ವ್ಯಾಪಕ ಸೆಕೆಯಿಂದ ಮನೆಯಿಂದ ಹೊರಬರದ ಸ್ಥಿತಿ । ಅಂತರ್ಜಲಮಟ್ಟ ದಿನದಿಂದ ದಿನಕ್ಕೆ ಕುಸಿತ
ಕನ್ನಡಪ್ರಭ ವಾರ್ತೆ ಭಟ್ಕಳ
ತಾಲ್ಲೂಕಿನಲ್ಲಿ ಅಂತರ್ಜಲಮಟ್ಟ ಇಳಿಕೆ ಕಂಡಿದ್ದರಿಂದ ಹೊಳೆ, ಕೊಳ್ಳಗಳು ಬತ್ತಿದ್ದು, ಪರಿಣಾಮ ತೋಟಗಳು ನೀರಿಲ್ಲದೇ ಒಣಗುವಂತಾಗಿದೆ.ತಾಲೂಕಿನಲ್ಲಿ ಕಳೆದ ವರ್ಷಕ್ಕಿಂತ ಈ ಸಲ ಬಿಸಿಲ ತಾಪಮಾನ ಹೆಚ್ಚಾಗಿದ್ದು, ವ್ಯಾಪಕ ಸೆಕೆಯಿಂದ ಮನೆಯಿಂದ ಹೊರಬರದ ಸ್ಥಿತಿ ಇದೆ. ದಿನದಿಂದ ದಿನಕ್ಕೆ ಬಿಸಿಲ ಹೊಡೆತ ಹೆಚ್ಚುತ್ತಿದೆ.ಈ ಸಲ ಎಪ್ರಿಲ್ ಮೂರನೇ ವಾರದಲ್ಲೇ ಕೆರೆ, ಹೊಳೆ, ಕೊಳ್ಳಗಳು ಬತ್ತಲಾರಂಭಿಸಿದ್ದರಿಂದ ತೋಟಗಳಿಗೆ ನೀರು ಹಾಯಿಸಲು ಪರದಾಡುವಂತಾಗಿದೆ. ಅಂತರ್ಜಲ ಮಟ್ಟ ಇಳಿಕೆ ಕಂಡಿದ್ದರಿಂದ ದಿನಕ್ಕೆ ಐದಾರು ತಾಸು ತೋಟಕ್ಕೆ ನೀರು ಹಾಕುತ್ತಿದ್ದವರು ಕೇವಲ ಒಂದು ತಾಸಿಗೆ ಸೀಮಿತಗೊಂಡಿದೆ. ಕೆಲವು ಕಡೆ ಹೊಳೆಯಲ್ಲಿ ನೀರಿನ ಹರಿವು ಗಣನೀಯವಾಗಿ ಕಡಿಮೆಯಾಗಿದ್ದರಿಂದ ತೋಟಕ್ಕೆ ಸರಿಯಾಗಿ ನೀರು ಹಾಯಿಸಲು ಆಗುತ್ತಿಲ್ಲ. ಆದರೆ ಇಷ್ಟರ ವರೆಗೆ ಕುಡಿಯುವ ನೀರಿಗೆ ತೊಂದರೆ ಆಗಿಲ್ಲ. ಇದೇ ರೀತಿ ಬಿಸಿಲ ತಾಪಮಾನ ಮುಂದುವರಿದರೆ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಬರಲಿದೆ.
ಅಡಕೆ ದರ ಕ್ವಿಂಟಲ್‌ಗೆ ₹46-48 ಸಾವಿರ ಇದ್ದರೂ ಸಹ ಇಳುವರಿ ಕಡಿಮೆ ಇದ್ದುದರಿಂದ ರೈತರಿಗೆ ದರ ಏರಿಕೆಯಿಂದ ಲಾಭ ಆಗಿಲ್ಲ. ಇದೀಗ ಬಿಸಿಲ ತಾಪಮಾನದಿಂದ ಹೊಳೆಗಳು ಬತ್ತುತ್ತಿದ್ದು, ತೋಟಕ್ಕೆ ಸರಿಯಾಗಿ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಸದ್ಯದಲ್ಲೇ ಮಳೆ ಬಂದರೆ ಮಾತ್ರ ತೋಟ ಉಳಿಸಿಕೊಳ್ಳಬಹುದು. ಇಲ್ಲದಿದ್ದಲ್ಲಿ ಸುಡು ಬಿಸಿಲಿಗೆ ತೋಟ ನಾಶವಾಗಬಹುದು. ದಿನದಿಂದ ದಿನಕ್ಕೆ ಸೆಕೆಯ ಪ್ರಮಾಣ ಜೋರಾಗುತ್ತಿದೆ. ತೀವ್ರ ಸೆಕೆಯಿಂದ ಜನರು ಬಳಲಿದ್ದಾರೆ. ಪೇಟೆಯಲ್ಲಿ ಬಿರುಬಿಸಿಲು ಜೋರಾಗಿದ್ದು ಹಗಲು ಹೊತ್ತಿನಲ್ಲಿ ತಿರುಗುವುದೇ ಬೇಡ ಎಂಬಂತಾಗಿದೆ. ಗ್ರಾಮಾಂತರ ಪ್ರದೇಶದಲ್ಲೂ ಸೆಕೆಯ ಪ್ರಮಾಣ ಹೆಚ್ಚಿದ್ದು, ಮಳೆ ಬಂದರೆ ಮಾತ್ರ ಸೆಕೆಯ ಪ್ರಮಾಣ ಕಡಿಮೆ ಆಗಬಹುದು.