ಪರಶಿವಮೂರ್ತಿ ಮಾಟಲದಿನ್ನಿ
ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ 300ಕ್ಕೂ ಅಧಿಕ ಕಡೆ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಿದ್ಧತೆಯು ನಡೆದಿದ್ದು, ಬಡಾವಣೆಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ ಯುವಕ ಸಂಘಟನೆಗಳು ದೊಡ್ಡದೊಡ್ಡ ವೇದಿಕೆ, ಪೆಂಡಾಲ್ ನಿರ್ಮಾಣ ಹಾಗೂ ವಿದ್ಯುತ್ ಅಲಂಕಾರ ಕಾರ್ಯದಲ್ಲಿ ತೊಡಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಗಣೇಶ ಮೂರ್ತಿಗಳ ಮಾರಾಟ ಹೆಚ್ಚಾಗಿದ್ದು, ಮೂರ್ತಿ ತಯಾರಿಕೆಗೆ ಬಳಸುವ ಸಾಮಗ್ರಿಗಳ ದರ ಏರಿಕೆಯಿಂದ ಮೂರ್ತಿಗಳ ಬೆಲೆಯಲ್ಲೂ ಏರಿಕೆಯಾಗಿದೆ.
ಖರ್ಚೂ ಏರಿಕೆ:ಗಣೇಶ ಮೂರ್ತಿಯ ಬೆಲೆಯಷ್ಟೇ ಅಲ್ಲದೆ ಪೆಂಡಾಲ್, ವೇದಿಕೆ, ವಿದ್ಯುತ್ ದೀಪ, ಅಲಂಕಾರ ಸಾಮಗ್ರಿ, ಹೂವು ಸೇರಿದಂತೆ ಗಣೇಶೋತ್ಸವಕ್ಕೆ ಅಗತ್ಯವಿರುವ ವಿವಿಧ ವಸ್ತುಗಳ ದರದಲ್ಲೂ ಏರಿಕೆಯಾಗಿದೆ. ಇದರಿಂದ ಸಾರ್ವಜನಿಕ ಗಣೇಶೋತ್ಸವ ಆಯೋಜಿಸುವ ಯುವಕ ಸಂಘಟನೆಗಳಿಗೆ ಕಳೆದ ವರ್ಷಕ್ಕಿಂತ ಹೆಚ್ಚಿನ ವೆಚ್ಚ ಭರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಹಲವು ಕಡೆ ಯುವಕರು ದೊಡ್ಡದೊಡ್ಡ ವೇದಿಕೆಗಳನ್ನು ನಿರ್ಮಿಸುತ್ತಿದ್ದು, ಬಡಾವಣೆಗಳಲ್ಲಿ ಗಣೇಶೋತ್ಸವದ ಸಿದ್ಧತೆಗಳು ಹಬ್ಬದ ವಾತಾವರಣ ಮೂಡಿಸಿವೆ.
ಗಣೇಶೋತ್ಸವದ ಸಿದ್ಧತೆಯ ನಡುವೆ ಮಳೆ ಕೊರತೆಯ ಆತಂಕವೂ ಗ್ರಾಮೀಣ ಭಾಗದ ಜನರನ್ನು ಕಾಡುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದರಿಂದ ಕೃಷಿ ಚಟುವಟಿಕೆ ಮೇಲೆ ಪರಿಣಾಮ ಬೀರುವ ಆತಂಕ ರೈತರಲ್ಲಿದೆ. ಕೃಷಿ ಆದಾಯದ ನಿರೀಕ್ಷೆಯಲ್ಲಿರುವ ಕುಟುಂಬಗಳಿಗೆ ಮಳೆ ಕೊರತೆ ಮತ್ತಷ್ಟು ಆರ್ಥಿಕ ಒತ್ತಡ ತಂದಿದೆ. ಹಬ್ಬದ ಸಂಭ್ರಮದ ನಡುವೆ ಬರದ ಚಿಂತೆ, ಬೆಲೆ ಏರಿಕೆಯ ನಡುವೆ ಉತ್ಸವದ ಖರ್ಚು. ಇದು ಈ ಬಾರಿಯ ಗಣೇಶೋತ್ಸವದ ಮತ್ತೊಂದು ಮುಖವಾಗಿದೆ.
ಕಳೆದ ವರ್ಷಕ್ಕಿಂತ ಈ ವರ್ಷ ಗಣೇಶ ಮೂರ್ತಿಗಳಿಗೆ ಬೇಡಿಕೆ ಉತ್ತಮವಾಗಿದೆ. ಸುಮಾರು 400 ಮೂರ್ತಿಗಳನ್ನು ಸಿದ್ಧಪಡಿಸಿದ್ದು, ಈಗಾಗಲೇ 350ಕ್ಕೂ ಅಧಿಕ ಮೂರ್ತಿಗಳು ಮಾರಾಟವಾಗಿವೆ. ಸಾಮಗ್ರಿಗಳ ದರ ಹೆಚ್ಚಾಗಿರುವುದರಿಂದ ಮೂರ್ತಿಗಳ ದರವೂ ಹೆಚ್ಚಾಗಿದೆ. ಬೇಡಿಕೆ ಉತ್ತಮವಾಗಿರುವುದರಿಂದ ಲಾಭವೂ ಹೆಚ್ಚಾಗಿದೆ ಎನ್ನುತ್ತಾರೆ. ಕುದರಿಮೋತಿಯ ಮೂರ್ತಿ ತಯಾರಕ ನಾಗರಾಜ ಚಿತ್ರಗಾರ.