ಶಿರಸಿಯ ಬಿಡ್ಕಿಬೈಲಿನಲ್ಲಿ ಸೈಬರ್ ಅಪರಾಧ ಜಾಗೃತಿ ಅಭಿಯಾನಕ್ಕೆ ಚಾಲನೆಕನ್ನಡಪ್ರಭ ವಾರ್ತೆ ಶಿರಸಿ
ಅಡಿಕೆ ಕೊಯ್ಲು ಶೀಘ್ರವಾಗಿ ಪ್ರಾರಂಭವಾಗಲಿರುವ ಹಿನ್ನೆಲೆ ಕಳ್ಳತನ ತಡೆಗಟ್ಟಲು ಇಲಾಖೆ ನಿಗಾ ವಹಿಸಿದ್ದು, ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಪೊಲೀಸ್ ಗಸ್ತು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಹೇಳಿದರು.ಶುಕ್ರವಾರ ನಗರದ ಬಿಡ್ಕಿಬೈಲಿನಲ್ಲಿ ಸೈಬರ್ ಅಪರಾಧ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾಧ್ಯಮದವರ ಜತೆ ಮಾತನಾಡಿದರು. ಅಡಿಕೆಗೆ ದರ ಹೆಚ್ಚುತ್ತಿರುವ ಕಾರಣ ಹಳ್ಳಿಗಳಲ್ಲಿ ಅಡಿಕೆ ಕಳ್ಳತನವಾಗುವ ಸಾಧ್ಯತೆಯೂ ಇದೆ. ರೈತರಿಗೆ ಅಡಿಕೆ ಒಣಗಿಸುವ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಕೊಳ್ಳುವಂತೆ ಸಲಹೆ ನೀಡಲಿದ್ದೇವೆ. ಒಣಗಿದ ಅಡಿಕೆಯನ್ನು ಭದ್ರವಾಗಿಟ್ಟುಕೊಳ್ಳುವ ಬಗ್ಗೆ ಸೂಚನೆ ನೀಡಲಿದ್ದೇವೆ ಎಂದರು.
ಬಹುತೇಕ ಬ್ಯಾಂಕ್ ಗ್ರಾಹಕರು ಇಂಟರ್‌ನೆಟ್ ಬ್ಯಾಂಕಿಂಗ್ ಹೊಂದಿರುತ್ತಾರೆ. ಬ್ಯಾಂಕ್ ಖಾತೆ ಹೊಂದಿರುವವರು ಮೊಬೈಲ್‌ಗಳಿಗೆ ಬರುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಮಾಡಿದರೆ ಪೋನ್ ಹ್ಯಾಕ್ ಆಗುತ್ತದೆ. ಓಟಿಪಿ ಶೇರ್ ಆಗುತ್ತದೆ. ಕಳ್ಳರು ಹೊರರಾಜ್ಯ, ಹೊರ ದೇಶದಲ್ಲಿ ಕುಳಿತು ಅಕೌಂಟ್‌ನಲ್ಲಿರುವ ಹಣ ದೋಚುತ್ತಾರೆ. ಆ ವೇಳೆ ಗೋಲ್ಡನ್ ಸಮಯ ಇರುತ್ತದೆ. ಎರಡು ತಾಸಿನಲ್ಲಿ 1930 ನಂಬರ್‌ಗೆ ಕಾಲ್ ಸೆಂಟರ್‌ಗೆ ಕಾಲ್ ಮಾಡಿ ಸೈಬರ್ ಕಳ್ಳತನ ಬಗ್ಗೆ ಮಾಹಿತಿ ನೀಡಿದರೆ, ಬ್ಯಾಂಕ್ ಅಕೌಂಟ್‌ನಲ್ಲಿ ಇರುವ ಹಣ ವಗಾವಣೆ ಮಾಡಲು ಆಗುವುದಿಲ್ಲ, ಎಟಿಎಂನಲ್ಲಿ ಹಣ ತೆಗೆಯಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಲಕ್ಷ್ಯ ಇರಬೇಕು ಎಂದರು.ಆನ್‌ಲೈನ್ ಗೇಮಿಂಗ್‌ಗಳಲ್ಲಿ ಹೆಚ್ಚೆಚ್ಚು ಯುವಕರು ಭಾಗವಹಿಸುತ್ತಾರೆ. ಅದರಲ್ಲಿ ಬ್ಯಾಂಕ್ ಅಕೌಂಟ್ ನಂಬರ್ ಕೊಡಬೇಕಾಗುತ್ತದೆ. ಆದರೆ ಮುಂಜಾಗ್ರತೆ ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ನಡೆಯುತ್ತಿರುವ ಮನೆಮನೆ ಪೊಲೀಸ್ ಜಾಗೃತಿ ಕಾರ್ಯಕ್ರಮದಲ್ಲಿ ಸೈಬರ್ ಜಾಗೃತಿಯ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಬಳಿಕ ವಿದ್ಯಾರ್ಥಿಗಳಿಂದ ಸೈಬರ್ ಜಾಗೃತಿ ಕುರಿತು ಜಾಥಾ ನಡೆಯಿತು. ಡಿವೈಎಸ್ಪಿ ಗೀತಾ ಪಾಟೀಲ, ಸಿಪಿಐ ಶಶಿಕಾಂತ ವರ್ಮಾ, ಶಿರಸಿ ನಗರ ಪೊಲೀಸ್ ಠಾಣೆಯ ಪಿಎಸ್ಐ ನಾಗಪ್ಪಬಿ, ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಸಂತೋಷಕುಮಾರ.ಎಂ ಮತ್ತಿತರರು ಇದ್ದರು.ಏರಗನ್‌ಗೆ ಲೈಸೆನ್ಸ್ ಇರಲೇಬೇಕು
45 ಎಂಎಂ, 20 ಚೌಲ್ಸ್ ಕಡಿಮೆ ಸಾಮರ್ಥ್ಯ ಇರುವ ಏರ್‌ಗನ್‌ಗೆ ಲೈಸೆನ್ಸ್ ಇರಬೇಕು ಎಂಬುದಿಲ್ಲ. ಆದರೆ ಇದಕ್ಕೂ ಮೇಲಿನ ಸಾಮರ್ಥ್ಯದ ಏರಗನ್‌ಗೆ ಲೈಸೆನ್ಸ್ ಇರಲೇಬೇಕು. ಖರೀದಿ ಮಾಡುವಾಗಲೇ ಇದನ್ನೆಲ್ಲ ಮಾಡಿಕೊಳ್ಳಬೇಕಾಗುತ್ತದೆ. ಅಪಾಯಕಾರಿ ಏರ್ ಗನ್ ಖರೀದಿಸುವವರು ಅಂಗಡಿಗಳಲ್ಲಿ ತಮ್ಮ ಆಧಾರ ಕಾರ್ಡ್ ಹಾಗೂ ಸೂಕ್ತ ದಾಖಲೆ ನೀಡಿದ ಬಳಿಕವೇ ಮಾರಾಟ ಮಾಡುವಂತೆ ಅಂಗಡಿಕಾರರಿಗೂ ಸೂಚನೆ ನೀಡಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.