ಕುಷ್ಟಗಿ: ಕರ್ನಾಟಕದಲ್ಲಿ ಮಹಿಳೆಯರಲ್ಲೂ ತಂಬಾಕು ಸೇವನೆ ಮಾಡುವರ ಸಂಖ್ಯೆ ಹೆಚ್ಚಾಗುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಕೆ.ಎಸ್. ರೆಡ್ಡಿ ಅವರು ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ತಂಬಾಕುರಹಿತ ದಿನಾಚರಣೆ ಅಂಗವಾಗಿ ನಡೆದ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಂಬಾಕು ಉತ್ಪನ್ನ ಮಾಡುವ ರಾಷ್ಟ್ರಗಳಲ್ಲಿ ನಮ್ಮ ಭಾರತ ದೇಶವು ಕೆಳಗಿನಿಂದ ಎರಡನೆಯ ಸ್ಥಾನದಲ್ಲಿ ಇರುವುದು ಸಂತೋಷದ ಸಂಗತಿ. ಆದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ತಂಬಾಕು ಸೇವನೆ ಮಾಡುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದರು.ಧೂಮಪಾನ ಮಾಡಬಾರದು. ಇದು ಜೀವಕ್ಕೆ ಶೇ. 100ರಷ್ಟು ಹಾನಿಕಾರಕ, ಕ್ಯಾನ್ಸರ್ ಬರುವುದರಲ್ಲಿ ಸಂದೇಹವೆ ಇಲ್ಲ. ಆದ ಕಾರಣ ಮನೆಯ ಹಿರಿಯರು ತಮ್ಮ ಮಕ್ಕಳನ್ನು ಧೂಮಪಾನ, ಗುಟ್ಕಾ, ಮದ್ಯವ್ಯಸನಿಗಳಾಗದಂತೆ ನೋಡಿಕೊಳ್ಳಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಆನಂದ ಗೋಟೂರ ಮಾತನಾಡಿ, ವಿಶ್ವ ತಂಬಾಕು ರಹಿತ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗಬಾರದು. ತಂಬಾಕು ಸೇವನೆಯಿಂದ ಕುಟುಂಬವೇ ಬೀದಿಗೆ ಬಂದ ಉದಾಹರಣೆಗಳು ಸಾಕಷ್ಟಿದ್ದು, ಜನರು ಜಾಗ್ರತರಾಗಬೇಕು. ತಂಬಾಕು ಸೇವನೆ ಬಿಡಬೇಕು. ಸುಂದರವಾಗಿ ಜೀವನ ನಡೆಸಬೇಕು ಎಂದರು.ಜಾಥಾಕ್ಕೆ ಚಾಲನೆ: ಕುಷ್ಟಗಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್. ಪೂಜೇರಿ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ಜಾಗೃತಿಯ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿದರು. ಡಾ. ವಿದ್ಯಾಶ್ರೀ, ಸಂಗಯ್ಯ ಕಂಠಿಮಠ, ಬಸವರಾಜ, ಪ್ರಕಾಶ ಗುತ್ತೇದಾರ, ಸೋಮಶೇಖರ ಮೇಟಿ ಹಾಗೂ ತಾಲೂಕು ಆಸ್ಪತ್ರೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಈ ಸಂದರ್ಭದಲ್ಲಿ ಇದ್ದರು.