ವೆ ಮಾಡಲಾಗಿದ್ದು, ಬಹುತೇಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ನೋವಿನ ಸಂಗತಿ ಎಂದರು.

6 ತಿಂಗಳಿಂದ 6 ವರ್ಷದ ಮಕ್ಕಳನ್ನು ತಾಲೂಕುವಾರು ಅವರ ಮನೆಯಲ್ಲಿಯೇ ಸರ್ವೆ ಮಾಡಿದ್ದೇವೆ. ಅಂಗನವಾಡಿಗಳಲ್ಲಿ ತಪ್ಪು ಮಾಹಿತಿಯೊಂದಿಗೆ ಸರ್ವೆಯನ್ನ ದಾಖಲು ಮಾಡಲಾಗುತ್ತದೆ. ಅದರಲ್ಲೂ ತೂಕದ ಯಂತ್ರಗಳೇ ದೋಷಪೂರಿತ ಆಗಿರುವುದರಿಂದಲೇ ತಪ್ಪು ಮಾಹಿತಿ ದಾಖಲು ಮಾಡಲಾಗುತ್ತದೆ ಎಂದರು.

ದೇಶದಲ್ಲಿ ಶೇ.35ರಷ್ಟು ಮಕ್ಕಳು ಸರಿಯಾಗಿ ಬೆಳವಣಿಗೆ ಕಾಣುತ್ತಿಲ್ಲ. ಶೇ. 32ರಷ್ಟು ಮಕ್ಕಳು ವಯಸ್ಸಿಗೆ ತಕ್ಕ ದೇಹತೂಕ ಹೊಂದಿಲ್ಲ. ಹಾಗಾಗಿ ಕರ್ನಾಟಕದಲ್ಲಿ ಹೆಚ್ಚು ಅಪೌಷ್ಠಿಕತೆ ಇರುವ 5 ಜಿಲ್ಲೆಗಳಲ್ಲಿ ಕೊಪ್ಪಳವೂ ಒಂದಾಗಿದೆ. ನಮ್ಮ ಸಂಸ್ಥೆ 4 ತಿಂಗಳ ಕಾಲ ಜಿಲ್ಲೆಯ ಅವಿಭಜಿತ ನಾಲ್ಕು ತಾಲೂಕುಗಳಲ್ಲಿ 20 ಕಾರ್ಯಕರ್ತರ ಮೂಲಕ 2 ಸಾವಿರ ಮಕ್ಕಳ ಅಪೌಷ್ಟಿಕತೆಯ ಕುರಿತು ಸಮೀಕ್ಷೆ ಮತ್ತು ಜಾಗೃತಿ ಮೂಡಿಸಿದೆ ಎಂದರು.

ದನಗಳಿಗೆ ಹಾಕುತ್ತಿದ್ದಾರೆ:

ವೈಜ್ಞಾನಿಕವಾಗಿ ತಯಾರಾಗಿರುವ ಪುಷ್ಟಿ ಪ್ಯಾಕೇಟ್ ಆಹಾರವನ್ನು ತಾಯಂದಿರು ಮಕ್ಕಳಿಗೆ ತಿನ್ನಿಸದೆ ಚೆಲ್ಲುತ್ತಿರುವುದು ಕಂಡು ಬಂದಿದೆ. ತಮ್ಮ ಮನೆಯ ದನಗಳಿಗೆ ಹಾಕುತ್ತಿದ್ದಾರೆಯೇ ಹೊರತು ಮಕ್ಕಳಿಗೆ ಕೊಡುತ್ತಿಲ್ಲ. ಅಪೌಷ್ಟಿಕತೆ, ತೀವ್ರ ಅಪೌಷ್ಟಿಕತೆ, ಕಡಿಮೆ ದೇಹ ತೂಕದ ಮಕ್ಕಳನ್ನು ಗುರುತಿಸಿ ಅವರ ತಾಯಂದಿರಿಗೆ ಅಪೌಷ್ಟಿಕತೆ ಹೋಗಲಾಡಿಸುವ ಮತ್ತು ಪುಷ್ಟಿ ಪ್ಯಾಕೇಟ್ ಆಹಾರದ ಬಗ್ಗೆ ಜಾಗೃತಿ ಸಭೆ ನಡೆಸಿ ತಿಳುವಳಿಕೆ ಮೂಡಿಸಿ ಸತತ ಮೂರು ತಿಂಗಳು ನಿಗಾವಹಿಸುವ ಕೆಲಸ ಸಂಸ್ಥೆ ಕಾರ್ಯಕರ್ತರು ಮಾಡಿದಾಗ ಇದೆಲ್ಲವೂ ಬೆಳಕಿಗೆ ಬಂದಿದೆ ಎಂದರು.

ಕೂಲಿ ಮಾಡಲು ಹೋಗುವ ಪಾಲಕರು, ಮನೆಯಲ್ಲಿ ಇರುವ ಮಕ್ಕಳಿಗೆ ಹತ್ತಿಪ್ಪತ್ತು ರುಪಾಯಿ ಕೊಟ್ಟು ಹೋಗುತ್ತಾರೆ. ಆ ಮಕ್ಕಳು ಜಂಕ್ ಫುಡ್ ತಿನ್ನುವುದರಿಂದ ಊಟವನ್ನೇ ಮಾಡುವುದಿಲ್ಲ. ಇದೇ ಅಪೌಷ್ಟಿಕತೆ ಹೆಚ್ಚಾಗಲು ಕಾರಣವಾಗಿದೆ. ಇದನ್ನು ಮೊದಲು ನಿಲ್ಲಿಸಿ, ದಿನಕ್ಕೆ 4-5 ಸಲ ಮನೆ ಊಟ ಮಾಡಿಸಿದರೆ ಮಕ್ಕಳನ್ನು ಅಪೌಷ್ಟಿಕತೆಯಿಂದ ದೂರವಾಗಿಸಬಹುದು ಎಂದರು.

ಸಮೀಕ್ಷೆ ಸಂದರ್ಭದಲ್ಲಿ ಕಂಡು ಬಂದ ವಿವರಗಳನ್ನು ಕೊಪ್ಪಳ ಜಿಪಂ ಸಿಇಒ ಅವರಿಗೆ ನೀಡಿ ಹೆಚ್ಚಿನ ನಿಗಾವಹಿಸುವಂತೆ ಮನವಿ ಮಾಡಲಾಗಿದೆ ಎಂದು ಡಾ. ದಾಬಡೆ ಹೇಳಿದರು.

ಸಂಸ್ಥೆಯ ಶಾರದಾ ಗೋಪಾಲ, ಸಮೀಕ್ಷೆ ಕಾರ್ಯಕರ್ತರಾಗಿದ್ದ ಶೀಲಾ ಹಾಲ್ಕುರಿಕೆ, ಮಂಜುಳಾ, ಲಕ್ಷ್ಮಿ ಗಂಗಾವತಿ, ಸುನೀತಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ