ಮುಂಡರಗಿ: ಕಳೆದ 25 ವರ್ಷಗಳಿಂದ ಅನೇಕ ದಲಿತ ಕುಟುಂಬಗಳಿಗೆ ಹಕ್ಕುಪತ್ರ ಕೊಡದಿರುವುದು ನಮ್ಮ ದೌರ್ಭಾಗ್ಯವಾಗಿದೆ ಎಂದು ಅಂಬೇಡ್ಕರ್ ದಲಿತ ಚಳವಳಿ ವೇದಿಕೆ ತಾಲೂಕು ಅಧ್ಯಕ್ಷ ಲಕ್ಷ್ಮಣ ತಗಡಿನಮನಿ ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಂಘಟನೆಯ ಡೋಣಿ ಗ್ರಾಮದ ಯುವ ಮುಖಂಡ ದೇವರಾಜ ಕಟ್ಟಿಮನಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ನಾವು ಈಗಾಗಲೇ ನಮ್ಮ ಹಕ್ಕಿಗಾಗಿ ಮತ್ತು ನಮ್ಮ ಹಕ್ಕುಪತ್ರಕ್ಕಾಗಿ ಅನೇಕ ಬಾರಿ ಮನವಿ ಸಲ್ಲಿಸುತ್ತಾ ಬಂದಿದ್ದು, ಇನ್ನು ನಮಗೆ ತಾಳ್ಮೆ ಮುಗಿದಿದೆ. 7 ದಿನಗಳ ಕಾಲವಕಾಶ ತೆಗೆದುಕೊಳ್ಳಿ. ಅಷ್ಟರಲ್ಲಿ ನಮ್ಮ ಸಮಸ್ಯೆಗೆ ಒಂದು ಪರಿಹಾರ ನೀಡಬೇಕು. ನೀಡದಿದ್ದರೆ ಎಲ್ಲ ಫಲಾನುಭವಿಗಳೊಂದಿಗೆ ತಹಸೀಲ್ದಾರ್ ಕಚೇರಿ ಎದುರಿನಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಆದ್ದರಿಂದ ತಕ್ಷಣವೇ ನಮ್ಮವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿಕೊಂಡರು.
ಪಟ್ಟಣದ ತಾಪಂ ಆವರಣದಿಂದ ಹಲಗೆ ಬಾರಿಸುತ್ತಾ ಹೊರಟ ಪ್ರತಿಭಟನಾಕಾರರು ಬಜಾರ, ಜಾಗ್ರತ ವೃತ್ತ, ಅಂಬೇಡ್ಕರ್ ನಗರದ ಮೂಲಕ ಕೊಪ್ಪಳ ವೃತ್ತಕ್ಕೆ ಬಂದು ಅಲ್ಲಿಂದ ತಹಸೀಲ್ದಾರ್ ಕಚೇರಿ ತಲುಪಿತು. ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಕೆ. ರಾಧಾ ಅವರು ಮನವಿ ಸ್ವೀಕರಿಸಲು ಮುಂದಾದರು. ಆದರೆ ಹೋರಾಟಗಾರರು ಖುದ್ದಾಗಿ ತಹಸೀಲ್ದಾರ್ ಅವರೇ ಬಂದು ಮನವಿ ಸ್ವೀಕರಿಸುವಂತೆ ಪಟ್ಟು ಹಿಡಿದರು. ಆನಂತರ ಪಿಎಸ್ಐ ಚೆನ್ನಯ್ಯ ದೇವೂರ ಆಗಮಿಸಿ ಹೋರಾಟಗಾರರ ಮನವೊಲಿಸಿದರು. ಆನಂತರ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಉಪಸ್ಥಿತರಿದ್ದರು.ಕೋಟೆಪ್ಪ ಬೆಳಗಟ್ಟಿ, ಶರಣಪ್ಪ ಆಲೂರ, ಪರಶುರಾಮ ಹೊಳೆಗುಂದಿ, ಮಂಜುನಾಥ ತಳಗೇರಿ, ನಂದೀಶ ಹೊಳೆಗುಂದಿ, ಕರಿಯಪ್ಪ ಪೂಜಾರ, ಪ್ರವೀಣ ಹೊಳೆಗುಂದಿ, ಗಿರಿಜವ್ವ ಬೇವಿನಮರದ, ನಾಗವ್ವ ಹೊಸಪೇಟಿ, ಮಾಳವ್ವ ಹೊಳೆಗುಂದಿ, ಗಿರಿಜವ್ವ ಶಿರುಂದ, ಮರಿಯಪ್ಪ ಶಿರೂರ, ಬಸವ್ವ ಕಟ್ಟೀಮನಿ, ಹುಲಿಗೆವ್ವ ಕಟ್ಟೀಮನಿ, ಮಾಳವ್ವ ಪೂಜಾರ, ಲಕ್ಷ್ಮವ್ವ ಕಟ್ಟೀಮನಿ, ಲಕ್ಷ್ಮವ್ವ ತಗಡಿನಮನಿ, ಶಾರವ್ವ ಪೂಜಾರ, ಫಕ್ಕೀರವ್ವ ತಗಡಿನಮನಿ ಉಪಸ್ಥಿತರಿದ್ದರು.