ಮೈಸೂರು : ಆಷಾಢ ಶುಕ್ರವಾರ ಭದ್ರತೆಗೆ 1470 ಪೊಲೀಸರ ನಿಯೋಜನೆ

KannadaprabhaNewsNetwork |  
Published : Jun 25, 2025, 11:48 PM ISTUpdated : Jun 26, 2025, 12:16 PM IST
ಫೋಟೋ | Kannada Prabha

ಸಾರಾಂಶ

ಆಷಾಢ ಶುಕ್ರವಾರಗಳಂದು ಚಾಮುಂಡಿಬೆಟ್ಟದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಮಾಡಲಾಗಿದೆ ಸ್ಥಳೀಯವಾಗಿರುವ 1 ಸಾವಿರ ಪೊಲೀಸರು, 4 ಕೆಎಸ್ಆರ್ ಪಿ ತುಕಡಿ, 1 ಮಹಿಳಾ ಕೆಎಸ್ಆರ್ ಪಿ ತುಕಡಿ, ಗೃಹ ರಕ್ಷಕ ದಳವನ್ನು ಸಹ ಭದ್ರತೆಗೆ

 ಮೈಸೂರು :  ಆಷಾಢ ಶುಕ್ರವಾರಗಳಂದು ಚಾಮುಂಡಿಬೆಟ್ಟದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಮಾಡಲಾಗಿದೆ. 4 ಡಿಸಿಪಿ, 2 ಎಸಿಪಿಗಳು 1470 ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು. 

ಸ್ಥಳೀಯವಾಗಿರುವ 1 ಸಾವಿರ ಪೊಲೀಸರು, 4 ಕೆಎಸ್ಆರ್ ಪಿ ತುಕಡಿ, 1 ಮಹಿಳಾ ಕೆಎಸ್ಆರ್ ಪಿ ತುಕಡಿ, ಗೃಹ ರಕ್ಷಕ ದಳವನ್ನು ಸಹ ಭದ್ರತೆಗೆ ನಿಯೋಜಿಸಲಾಗುತ್ತಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಚಾಮುಂಡಿಬೆಟ್ಟಕ್ಕೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಹಾಗೂ ವರ್ಧಂತಿ ದಿನದಂದು ಖಾಸಗಿ ವಾಹನಗಳನ್ನು ನಿರ್ಬಂಧಿಸಲಾಗಿದೆ. ಚಾಮುಂಡಿಬೆಟ್ಟಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳನ್ನು ಬಂದ್ ಮಾಡುತ್ತೇವೆ.

 ಗುರುವಾರ ರಾತ್ರಿ 10 ರಿಂದಲೇ ಎಲ್ಲಾ ರಸ್ತೆಗಳು ಬಂದ್ ಆಗುತ್ತವೆ. ಚಾಮುಂಡಿಬೆಟ್ಟದ ನಿವಾಸಿಗಳಿಗೆ ಮಾತ್ರ ಬೆಟ್ಟದ ಮೇಲಕ್ಕೆ ಹೋಗಲು ಅವಕಾಶ ಇರುತ್ತದೆ ಎಂದರು.ಹಲವೆಡೆ ಸಿಸಿಟಿವಿ ಅಳವಡಿಸಲಾಗಿದೆ. 

ಯಾವುದೇ ಅಹಿತಕರ ಘಟನೆ ನಡೆಯದ ರೀತಿ ಭದ್ರತೆ ಮಾಡಿಕೊಂಡಿದ್ದೇವೆ. ಮಹಿಷಾಸುರ ಪ್ರತಿಮೆಯ ದ್ವಾರದಿಂದ ಚಾಮುಂಡೇಶ್ವರಿ ದೇವಸ್ಥಾನದವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಭಕ್ತರು ತಮ್ಮ ವಾಹನಗಳನ್ನು ಲಲಿತಮಹಲ್ ಮೈದಾನದಲ್ಲಿ ನಿಲುಗಡೆಗೊಳಿಸಬೇಕು. ದ್ವಿಚಕ್ರ ಮತ್ತು ನಾಲ್ಕುಚಕ್ರ ವಾಹನಗಳಿಗೆ ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು

ಆಷಾಢ ಶುಕ್ರವಾರಗಳಂದು ಚಾಮುಂಡೇಶ್ವರಿಗೆ ಲಕ್ಷ್ಮೀ ಅಲಂಕಾರಆಷಾಢ ಶುಕ್ರವಾರಗಳಂದು ವಿಶೇಷವಾಗಿ ಚಾಮುಂಡೇಶ್ವರಿ ದೇವಿಗೆ ಲಕ್ಷ್ಮೀ ಅಲಂಕಾರಗಳನ್ನು ಮಾಡಲಾಗುವುದು ಎಂದು ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್‌ ‌ದೀಕ್ಷಿತ್ ತಿಳಿಸಿದರು.ಆಷಾಢ ವಿಶೇಷವಾದ ಮಾಸವಾಗಿದೆ. 

ಆಷಾಢ ಮಾಸದಲ್ಲಿ ಸಾಮಾನ್ಯವಾಗಿ ಶಕ್ತಿ ದೇವತೆಗಳ ಆರಾಧನೆ ಹೆಚ್ಚು ಇರುತ್ತದೆ.ಮೈಸೂರಿನಲ್ಲಿ ಹಲವು ಶಕ್ತಿ ದೇವತೆಗಳ ಆರಾಧನೆ ನಡೆಯುತ್ತದೆ. ತ್ರಿನೇಶ್ವರಿ, ತ್ರಿಪುರಸುಂದರಿ, ಕಾಮ ಕಾಮೇಶ್ವರಿ ದೇವಾಲಯಗಳು ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ ಹವನಗಳು ನಡೆಯುತ್ತವೆ. ಅದರಂತೆ ಚಾಮುಂಡಿಬೆಟ್ಟದಲ್ಲೂ ಆಷಾಢ ಮಾಸದ ನಾಲ್ಕು ಶುಕ್ರವಾರ ದೇವಿಗೆ ವಿಶೇಷ ಅಭಿಷೇಕ, ಪೂಜೆ, ಹೋಮ, ಹವನಗಳು ನಡೆಯುತ್ತವೆ ಎಂದು ಅವರು ಹೇಳಿದರು.

ಅಷಾಢ ಶುಕ್ರವಾರಗಳಂದು ಮುಂಜಾನೆ 3:30ಕ್ಕೆ ಪೂಜಾ ಕೈಂಕರ್ಯಗಳು ಆರಂಭವಾಗುತ್ತವೆ. ಬೆಳಗ್ಗೆ 5.30 ರಿಂದ ರಾತ್ರಿ 10 ಗಂಟೆಯವರೆಗೆ ದೇವಿಯ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಇರುತ್ತದೆ. ವರ್ಧಂತಿ ದಿನದಂದು ಮಾತ್ರ ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆಯವರೆಗೂ ದೇವಿಯ ದರ್ಶನಕ್ಕೆ ಅವಕಾಶ ಇರುತ್ತದೆ

ಯಾವುದೇ ಸ್ಥಳದಿಂದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಗೂಗಲ್ ಮ್ಯಾಪ್ ಅಥವಾ ವಾಯ್ಸ್ ಸರ್ಚ್ ಉಪಯೋಗಿಸಿ ಲಲಿತಮಹಲ್ ಪಾಕಿಂಗ್ ಸ್ಥಳವನ್ನು ಸುಲಭವಾಗಿ ತಲುಪಬಹುದು. ಕ್ಯೂಆರ್ ಕೋಡ್ ಬಳಕೆಯ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕವೂ ಪ್ರಚಾರ ನಡೆಸಲಾಗಿದೆ.

 ವಿವಿಐಪಿ ಹಾಗೂ ಸರ್ಕಾರಿ ವಾಹನಗಳಿಗೆ ವಿಶೇಷ ನಿಲುಗಡೆ ಸ್ಥಳ ಗುರುತಿಸಲಾಗಿದೆ ಎಂದು ಅವರು ಹೇಳಿದರು.ಮೆಟ್ಟಿಲು ಮೂಲಕ ಬೆಟ್ಟಕ್ಕೆ ತೆರಳುವ ಭಕ್ತಾಧಿಗಳಿಗೆ ಮುಂಜಾನೆ 5 ಗಂಟೆಯಿಂದ ಪ್ರವೇಶ ಕಲ್ಪಿಸಲಾಗುವುದು. 

ಈ ಭಕ್ತಾಧಿಗಳು ಪಿಂಜರಪೋಲ್ ಬಳಿಯ ಮೈದಾನದಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದು. ಬೆಟ್ಟದಲ್ಲಿರುವ ನಿವಾಸಿಗಳು ಮುಕ್ತ ಸಂಚಾರಕ್ಕಾಗಿ ಅಗತ್ಯ ದಾಖಲಾತಿಗಳನ್ನು ಹಾಜರುಪಡಿಸಿ ಪ್ರವೇಶ ಪಡೆಯುವುದು. ಉಚಿತ ದಾಸೋಹ (ಅನ್ನದಾನ) ವ್ಯವಸ್ಥೆಗೆ ಪ್ರತ್ಯೇಕ ಸ್ಥಳ ಗುರುತಿಸಲಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ