ಕನ್ನಡಪ್ರಭ ವಾರ್ತೆ ಅಂಕೋಲಾ
ಗ್ರಾಮದಲ್ಲಿ ಸಾಕಿರುವ ನಾಯಿ, ಕೋಳಿ ಸೇರಿದಂತೆ ಪಶು–ಪಕ್ಷಿಗಳನ್ನು ಚಿರತೆಗಳು ಹೊತ್ತೊಯ್ಯುತ್ತಿರುವ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿವೆ. ಭಾನುವಾರ ರಾತ್ರಿ ಕೊಡ್ಲಗದ್ದೆ ಗ್ರಾಮದ ಸುಧಾಕರ ಗಣಪಯ್ಯ ನಾಯ್ಕ ಅವರ ಮನೆಯಂಗಳಕ್ಕೆ ನುಗ್ಗಿದ ಚಿರತೆಯೊಂದು ಮನೆಯಲ್ಲಿದ್ದ ಯುರೋಪಿಯನ್ ಡಾಬರ್ಮೆನ್ ತಳಿಯ ನಾಯಿಯನ್ನು ಎಳೆದೊಯ್ದ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳುವಂತೆ ಮಾಡಿದೆ. ಮನೆಗೆ ಹತ್ತಿರವಾಗಿಯೇ ನಡೆದ ಈ ಘಟನೆ ಜನರಲ್ಲಿ ಇನ್ನಷ್ಟು ಭಯ ಹುಟ್ಟಿಸಿದೆ.
ಘಟನೆ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯ ಕಾಲು ಗುರುತು ಹಾಗೂ ದಾಳಿಯ ಸ್ಥಳವನ್ನು ಪರಿಶೀಲಿಸಿದ ಅಧಿಕಾರಿಗಳು, ಈ ಭಾಗದಲ್ಲಿ ಚಿರತೆಯ ಸಂಚಾರ ಹೆಚ್ಚಿರುವುದನ್ನು ಖಚಿತಪಡಿಸಿದ್ದಾರೆ. ಸುತ್ತಮುತ್ತಲ ಅರಣ್ಯ ಪ್ರದೇಶದಿಂದ ಆಹಾರ ಕೊರತೆಯಿಂದಾಗಿ ಚಿರತೆಗಳು ಮಾನವ ವಸತಿಗಳತ್ತ ಬರುತ್ತಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.ರಾತ್ರಿ ವೇಳೆ ಹೊರಬರಲು ಜನರು ಹೆದರುತ್ತಿದ್ದು, ಮಕ್ಕಳು ಹಾಗೂ ವೃದ್ಧರ ಸುರಕ್ಷತೆ ಬಗ್ಗೆ ಪೋಷಕರು ಆತಂಕದಲ್ಲಿದ್ದಾರೆ. ಮನೆ ಸುತ್ತಲೂ ದೀಪ ಬೆಳಗಿಸುವುದು, ಪಟಾಕಿ ಸಿಡಿಸುವುದು, ಶಬ್ದ ಮಾಡುವುದರ ಮೂಲಕ ಚಿರತೆಗಳನ್ನು ಓಡಿಸುವ ಪ್ರಯತ್ನ ನಡೆಯುತ್ತಿದೆ.
ಚಿರತೆಯನ್ನು ತಕ್ಷಣವೇ ಸೆರೆಹಿಡಿದು ಬೇರೆ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಜೊತೆಗೆ ಚಿರತೆ ಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ಪಂಜರ ಅಳವಡಿಸುವುದು, ರಾತ್ರಿ ಪಾಳು ಗಸ್ತು ವ್ಯವಸ್ಥೆ ಬಲಪಡಿಸುವುದು ಹಾಗೂ ಗ್ರಾಮಸ್ಥರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಯಾವುದೇ ಅನಾಹುತ ಸಂಭವಿಸುವ ಮೊದಲು ಅರಣ್ಯ ಇಲಾಖೆ ತ್ವರಿತ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಒಕ್ಕೊರಲ ಬೇಡಿಕೆಯಾಗಿದೆ.