ರಾಜ್ಯ ಅಧ್ಯಕ್ಷೆ ರುದ್ರಮ್ಮ ಆಗ್ರಹ । ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯ
ರಾಜ್ಯದಲ್ಲಿರುವ 5588 ಮಹಿಳಾ ಒಕ್ಕೂಟಗಳ ಸಂಪನ್ಮೂಲ ವ್ಯಕ್ತಿಗಳ ಗೌರವಧನವನ್ನು ಸರ್ಕಾರ ಹೆಚ್ಚಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಹಾಗೂ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಸಖಿಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷೆ ರುದ್ರಮ್ಮ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾದ ಇಲಾಖೆಯಡಿಯಲ್ಲಿ ಪ್ರತಿ ಗ್ರಾಪಂ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಂಜೀವಿನಿ ಹಾಗು ಮಹಿಳಾ ಸಂಘಗಳ ಒಕ್ಕೂಟಗಳ ಮುಖ್ಯ ಪುಸ್ತಕ ಬರಹಗಾರರು ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಸ್ಥಳೀಯ ಮಟ್ಟದಲ್ಲಿ ಮಹಿಳೆಯರ ಸಬಲತೆಗೆ ಕಾರ್ಯನಿರ್ವಹಿಸುತ್ತಿದ್ದೇವೆ. ನಮಗೆ ತಿಂಗಳಿಗೆ ಐದು ಸಾವಿರ ಹಾಗೂ ಸಹಾಯಕಿ ಸಖಿಯರಿಗೆ ₹2500 ಗೌರವಧನವಿದೆ. ಇದನ್ನು ಹೆಚ್ಚಿಸಬೇಕು. ಬೆಂಗಳೂರಿನಲ್ಲಿ ನ.11ರಂದು ನಡೆದ ಹೋರಾಟದ ಫಲವಾಗಿ ಡಿ. 6ರಂದು 24 ಸರ್ಕಾರದ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಯಿತು. ಸಭೆಯಲ್ಲಿ ಕೆಲವು ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದಾರೆ. ಅವುಗಳನ್ನು ಬೇಗ ಈಡೇರಿಸಬೇಕು. ಗೌರವ ಧನ ಸಹಿತ ಹೆರಿಗೆ ರಜೆ ನೀಡಬೇಕು. ಮೊಬೈಲ್‌ಗಳಿಗೆ ಕರೆನ್ಸಿ ಹಾಕಿಸಬೇಕು. ಟಿಎ , ಡಿಎ ನೀಡಬೇಕು. ಕೆಲಸದ ಮೇಲೆ ಅಧಿಕಾರಿಗಳು ಹೇರುವ ಮಾನಸಿಕ ಒತ್ತಡ ಕಡಿಮೆ ಮಾಡಲು ಮೇಲಾಧಿಕಾರಿಗಳಿಗೆ ನೋಟಿಸ್ ನೀಡಬೇಕು. ಗುರುತಿನ ಚೀಟಿ ಹಾಗೂ ಸಮವಸ್ತ್ರ, ಸೇವಾ ಹಿರೇತನದ ಮೇಲೆ ಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.ಪ್ರತಿ ವರ್ಷ ಒಕ್ಕೂಟಗಳಿಗೆ ಆರು ಲಕ್ಷ ಅನುದಾನ ಬಿಡುಗಡೆಗೊಳಿಸಬೇಕು. ಗ್ರಾಪಂ ಶೇ.80ರಷ್ಟು ಕಾರ್ಯನಿರ್ವಹಿಸುತ್ತಿರುವುದರಿಂದ ಗ್ರಾಪಂ ಇಲಾಖೆಗೆ ನಮ್ಮ ಇಲಾಖೆಯನ್ನು ಸೇರ್ಪಡ ಮಾಡಬೇಕು. ಇಎಸ್ಐ ಸವಲತ್ತು ನೀಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಹೇಮಾ ದಳವಾಯಿ, ಶಾಂತಾ ತಿರ್ಲಾಪೂರ, ಶರಣಮ್ಮ, ಜಯಶ್ರೀ ಹಿರೇಕುರುಬರ್, ಚಂದ್ರಕಲಾ, ಶಾರದಾ ಇನಾಮತಿ ಇದ್ದರು.