ಹುಬ್ಬಳ್ಳಿ: ದೇಶದಲ್ಲಿ ಹಿಂದುಳಿದ ಎಲ್ಲರಿಗೂ ಸೌಲಭ್ಯಗಳು ಸಿಗಬೇಕು. ಅದಕ್ಕಾಗಿ ಶೇ. 50ರಷ್ಟು ಇರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು. ಇದೇ ವೇಳೆ ಜಾತಿ ಗಣತಿಯನ್ನು 3 ತಿಂಗಳಲ್ಲೇ ಮಾಡಬೇಕು ಎಂದು ಒತ್ತಾಯಿಸಿದರು.
ಜಾತಿ ಗಣತಿ ಮಾಡಬೇಕು ಎಂದು 2023ರಲ್ಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆವು. ರಾಹುಲ್ ಗಾಂಧಿ ಮತ್ತು ನಾನು ಆಗ್ರಹಿಸಿದ್ದೇವು. ಆದರೆ, ಆಗ ನಮ್ಮನ್ನು ಟೀಕಿಸಿದ್ದರು. ರಾಹುಲ್ ಗಾಂಧಿ ನಿಲುವು ಸರಿಯಿಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಜಾತಿ ಗಣತಿ ಮಾಡಿದರೆ ಜಾತಿ ಜಾತಿಗೆ ಜಗಳ ಹಚ್ಚಿದಂತಾಗುತ್ತದೆ, ದೇಶ ತುಂಡಾಗುತ್ತದೆ ಅಂತೆಲ್ಲ ಹೇಳಿದ್ದರು. ಆದರೆ, ಅವರದೇ ಸರ್ಕಾರ ಜಾತಿ ಜನಗಣತಿ ಮಾಡುವುದಾಗಿ ಹೇಳಿದೆ. ಈಗ ಜನರ ಒತ್ತಡಕ್ಕೆ ಮಣಿದಿದೆ. ಟೀಕೆ ಮಾಡಿದರೆ ನೀವೇ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿ ಮಾಡಬೇಕು. 3 ತಿಂಗಳಲ್ಲಿ ಕೇಂದ್ರ ಸರ್ಕಾರ ಜಾತಿ, ಜನಗಣತಿ ಮಾಡಲೇಬೇಕು. ಇಲ್ಲದಿದ್ದಲ್ಲಿ ನಿಮಗೆ ನಿರಾಸಕ್ತಿ ಎಂದರ್ಥವಾಗುತ್ತದೆ ಎಂದ ಅವರು, ಶೇ. 50ರಷ್ಟಿರುವ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ನಮ್ಮ ಮುಖ್ಯಮಂತ್ರಿ ಹಾಗೂ ಮಂತ್ರಿಗಳು ಇದಕ್ಕೆ ತಯಾರಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಜಾತಿ ಗಣತಿ ಮಾಡುವಂತೆ ಆಗ್ರಹಿಸಿದ್ದೆವು. ಆಗ ಕೇಂದ್ರ ಸಚಿವರೊಬ್ಬರು ಟೀಕಿಸಿದ್ದರು. ಅವರ ಹೆಸರು ಹೇಳುವುದಿಲ್ಲ ಎಂದ ಖರ್ಗೆ ಅವರು, ಅವರ ಹೆಸರು ಹೇಳುವುದಿಲ್ಲ ಎಂದಿದ್ದಕ್ಕೆ ಅವರಿಗೆ ಹೆದರಿಕೊಂಡಿದ್ದೇನೆ ಎಂದು ಭಾವಿಸಬೇಡಿ. ನಾನು ಮೋದಿ, ಶಾ ಅವರಿಗೇ ಹೆದರುವುದಿಲ್ಲ. ಇನ್ನು ಇವರಿಗೆ ಹೆದರುತ್ತೇನೆಯೇ? ನಾನು ಯಾರಿಗೂ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಆ ಸಚಿವರ ಹೆಸರು ಹೇಳಲಿಲ್ಲ.
ಶೇ. 10ರಷ್ಟು ಜನರ ಬಳಿ ಶೇ. 72ರಷ್ಟು ಆಸ್ತಿ ಇದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಾಗಿ ಬೆಲೆ ಏರಿಕೆಯಾಗುತ್ತಿದೆ. ಬಿಜೆಪಿಗರ ಜನಾಕ್ರೋಶ ಕೇಂದ್ರ ಸರ್ಕಾರದ ವಿರುದ್ಧ ಆಗಬೇಕು ಎಂದು ಹೇಳಿದರು.