ಹೂವಿನಹಡಗಲಿ: ಕೇಂದ್ರ ಸರ್ಕಾರ ಈಗಾಗಲೇ ಮೆಕ್ಕೆಜೋಳಕ್ಕೆ ₹2400 ಬೆಂಬಲ ಬೆಲೆ ಘೋಷಣೆಗೆ ಮಾತ್ರ ಸೀಮಿತವಾಗಿದೆ. ದಿನದಿಂದ ದಿನಕ್ಕೆ ಬೆಲೆ ಕುಸಿತಕ್ಕೆ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಎಚ್.ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ ಮಾತನಾಡಿ, ಕೇಂದ್ರ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ ಆ ಪ್ರಕಾರ ಖರೀದಿದಾರರು ರೈತರ ಮೆಕ್ಕೆಜೋಳ ಖರೀದಿಸುತ್ತಿಲ್ಲ. ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದೆ ಎಂದು ಇಲ್ಲ ಸಲ್ಲದ ನೆಪಗಳನ್ನು ಹೇಳುತ್ತಾರೆ. ಇದಕ್ಕೆ ಸರ್ಕಾರ ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
ಮುಂಗಾರು ಹಂಗಾಮಿನ ಸತತ ಮಳೆಯಿಂದ ಮೆಕ್ಕೆಜೋಳ ಬೆಳೆ ಬಿತ್ತನೆ ಮಾಡಿರುವ ರೈತರು, ಈ ಮೆಕ್ಕೆಜೋಳ ಬೆಳೆ ಕುಸಿತದಿಂದ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ.ತಾಲೂಕಿನಲ್ಲಿ ಸುಮಾರು 40 ರಿಂದ 44 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಉತ್ತಮ ಬೆಳೆ ಬಂದರೂ ಬೆಲೆ ಇಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರವು ರೈತರ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿರುವ ಮೂಲ ಉದ್ದೇಶ ಏನು? ಎಂಬುದು ಅರ್ಥವಾಗುತ್ತಿಲ್ಲ. ಸರ್ಕಾರವು ಹೇಳುವ ಪ್ರಕಾರ ರೈತರ ಬೆಳೆಗಳು ಮಾರುಕಟ್ಟೆಯಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ಬಂದಾಗ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗುತ್ತಿದೆ ಎಂದರು.
ರೈತರು ಬೆಳೆದ ಮೆಕ್ಕೆಜೋಳ ನಿತ್ಯ ದರ ಕುಸಿತವಾಗುತ್ತಿದ್ದರೇ, ಅತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಕಡೆಗೆ ಗಮನ ನೀಡದೇ ತಮ್ಮ ರಾಜಕಾರಣದಲ್ಲಿ ತೊಡಗಿರುವುದು ಅತ್ಯಂತ ದುರ್ದೈವ ಸಂಗತಿ. ತಾಲೂಕಿನಲ್ಲಿ ನಿರೀಕ್ಷೆಗೂ ಮೀರಿ ಬಿತ್ತನೆಯಾಗಿದೆ, ಕಳೆದ ವರ್ಷಕ್ಕಿಂತ ಬೆಲೆ ಕಡಿಮೆಯಾಗಿದೆ, ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆ ದರಕ್ಕೆ ಮಾರಾಟವಾಗುತ್ತಿದ್ದು, ರೈತರ ಸಂಕಷ್ಟ ಎದುರಿಸಿದ್ದಾರೆ ಕೂಡಲೇ ಸರ್ಕಾರ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆ ಖರೀದಿಸಬೇಕೆಂದು ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ದುರುಗಪ್ಪ, ಹಾಲೇಶ ಬೆನ್ನೂರು, ಮುಜಫರ್ ರೆಹಮಾನ್, ಗಿರೀಶ ಸೇರಿದಂತೆ ಇತರರು ತಹಸೀಲ್ದಾರ್ ಜಿ.ಸಂತೋಷಕುಮಾರ ಅವರಿಗೆ ಮನವಿ ಸಲ್ಲಿಸಿದರು.