ಕಬ್ಬಿನ ಎಫ್‌ಆರ್‌ಪಿ ₹ 4500ಕ್ಕೆ ಹೆಚ್ಚಿಸಿ: ಶಾಂತಕುಮಾರ

KannadaprabhaNewsNetwork |  
Published : Sep 19, 2026, 02:30 AM IST
ಶಾಂತಕುಮಾರ | Kannada Prabha

ಸಾರಾಂಶ

ಸದ್ಯ ಎಫ್‌ಆರ್‌ಪಿ ದರ ₹ 3650 ಇದ್ದು, ರೈತರು ನಷ್ಟಕ್ಕೆ ಒಳಗಾಗಲಿದ್ದಾರೆ. ಕಬ್ಬು ಇಳುವರಿ ಈ ವರ್ಷ ಕನಿಷ್ಠ 50 ಲಕ್ಷ ಟನ್‌ ಕಬ್ಬು ಉತ್ಪಾದನೆ ಕುಂಠಿತಗೊಳ್ಳುವ ಸಾಧ್ಯತೆ ಇದೆ.

ಹುಬ್ಬಳ್ಳಿ:

ಬರಗಾಲದ ಸಂಕಷ್ಟ, ಯುದ್ಧದ ಪರಿಣಾಮ ರಸಗೊಬ್ಬರ ಬೆಲೆ ಹೆಚ್ಚಳ, ಕಬ್ಬು ಇಳುವರಿ ಕಡಿಮೆ ಹಾಗೂ ಉತ್ಪಾದನಾ ವೆಚ್ಚ ವಿಪರೀತ ಏರಿಕೆಯಾಗಿದ್ದು, ಕಬ್ಬಿನ ಎಫ್‌ಆರ್‌ಪಿ ದರವನ್ನು ₹ 3650ಗಳಿಂದ ₹ 4500ಕ್ಕೆ ಹೆಚ್ಚಿಸಬೇಕೆಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ ಒತ್ತಾಯಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಎಫ್‌ಆರ್‌ಪಿ ದರ ₹ 3650 ಇದ್ದು, ರೈತರು ನಷ್ಟಕ್ಕೆ ಒಳಗಾಗಲಿದ್ದಾರೆ. ಕಬ್ಬು ಇಳುವರಿ ಈ ವರ್ಷ ಕನಿಷ್ಠ 50 ಲಕ್ಷ ಟನ್‌ ಕಬ್ಬು ಉತ್ಪಾದನೆ ಕುಂಠಿತಗೊಳ್ಳುವ ಸಾಧ್ಯತೆ ಇದೆ. ಎಫ್‌ಆರ್‌ಪಿ ದರ ಹೆಚ್ಚಿಸದಿದ್ದರೆ ರೈತರು ಮತ್ತಷ್ಟು ಸಂಕಷ್ಟಕ್ಕೊಳಗಾಗಲಿದ್ದಾರೆ ಎಂದರು.

ಕೇಂದ್ರ ಸರ್ಕಾರ 10 ದಶಲಕ್ಷ ಮಿಲಿಯನ್‌ ಟನ್‌ ಸಕ್ಕರೆ ರಫ್ತು ಮಾಡಿದ್ದರಿಂದ ದೇಶದಲ್ಲಿ ಸಕ್ಕರೆ ಬೆಲೆ ಹೆಚ್ಚಳಗೊಂಡು ಜನಸಾಮಾನ್ಯರು ತೊಂದರೆಗೊಳಗಾಗಿದ್ದಾರೆ. ಸಕ್ಕರೆ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕಬ್ಬು ನುರಿಸುವ ಕಾರ್ಯ ಬೇಗ ಆರಂಭಿಸುವಂತೆ ಕಾರ್ಖಾನೆಗಳಿಗೆ ಸೂಚಿಸಿರುವುದು ಒಳ್ಳೆಯ ಬೆಳವಣಿಗೆ ಎಂದ ಅವರು, ಕಬ್ಬು ಇಳುವರಿ ಆಧರಿಸಿ ಎಥೆನಾಲ್‌ ಉತ್ಪಾದನೆಗೆ ಅವಕಾಶಕೊಡಬೇಕು. ಕಬ್ಬು ಕಡಿಮೆ ಇದ್ದಾಗ ಎಥಿನಾಲ್‌ಗೆ ಅವಕಾಶ ಕೊಡಬಾರದು. ಆಲೆ ಮನೆಗಳಲ್ಲಿ ಎಥಿನಾಲ್‌ ಬಳಕೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಪ್ರತಿ ಕ್ವಿಂಟಲ್‌ಗೆ ₹ 800 ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿದ ಅವರು, ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ರಹದಾರಿ ನೀಡಿ ಭೂಮಿ, ನೀರು, ವಿದ್ಯುತ್‌ ಹಾಗೂ ಇತರ ಮೂಲಸೌಲಭ್ಯ ನೀಡುತ್ತದೆ. ಆದರೆ, ಸರ್ಕಾರದ ಆದೇಶಗಳನ್ನು ಧಿಕ್ಕರಿಸಿ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವ ಕಠಿಣ ಕಾನೂನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಬರಗಾಲ ಪೀಡಿತ ಜಿಲ್ಲೆಗಳಲ್ಲಿನ ರೈತರ ಬೆಳೆ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ ಶಾಂತಕುಮಾರ, ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಮರ್ಪಕವಾಗಿ ಪೂರೈಸದೆ ಹಿನ್ನೆಲೆ ಬೆಳೆ ಒಣಗುತ್ತಿವೆ. ಕೂಡಲೇ ಸಮರ್ಪಕ ವಿದ್ಯುತ್‌ ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಬೆಳಗಾಂಕರ, ರಾಜ್ಯ ಉಪಾಧ್ಯಕ್ಷ ಸುರೇಶ ಮಾಲಿಪಾಟೀಲ್‌‍, ಜಿಲ್ಲಾ ಉಪಾಧ್ಯಕ್ಷ ಉಳುವೆಪ್ಪ ಬಳಗೇರಾ. ಪ್ರಧಾನ ಕಾರ್ಯದರ್ಶಿ ಪರಶುರಾಮ ಎತ್ತಿನಗುಡ್ಡ, ಕಲ್ಲಪ್ಪ ಕುರಟ್ಟಿ, ಅತ್ತಳ್ಳಿ ದೇವರಾಜ್‌‍, ಬರಡನಪುರ ನಾಗರಾಜ್‌, ಮಂಜುನಾಥ್‌ ಉಪಸ್ಥಿತರಿದ್ದರು.ಇಡ್ಲಿ ವಡಾ ತಿಂದರೆ ಸಮಸ್ಯೆ ಬಗೆಹರಿಯಲ್ಲ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬೆಳಗಿನ ಜಾವ ಎಪಿಎಂಸಿಗೆ ಭೇಟಿ ನೀಡಿ ಇಡ್ಲಿ-ವಡಾ ತಿಂದು ಬಂದರೆ ರೈತರ ಸಮಸ್ಯೆ ಬಗೆಹರಿಯಲ್ಲ ಎಂದು ಕುರುಬರ ಶಾಂತಕುಮಾರ ಟೀಕಿಸಿದರು. ರಾಜ್ಯಾದ್ಯಂತ ಎಲ್ಲ ಎಪಿಎಂಸಿಗಳಲ್ಲಿ ಕಾನೂನು ಬಾಹಿರವಾಗಿ ರೈತರಿಂದ ಶೇ.10 ರಷ್ಟು ಕಮಿಷನ್‌ ವಸೂಲಿ ಮಾಡುತ್ತಿರುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ಆಗ ಇವರ ಭೇಟಿ ಸಾರ್ಥಕವಾಗುತ್ತದೆ ಇಲ್ಲದಿದ್ದರೆ ಭೇಟಿ ಕೊಟ್ಟಿದ್ದು, ಇಡ್ಲಿ ವಡಾ ತಿಂದಿದ್ದು ಬರೀ ನಾಟಕವಾಗುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡೆಯಿಂದ ದೈಹಿಕ, ಮಾನಸಿಕ ಬೆಳವಣಿಗೆ: ಶಿವಶೇಖರ್
ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 77.45 ಲಕ್ಷ ರು. ಲಾಭ