ಪ್ರವಾಸಿಗರ ಸಂಖ್ಯೆ ಹೆಚ್ಚಳ<bha>;</bha> ಸುಂಟಿಕೊಪ್ಪ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್

KannadaprabhaNewsNetwork | Published : Jan 1, 2024 1:15 AM

ಸಾರಾಂಶ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದ್ದು, ಸುಂಟಿಕೊಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದ್ದು, ಸುಂಟಿಕೊಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು, ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಲಾಠಿ ಹಿಡಿದು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಗಾಗಿ ಪ್ರವಾಸಿಗರೇ ದಂಡು ಆಗಮಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಾರು ಸಂಖ್ಯೆ ವಾಹನಗಳಲ್ಲಿ ಬರುತ್ತಿದ್ದಾರೆ. ಇದರ ಜೊತೆಗೆ ಜಿಲ್ಲೆಯಲ್ಲಿ ಮದುವೆ, ನಾಮಕರಣ, ಕ್ರೀಡಾಕೂಟ ಸೇರಿದಂತೆ ಸಭೆ ಸಮಾರಂಭಗಳೂ ಇರುವದುರಿಂದ ವಾಹನಗಳ ಸಂಚಾರ ಹೆಚ್ಚಾಗಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಇದರಿಂದಾಗಿ ಸ್ಥಳೀಯ ವಾಹನ ಹಾಗೂ ಪಾದಚಾರಿಗಳು ನಡೆದಾಡಲು ಮತ್ತು ರಸ್ತೆ ದಾಟಲು ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಎದುರಾಯಿತು.

ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆಯಿಂದ ಆಗ್ಗಿಂದಾಗೆ ಟ್ರಾಫಿಕ್ ಜಾಮ್ ಸಮಸ್ಯೆಯು ಎದುರಾಗಿರುವುದನ್ನು ಮನಗಂಡ ಸುಂಟಿಕೊಪ್ಪ ಠಾಣಾಧಿಕಾರಿ ತಾವೇ ಖುದ್ದಾಗಿ ಆಗಮಿಸಿ ಹೆದ್ದಾರಿ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿದ್ದರಿಂದ ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನಗಳನ್ನು ತೆರವುಗೊಳಿಸಿದರು.

ಕುಶಾಲನಗರದಿಂದ ಮಡಿಕೇರಿಯವರೆಗೆ ಹೆದ್ದಾರಿ ಅಂಚಿನವರೆಗೆ ಹೋಟೆಲ್ ಕ್ಯಾಂಟೀನ್ ಕಾಫಿ ಶಾಫ್ ಸ್ಪೈಸಸ್ ಮಳಿಗೆಗಳನ್ನು ತೆರೆಯಲಾಗಿದ್ದು, ಇಲ್ಲಿ ಯಾವುದೇ ಸಂಚಾರಿ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ. ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ವಾಹನಗಳು ಈ ಅಂಗಡಿಗಳ ಮುಂದೆ ನಿಲ್ಲುಸುವುದುರಿಂದ ಸುಗಮ ಸಂಚಾರಕ್ಕೂ ತಡೆಯುಂಟಾಗಿದೆ. ಪೊಲೀಸ್‌ ಠಾಣೆಯಲ್ಲಿ ಸೂಕ್ತ ವಾಹನ ಕೊರತೆ ಇದ್ದು, ಲಭ್ಯವಿರುವ ಸಿಬ್ಬಂದಿ ಮತ್ತು ಠಾಣಾಧಿಕಾರಿಗಳು ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ನಿಯಂತ್ರಣ ವ್ಯವಸ್ಥೆ ಮಾಡಬೇಕಾಗಿದೆ. ಸಿಬ್ಬಂದಿಗೆ ರಜೆ, ವರ್ಗಾವಣೆ, ತರಬೇ ಹಿನ್ನೆಲೆಯಲ್ಲಿ ಮತ್ತಷ್ಟು ಸಿಬ್ಬಂದಿ ಕೊರತೆ ಉಂಟಾಗುತ್ತಿದೆ.

ವಿಶೇಷವಾಗಿ ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅತ್ಯಂತ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿದೆ. ಜನ ಸಂಖ್ಯೆಯೂ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಸುಂಟಿಕೊಪ್ಪ ಪಟ್ಟಣ ಹೋಬಳಿ ಕೇಂದ್ರವಾಗಿದ್ದು, ಕಂಬಿಬಾಣೆ, ಕೊಡಗರಹಳ್ಳಿ, ನಾಕೂರು ಶಿರಂಗಾಲ, ಹೆರೂರು, ಕಲ್ಲೂರು, ಹರದೂರು, ಗರಗಂದೂರು, ಭೂತನಕಾಡು ಭಾಗಗಳ ಜನತೆಗೆ ಪಟ್ಟಣವೇ ಸಂಪರ್ಕ ಕೇಂದ್ರವಾಗಿದೆ. ಆದರೆ ಮೂಲಭೂತ ಸೌಲಭ್ಯಗಳು ಮರಿಯಾಚಿಕೆಯಾಗಿದೆ. ಸಾರ್ವಜನಿಕರು ಹಾಗೂ ಮಕ್ಕಳು ವಿದ್ಯಾಭ್ಯಾಸಕ್ಕೆ ತಾಲೂಕು, ಜಿಲ್ಲೆ, ಹೊರಜಿಲ್ಲೆ ಹೊರ ರಾಜ್ಯಗಳಿಗೆ ತೆರಳಬೇಕಾದರೆ ಸುಂಟಿಕೊಪ್ಪಕ್ಕೆ ಆಗಮಿಸಿ ತೆರಳಬೇಕಾಗಿದೆ. ಆದರೆ ಇಲ್ಲಿ ಮೂಲಭೂತ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲ. ಬಸ್‌ ನಿಲ್ದಾಣವೂ ಇಲ್ಲದ ಕಾರಣ ಹೆದ್ದಾರಿ ಬದಿಯಲ್ಲೇ ನಿಂತು ಬಸ್ ಹತ್ತ ಬೇಕಾಗಿದೆ. ಈ ಹಿಂದೆ ಸಾಕಷ್ಟು ಬಾರಿ ಗ್ರಾಮಸಭೆ ಸೇರಿದಂತೆ ಸಭೆ ಸಮಾರಂಭಗಳಲ್ಲಿ ಹಲವಷ್ಟು ಬಾರಿ ಮೂಲಭೂತ ಸೌಲಭ್ಯಗಳ ಕುರಿತು ಜನಪ್ರತಿನಿಧ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಆದರೆ ಫಲಿಂತಾಶ ಮಾತ್ರ ಶೂನ್ಯ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share this article