ಶೇಷಮೂರ್ತಿ ಅವಧಾನಿ
ಜಿಲ್ಲೆಯಲ್ಲಿ ಕಳೆದ 6 ದಿನದಿಂದ ಇದ್ದ ಉಷ್ಣ ಅಲೆ ಎಚ್ಚರಿಕೆ ಮತ್ತೆ ಪುನರಾವರ್ತನೆಯಾಗಿದೆ. ಹವಾಮಾನ ಇಲಾಖೆಯವರು ಮತ್ತೆ ಏ.9 ಹಾಗೂ 10 ಎರಡು ದಿನಗಳ ಕಾಲ ಉಷ್ಣ ಮಾರುತಗಳು ಕಲಬುರಗಿ ಜಿಲ್ಲೆಯನ್ನು ಕಂಗೆಡಿಸುವ ಮುನ್ಸೂಚನೆ ನೀಡಿದ್ದಾರೆ.
ಹೀಗಾಗಿ ಕಳೆದೊಂದು ವಾರದಿಂದ ನಿರಂತರ ಕಲಬುರಗಿಯಲ್ಲಿ ಕಳೆದೊಂದು ದಶಕದಲ್ಲಿಯೇ ಅತ್ಯದಿಕ ಉಷ್ಣಾಂಶ ದಾಖಲಾಗುತ್ತ ಹೊರಟಿದೆ.ಇದರಿಂದಾಗಿ ಜನ- ಜಾನುವಾರುಗಳು ಕಂಗಾಲಾಗಿವೆ.ರಣಬಿಸಿಲಿನ ಹೊಡೆತಕ್ಕೆ ತತ್ತರಿಸುತ್ತಿರುವ ಬಿಸಿಲೂರು ಕಲಬುರಗಿಯಲ್ಲಿ ಎಲ್ಲಿ ನೋಡಿದರಲ್ಲಿ ರಣರಣ ಬಿಸಿಲಿನ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ಕಳೆದೊಂದು ವಾರದಿಂದ ಬಿಸಿಲಿನ ಬೇಗೆ ಏರುಗತಿಯಲ್ಲಿದೆ. ನಿತ್ಯ ಸರಾಸರಿ 43° ಯಿಂದ 44.7° ಸೆಲ್ಸಿಯಸ್‌ವರೆಗೆ ತಪ ದಾಖಲಾಗುತ್ತಿದೆ.
ಬೆಳಗ್ಗೆ ಏಳು ಗಂಟೆಯಿಂದಲೇ ಸೂರ್ಯನ ಆರ್ಭಟ ಶುರುವಾಗಿ ಅದು ಮಧ್ಯಾಹ್ನ 12 ರಿಂದ ಸಂಜೆ 5 ಗಂಟೆವರೆಗೆ ಉರಿಬಿಸಿಲ ರೂಪದಲ್ಲಿ ಕಾಡುತ್ತದೆ. ರಣಬಿಸಿಲಿಗೆ ಹೆದರಿ ಹೊರಗೆ ಬರಲು ಜನತೆ ಹಿಂದೆ ಮುಂದೆ ನೋಡುವಂತಾಗಿದೆ.
ಬಿಸಿಲಿಂದ ರಕ್ಷಣೆ ಪಡೆಯಲು ಹತ್ತು ಹಲವು ಕ್ರಮಗಳಿಗೆ ಮುಂದಾಗಿರುವ ಜನ ತಾವು ಹೋದ ಕಡೆಗಳಲ್ಲೆಲ್ಲಾ ನೀರು, ಶರಬತ್ ಮೊರೆ ಹೋಗುತ್ತಿದ್ದಾರೆ. ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಲು ಲಿಂಬೂ ಶರಬತ್, ಎಳೆ ನೀರು, ಮಜ್ಜಿಗೆ ಸೇವನೆ ಶುರುಹಚ್ಚಿಕೊಂಡಿದ್ದಾರೆ.
ಕಲಬುರಗಿ ನಗರದಲ್ಲಿ ಬಿಸಿಲಿನಿಂದ ಜನ ಕಂಗೆಟ್ಟಿದ್ದಾರೆ. ಈ ಮಧ್ಯೆ ಸಂಚಾರ ಸಂಕೇತ ದೀಪಗಳ ಕಿರಿಕಿರಿಯೂ ಶುರುವಾಗಿದೆ. ರಣ ಬಿಸಿಲಲ್ಲಿ 1 ನಿಮಿಷ, ಅದಕ್ಕೂ ಅಧಿಕ ಅವಧಿಗೆ ಅದೆಲ್ಲಿ ಸಂಚಾರ ದೀಪದಲ್ಲಿ ಕಾಯೋದು ಎಂದು ಕಂಗಲಾಗಿದ್ದಾರೆ.
ಏತನ್ಮಧ್ಯೆ ಬಿಸಿಲೂರ ಮಂದಿಯ ನೆರವಿಗೆ ತುಸು ಸಂಚಾರಿ ಪೊಲೀಸರು ಧಾವಿಸಿದ್ದಾರೆ ಎನ್ನಬಹುದು. ಸಂಚಾರ ದಟ್ಟಣೆ ಕಡಿಮೆ ಇರುವ ಕಡೆ ಮಧ್ಯಾಹ್ನ ಸಿಗ್ನಲ್ ಸ್ವಿಚ್ ಆಫ್ ಮಾಡಲು ತೀರ್ಮಾನಿಸಿದ್ದಾರೆ. ನಗರದಲ್ಲಿರುವ 15 ಸಿಗ್ನಲ್ ಗಳ ಪೈಕಿ ಮೂರು ನಾಲ್ಕು ಹೊರತು ಪಡಿಸಿ ಉಳಿದೆಡೆಯ ಸಿಗ್ನಲ್ ಮಧ್ಯಾಹ್ನ ಆಫ್ ಮಾಡಲಾಗುತ್ತಿದೆ.
- ಪ್ರಸನ್ನ ದೇಶಪಾಂಡೆ, ಸಾಮಾಜಿಕ ಕಾರ್ಯಕರ್ತರು, ಕಲಬುರಗಿ