ಅರಣ್ಯ ನಾಶದಿಂದ ಹೆಚ್ಚಿದ ಪ್ರಾಣಿ-ಮಾನವ ಸಂಘರ್ಷ

KannadaprabhaNewsNetwork |  
Published : Oct 05, 2024, 01:36 AM IST
3ಡಿಡಬ್ಲೂಡಿ5 | Kannada Prabha

ಸಾರಾಂಶ

ಕಲಘಟಗಿ, ಅಳ್ನಾವರ ಹಾಗೂ ಧಾರವಾಡ ತಾಲೂಕಿನ ಕೆಲವು ಪ್ರದೇಶ ಗಡಿ ಜಿಲ್ಲೆಗಳ ಅರಣ್ಯಕ್ಕೆ ಹೊಂದಿಕೊಂಡಿದ್ದು, ತಕ್ಕಮಟ್ಟಿಗೆ ಅರಣ್ಯದಿಂದ ಆವೃತವಾಗಿದೆ. ಹೀಗಾಗಿ ಚಿರತೆ ಜಿಲ್ಲೆಗೆ ಆಗಮಿಸುತ್ತಿರುವುದು ಸಾಮಾನ್ಯವಾಗಿದೆ.

ಧಾರವಾಡ:

ಅರಣ್ಯ ನಾಶದಿಂದ ಉಂಟಾಗುತ್ತಿರುವ ಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪಿಸಲು ತೊಂದರೆಯಲ್ಲಿರುವ ವನ್ಯಜೀವಿಗಳನ್ನು ಸಂರಕ್ಷಿಸಬೇಕು. ಅವುಗಳ ಸ್ವಚ್ಛಂದ ಜೀವನ ಉಳಿಸಿ-ಬೆಳೆಸಲು ಎಲ್ಲರೂ ಪ್ರಯತ್ನಿಸಬೇಕೆಂದು ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯೆ ವೈಶಾಲಿ ಕುಲಕರ್ಣಿ ಹೇಳಿದರು.

ಅರಣ್ಯ ಇಲಾಖೆಯ ಧಾರವಾಡ ಪ್ರಾದೇಶಿಕ ವಿಭಾಗದ ಧಾರವಾಡ ವೃತ್ತದಿಂದ 70ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಆಯೋಜಿಸಿದ್ದ ಕಾಲ್ನಡಿಗೆ ಜಾಥಾದಲ್ಲಿ ಅವರು ಮಾತನಾಡಿದರು.

ಸರ್ಕಾರ ರಾಜ್ಯದ ವೈವಿಧ್ಯಮಯವಾದ ಅರಣ್ಯ, ಸಸ್ಯ ಸಂಪತ್ತು ಮತ್ತು ವನ್ಯ ಜೀವಿ ಸಂರಕ್ಷಿಸಲು ಆದ್ಯತೆ ನೀಡಿ ಹೊಸ ಕಾನೂನು ಜಾರಿಗೊಳಿಸುತ್ತಿದೆ. ಜಿಲ್ಲೆಯು ಅರೆ ಮಲೆನಾಡು ಆಗಿದ್ದು, ಬೆಳಗಾವಿ ಹಾಗೂ ಉತ್ತರಕನ್ನಡ ಜಿಲ್ಲೆಗಳ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಭೂಪ್ರದೇಶವನ್ನು ಹೆಚ್ಚು ಅರಣ್ಯೀಕರಣಗೊಳಿಸಲು ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.

ಅರಣ್ಯ ನಾಶದಿಂದಾಗಿ ಪ್ರಾಣಿಗಳು ನಾಡಿಗೆ ಆಗಮಿಸುತ್ತಿದ್ದು, ಇದರಿಂದ ಮಾನವ ಹಾಗೂ ಪ್ರಾಣಿ ಸಂರ್ಘಷವು ದಿನದಿಂದ ದಿನಕ್ಕೆ ಸಾಮಾನ್ಯವಾಗುತ್ತಿದೆ. ಇದನ್ನು ತಪ್ಪಿಸಲು ಮತ್ತು ಅರಣ್ಯ ನಾಶ ತಡೆಗಟ್ಟಲು ಸರ್ಕಾರವು ಅರಣ್ಯ ಒತ್ತುವರಿ ತೆರವುಗೊಳಿಸಲು ಕಠಿಣ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲೆಯ ಭೂಪ್ರದೇಶ ನೋಡಿದಾಗ ಶೇ. 33ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ ಈಗ ಜಿಲ್ಲೆಯಲ್ಲಿ ಶೇ. 8.5ರಷ್ಟು ಅರಣ್ಯವಿದೆ. ಜಿಲ್ಲೆಯಲ್ಲಿ ಕನಿಷ್ಠ ಶೇ. 20ರಷ್ಟು ಭೂಪ್ರದೇಶವನ್ನು ಅರಣ್ಯೀಕರಣಗೊಳಿಸಲು ಅರಣ್ಯ ಇಲಾಖೆಯಿಂದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕಲಘಟಗಿ, ಅಳ್ನಾವರ ಹಾಗೂ ಧಾರವಾಡ ತಾಲೂಕಿನ ಕೆಲವು ಪ್ರದೇಶ ಗಡಿ ಜಿಲ್ಲೆಗಳ ಅರಣ್ಯಕ್ಕೆ ಹೊಂದಿಕೊಂಡಿದ್ದು, ತಕ್ಕಮಟ್ಟಿಗೆ ಅರಣ್ಯದಿಂದ ಆವೃತವಾಗಿದೆ. ಹೀಗಾಗಿ ಚಿರತೆ ಜಿಲ್ಲೆಗೆ ಆಗಮಿಸುತ್ತಿರುವುದು ಸಾಮಾನ್ಯವಾಗಿದೆ. ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ಕಲಘಟಗಿ ಭಾಗದ ಅರಣ್ಯದಲ್ಲಿ ಆನೆಗಳು ಸಹ ಆಗಮಿಸಿ ಎರಡು ಮೂರು ತಿಂಗಳು ವಾಸಿಸುತ್ತಿವೆ ಎಂದರು.

ಜಿಲ್ಲಾ ಉಪ ಅರಣ್ಯಸಂರಕ್ಷಣಾಧಿಕಾರಿ ವಿವೇಕ ಕವರಿ ಪ್ರಾಸ್ತಾವಿಕ ಮಾತನಾಡಿ, ವನ್ಯಜೀವಿ ಸಪ್ತಾಹದ ಅಂಗವಾಗಿ ಅರಣ್ಯ ಇಲಾಖೆಯ ಕಚೇರಿಯಲ್ಲಿ ಅ. 4ರಂದು ಬೆಳಗ್ಗೆ 10ಕ್ಕೆ ಉರಗ ಸಂರಕ್ಷಣಾ ಕಾರ್ಯಾಗಾರ, ಕವಿವಿಯಲ್ಲಿ ಮಧ್ಯಾಹ್ನ 2ರಿಂದ ಮಾನವ-ವನ್ಯಜೀವಿ ಸಹಬಾಳ್ವೆ ಕುರಿತು ಕಾರ್ಯಾಗಾರ, ಅ. 5ರಂದು ಅರಣ್ಯ ಸಂಕೀರ್ಣ ವಲಯದಲ್ಲಿ ಬೆಳಗ್ಗೆ 10ಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ವಾಲಿಬಾಲ್ ಪಂದ್ಯಾವಳಿ, ಅ. 7ರಂದು ಮೂರ್ತಿ ಟ್ರಸ್ಟ್ ವನಭವನದಲ್ಲಿ ಬೆಳಗ್ಗೆ 10ಕ್ಕೆ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ, ಅ. 8ರಂದು ಮೂರ್ತಿ ಟ್ರಸ್ಟ್ ವನಭವನದಲ್ಲಿ ಬೆಳಗ್ಗೆ 11ಕ್ಕೆ ಸಮಾರೋಪ ಹಮ್ಮಿಕೊಳ್ಳಲಾಗಿದೆ ಎಂದರು.

ಈ ವೇಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳಾ ವಿ.ಎಚ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಶಿವಕುಮಾರ, ಪಿ.ಎಸ್. ವರೂರ, ಪ್ರದೀಪ ಎಸ್. ಪವಾರ, ಯಲ್ಲಾನಾಯಕ ಹಮಾನಿ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ