ಸಂಕಷ್ಟದಲ್ಲಿರುವ ಅಕ್ಷರ ದಾಸೋಹ ನೌಕರರ ವೇತನ ಹೆಚ್ಚಿಸಲು ಆಗ್ರಹ

KannadaprabhaNewsNetwork |  
Published : Oct 04, 2026, 02:30 AM IST
ಕನಕಗಿರಿ ತಾಲೂಕು ಪ್ರಥಮ ಸಮ್ಮೇಳನದಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಮಂಟನಗೌಡ ನಾಡಗೌಡ ಮಾತನಾಡಿದರು. | Kannada Prabha

ಸಾರಾಂಶ

ಕನಕಗಿರಿ ಪಟ್ಟಣದ ಶಾಸಕರ ಮಾ.ಹಿ.ಪ್ರಾ. ಶಾಲೆಯಲ್ಲಿ ಶನಿವಾರ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಕನಕಗಿರಿ ತಾಲೂಕು ಪ್ರಥಮ ಸಮ್ಮೇಳನ ನಡೆಯಿತು.

ಕನಕಗಿರಿ: ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಗೌರವಧನಕ್ಕೆ ದುಡಿಯುತ್ತಿರುವ ಅಕ್ಷರ ದಾಸೋಹ ನೌಕರರಿಗೆ ಪ್ರಸ್ತುತ ದುಬಾರಿ ಜೀವನಕ್ಕೆ ತಕ್ಕ ವೇತನವಿಲ್ಲದೆ ಸಂಕಷ್ಟದಲ್ಲಿದ್ದಾರೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಮಂಟನಗೌಡ ನಾಡಗೌಡ ಹೇಳಿದರು.

ಪಟ್ಟಣದ ಶಾಸಕರ ಮಾ.ಹಿ.ಪ್ರಾ. ಶಾಲೆಯಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಕನಕಗಿರಿ ತಾಲೂಕು ಪ್ರಥಮ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಅಕ್ಷರ ದಾಸೋಹ ನೌಕರರು ಕನಿಷ್ಠ ವೇತನ, ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಹೋರಾಟಗಳನ್ನು ನಡೆಸಿದರೂ ನಿರೀಕ್ಷಿತ ನ್ಯಾಯ ದೊರೆತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೌಕರರ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ ಎಂದು ದೂರಿದರು.

ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ ವಿವಿಧ ಕಾರ್ಮಿಕರಿಗೆ ದೊರೆಯುವ ವೇತನಕ್ಕೆ ಹೋಲಿಕೆ ಮಾಡಿದರೆ ಅಕ್ಷರ ದಾಸೋಹ ನೌಕರರಿಗೆ ನೀಡಲಾಗುತ್ತಿರುವ ಗೌರವಧನ ಅತ್ಯಂತ ಕಡಿಮೆಯಾಗಿದೆ. ಗ್ರಾಪಂಗಳಲ್ಲಿ ನೀರಗಂಟಿಗಳಿಗೆ ಹಾಗೂ ಇತರ ಕಾರ್ಮಿಕರಿಗೆ ಹೆಚ್ಚಿನ ವೇತನ ದೊರೆಯುತ್ತಿರುವ ಸಂದರ್ಭದಲ್ಲಿ ಬಿಸಿಯೂಟ ನೌಕರರಿಗೆ ಕೇವಲ ಕೆಲವೇ ಸಾವಿರ ರುಪಾಯಿಗಳ ಗೌರವಧನ ನೀಡಲಾಗುತ್ತಿದೆ. ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ತರುವ ರೀತಿಯಲ್ಲಿ ಸಂಘಟಿತ ಹಾಗೂ ನಿರಂತರ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.

ಶಾಸಕರು ಮತ್ತು ಸಚಿವರಿಗೆ ದೊರೆಯುವ ವೇತನ, ಭತ್ಯೆ ಹಾಗೂ ಪಿಂಚಣಿ ವ್ಯವಸ್ಥೆಯನ್ನು ಉಲ್ಲೇಖಿಸಿದ ಅವರು, ಮಕ್ಕಳಿಗೆ ಬಿಸಿಯೂಟ ನೀಡುವಂತಹ ಮಹತ್ವದ ಕೆಲಸ ನಿರ್ವಹಿಸುತ್ತಿರುವ ಅಕ್ಷರ ದಾಸೋಹ ನೌಕರರಿಗೂ ಗೌರವಯುತ ವೇತನ ಮತ್ತು ಸಾಮಾಜಿಕ ಭದ್ರತೆ ದೊರೆಯಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಮಾತನಾಡಿ, ಕ್ಷೇತ್ರದ ಶಾಸಕರು ಆದ ಸಚಿವ ಶಿವರಾಜ ಎಸ್. ತಂಗಡಗಿ ಅವರು ಅಕ್ಷರ ದಾಸೋಹ ನೌಕರರ ಬೇಡಿಕೆಗಳ ಪರವಾಗಿ ಅಗತ್ಯ ಮಟ್ಟದಲ್ಲಿ ಕೆಲಸ ಮಾಡಿಲ್ಲ ಎಂಬುದು ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ ಎಂದರು.

ಸಿಐಟಿಯು ಕನಕಗಿರಿ ತಾಲೂಕು ಸಂಚಾಲಕರಾದ ಮಲ್ಲಪ್ಪ ಮ್ಯಾಗಡೆ, ಪರಶುರಾಮ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಡಗ್ಗಿ, ಜಿಲ್ಲಾ ಸಹ ಕಾರ್ಯದರ್ಶಿ ಬಾಳಪ್ಪ ಹುಲಿಹೈದರ ಹಾಗೂ ಅಕ್ಷರ ದಾಸೋಹ ನೌಕರರು ಭಾಗವಹಿಸಿದ್ದರು.

ಸಮ್ಮೇಳನದ ನಿರ್ಣಯಗಳು: ಅಕ್ಷರ ದಾಸೋಹದ ನೌಕರರಿಗೆ ಕನಿಷ್ಠ ವೇತನ ಜಾರಿ, ಗೌರವಧನ ಹೆಚ್ಚಳ, ಕಾರ್ಮಿಕ ಸ್ಥಾನಮಾನ, ನಿವೃತ್ತಿ ಸೌಲಭ್ಯ, ಸೇವಾ ಭದ್ರತೆ, ಕೆಲಸದ ಸಮಯ ನಿಗದಿ, ಹೆಚ್ಚುವರಿ ಕೆಲಸಕ್ಕೆ ಭತ್ಯೆ, ಸಾಮಾಜಿಕ ಭದ್ರತೆ, ರಜೆ ಸೌಲಭ್ಯ, ಕೆಲಸದ ಸ್ಥಳದಲ್ಲಿ ಸುರಕ್ಷತೆ, ಅಡುಗೆ ಸಾಮಗ್ರಿಗಳ ಗುಣಮಟ್ಟ, ಬಾಕಿ ಗೌರವಧನ ಬಿಡುಗಡೆ, ಕೆಲಸದ ಸ್ಥಳದಲ್ಲಿ ಗೌರವ, ಮಹಿಳಾ ನೌಕರರಿಗೆ ವಿಶೇಷ ಸೌಲಭ್ಯ, ತಾಲೂಕಿನಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ, ತರಬೇತಿ ಮತ್ತು ಆರೋಗ್ಯ ತಪಾಸಣೆ, ಕಾಲಕ್ಕನುಗುಣವಾಗಿ ವೇತನ ಪರಿಷ್ಕರಣೆ, ಸಂಘಟಿಸುವ ಹಕ್ಕು, ಸರ್ಕಾರದೊಂದಿಗೆ ತ್ರಿಪಕ್ಷೀಯ ಚರ್ಚೆ, ರಾಜ್ಯಮಟ್ಟದ ಹೋರಾಟಕ್ಕೆ ಬೆಂಬಲ, ಸಂಘಟನೆಯನ್ನು ಬಲಪಡಿಸಲು ಅವಕಾಶದ ಸೌಲಭ್ಯಗಳನ್ನು ಒದಗಿಸಲು ತೀರ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ
ಮೇವು ಕೊರತೆ: ರೈತರಲ್ಲಿ ಆತಂಕ