ತಂತ್ರಜ್ಞಾನ ಬಳಸಿ ಜ್ಞಾನಮಟ್ಟ ಹೆಚ್ಚಿಸಿಕೊಳ್ಳಿ: ಪ್ರೊ.ಎನ್.ಕೆ. ಲೋಕನಾಥ್

KannadaprabhaNewsNetwork |  
Published : Mar 29, 2024, 12:53 AM IST
2 | Kannada Prabha

ಸಾರಾಂಶ

ವಿದ್ಯಾರ್ಥಿಗಳಿಗೆ ಈ ಅವಧಿಯಲ್ಲಿ ಕಲಿಕೆ ಬಹಳ ಮುಖ್ಯ. ವಿದ್ಯಾರ್ಥಿಗಳು ಹೆಚ್ಚು ಮೊಬೈಲ್ ಬಳಸಬಾರದು. ಮೊಬೈಲ್ ಅನ್ನು ಮಾಹಿತಿಯ ಮೂಲವಾಗಿ ಬಳಸಿಕೊಳ್ಳಬೇಕೆ ಹೊರತು, ಅದೇ ಪ್ರಪಂಚವಾಗಬಾರದು. ತಂತ್ರಜ್ಞಾನವು ಜ್ಞಾನ ಹೆಚ್ಚಿಸುವ ಮೂಲವಾಗಬೇಕು. ವಿದ್ಯಾರ್ಥಿ ದೆಸೆಯಲ್ಲಿ ಸರಿಯಾದ ಭಾಷಾ ಜ್ಞಾನ ಬೆಳೆಸಿಕೊಳ್ಳದಿದ್ದರೆ ಜೀವನ ಪರ್ಯಂತ ಕಾಗುಣಿತ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದನ್ನು ಮರೆಯಬಾರದು. ಹೆಚ್ಚು ಅಧ್ಯಯನದಲ್ಲಿ ತೊಡಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸಿಕೊಂಡು ನಿಮ್ಮ ಜ್ಞಾನಮಟ್ಟವನ್ನು ಹೆಚ್ಚಿಸಿಕೊಳ್ಳಿ ಮತ್ತು ಭಾಷಾ ಕೌಶಲ್ಯವನ್ನು ಕಲಿಯಿರಿ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಕಿವಿಮಾತು ಹೇಳಿದರು.

ನಗರದ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ತರಗತಿಯಲ್ಲಿ ಪರಿಣಾಮಕಾರಿಯಾಗಿ ಸಾಹಿತ್ಯ ಪಠ್ಯ ಬೋಧನೆ ಕುರಿತ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಈ ಅವಧಿಯಲ್ಲಿ ಕಲಿಕೆ ಬಹಳ ಮುಖ್ಯ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಮೊಬೈಲ್ ಬಳಸಬಾರದು. ಮೊಬೈಲ್ ಅನ್ನು ಮಾಹಿತಿಯ ಮೂಲವಾಗಿ ಬಳಸಿಕೊಳ್ಳಬೇಕೆ ಹೊರತು, ಅದೇ ಪ್ರಪಂಚವಾಗಬಾರದು. ತಂತ್ರಜ್ಞಾನವು ಜ್ಞಾನ ಹೆಚ್ಚಿಸುವ ಮೂಲವಾಗಬೇಕು ಎಂದರು.

ಪ್ರಸ್ತುತ ಸಂದರ್ಭದಲ್ಲಿ ಇಂಗ್ಲಿಷ್ ಕಲಿಕೆ ಬಹಳ ಮುಖ್ಯ. ವಿದ್ಯಾರ್ಥಿ ದೆಸೆಯಲ್ಲಿ ಸರಿಯಾದ ಭಾಷಾ ಜ್ಞಾನ ಬೆಳೆಸಿಕೊಳ್ಳದಿದ್ದರೆ ಜೀವನ ಪರ್ಯಂತ ಕಾಗುಣಿತ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದನ್ನು ಮರೆಯಬಾರದು. ಹೆಚ್ಚು ಹೆಚ್ಚು ಅಧ್ಯಯನದಲ್ಲಿ ತೊಡಗಬೇಕು. ಕಂಪ್ಯೂಟರ್ಅಥವಾ ಮೊಬೈಲ್ನಲ್ಲಿ ಓದುವುದಕ್ಕಿಂತ ಪುಸ್ತಕವನ್ನು ಕೈಯಲ್ಲಿ ಹಿಡಿದು ಓದುವುದು ಹೆಚ್ಚು ತೃಪ್ತಿ ನೀಡುತ್ತದೆ ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿಯುವಂತೆಯೇ ಯೂ ಟ್ಯೂಬ್ಅಥವಾ ಆನ್ ಲೈನ್ ನಲ್ಲಿ ಕಲಿಯುವುದು ಹೆಚ್ಚಾಗಿದೆ. ಹೇಗಾದರೂ ಆಗಲಿ, ಕಲಿಕೆ ಬಹಳ ಮುಖ್ಯ. ವಿದ್ಯಾರ್ಥಿಗಳು ತಮ್ಮ ಜೀವನವನ್ನು ಹೆಚ್ಚು ಸಂಕೀರ್ಣ ಮಾಡಿಕೊಳ್ಳದೆ ಸರಳವಾಗಿ ಬದುಕುವುದನ್ನು ಕಲಿಯಬೇಕು ಎಂದರು.

ಮಹಾರಾಣಿ ಕೆಂಪನಂಜಮ್ಮಣ್ಣಿ ಅವರು ಮಹಿಳೆಯರ ಸಬಲೀಕರಣಕ್ಕಾಗಿ ಈ ಕಾಲೇಜು ಆರಂಭಿಸಿದರು. ನೀವು ಓದುತ್ತಿರುವ ಕಾಲೇಜಿನ ಇತಿಹಾಸವನ್ನೂ ತಿಳಿದುಕೊಳ್ಳಬೇಕು ಎಂದರು.

ಪುಣೆಯ ಅಮಲ್ನೆರ್ ಪ್ರತಾಪ ಕಾಲೇಜಿನ ಸಹ ಪ್ರಾಧ್ಯಾಪಕ ನಿತಿನ್ ಪಾಟೀಲ್ ಮುಖ್ಯ ಭಾಷಣ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ. ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಿದ್ದರು. ಭೌತಶಾಸ್ತ್ರ ವಿಭಾಗದ ಡಾ.ಬಿ.ಎನ್. ಅನಂತಕುಮಾರ್ ಅತಿಥಿಯಾಗಿ ಪಾಲ್ಗೊಂಡಿದ್ದರು.

ಸಂಚಾಲಕ ವಿ. ನಂದಕುಮಾರ್, ಸಿಬ್ಬಂದಿ ಕಾರ್ಯದರ್ಶಿ ಡಾ.ಡಿ.ಕೆ. ರವಿಶಂಕರ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗೋವಿಂದರಾಜು, ಸಹ ಪ್ರಾಧ್ಯಾಪಕ ಡಾ.ವಿ.ಆರ್. ರಮೇಶ್ ಬಾಬು, ಸಂಘಟನಾ ಕಾರ್ಯದರ್ಶಿ ಡಾ.ಜಿ. ಪರಶುರಾಮ್ಮೂರ್ತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ