- ಪಿಎಸೈ ಪರಶುರಾಮ್ ಶಂಕಾಸ್ಪದ ಸಾವು ಪ್ರಕರಣ
ಕನ್ನಡಪ್ರಭ ವಾರ್ತೆ ಯಾದಗಿರಿ
ನಗರ ಪೊಲೀಸ್ ಠಾಣೆಯ ಪಿಎಸ್‌ಐ ಪರಶುರಾಮ ಅನುಮಾನಸ್ಪದ ಸಾವನ್ನಪ್ಪಿದ್ದು, ಪ್ರಕರಣದ ಆರೋಪವಿರುವ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರ ಹಾಗೂ ಅವರ ಪುತ್ರ ಪಂಪನಗೌಡರನ್ನು ಸರ್ಕಾರ ಕೂಡಲೇ ಬಂಧಿಸಿ, ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು. ನಗರದ ನೇತಾಜಿ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಘಟಕದಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದ ಆ ಪಕ್ಷದ ಶಾಸಕರು ನಿಯಮ ಮೀರಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಸುವ ಮೂಲಕ ಭ್ರಷ್ಟಾಚಾರ ನಡೆಸಿ, ಕಿರುಕುಳ ನೀಡುತ್ತಿದಾರೆ, ಅಭಿವೃದ್ಧಿ ಕಡೆಗೆ ಗಮನ ನೀಡುತ್ತಿಲ್ಲ ಎಂದು ಟೀಕಿಸಿದರು.ಗೃಹಸಚಿವ ಡಾ. ಜಿ. ಪರಮೇಶ್ವರ ಅವರು ಶಾಸಕ ಹಾಗೂ ಪುತ್ರನನ್ನು ಬಂಧಿಸಲು ಆದೇಶ ನೀಡದೇ, ಒಂದು ಕಡೆ ದಲಿತರನ್ನು ಈ ರಾಜ್ಯದಲ್ಲಿ ಅವಮಾನಿಸಿದ್ದಾರೆ, ಕೂಡಲೇ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ, ಆತನ ಪತ್ನಿಗೆ ಉನ್ನತ ಸರ್ಕಾರಿ ಹುದ್ದೆ ನೀಡಬೇಕೆಂದು ಒತ್ತಾಯಿಸಿದರು.
ಉಸ್ತುವಾರಿ ಸಚಿವ ದರ್ಶನಾಪೂರ, ಸಾರ್ವಜನಿಕ ಜೀವನದಲ್ಲಿ ಹಣದ ಬಡ್ಡಿ ವ್ಯವಹಾರ ಮಾಡಿಕೊಂಡು ಬಂದಿರುವ ಶಾಸಕ ತುನ್ನೂರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ, ತಮ್ಮ ವ್ಯವಹಾರದ ಕಡೆಗೆ ಗಮನ ನೀಡುವುದು ಸೂಕ್ತ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು, ಶಾಸಕ ಚೆನ್ನಾರಡ್ಡಿ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಲಲಿತಾ ಅನಪೂರ, ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ಡಾ.ಶರಣಭೂಪಾಲರಡ್ಡಿ ನಾಯ್ಕಲ್, ಬಿ.ಎಂ ಹಳ್ಳಿಕೋಟಿ, ರಾಜಾ ಹಣುಮಪ್ಪ ನಾಯಕ, ನಾಗರತ್ನ ಕುಪ್ಪಿ, ಖಂಡಪ್ಪ ದಾಸನ್, ಹೆಚ್.ಸಿ ಪಾಟೀಲ್, ರಮೇಶ ಬಾಬು ಮುದ್ನಾಳ, ಬಸವರಾಜಪ್ಪ ವಿಭೂತಿಹಳ್ಳಿ, ದೇವರಾಜ ನಾಯಕ, ಸುನೀತಾ ಚವ್ಹಾಣ, ಮಲ್ಲಮ್ಮ ಹೊಸಪೇಟ್, ಚಂದ್ರಕಲಾ ಮಡ್ಡಿ, ಭೀಮಾಶಂಕರ ಬಿಲ್ಲವ, ಪರಶುರಾಮ ಕುರಕುಂದಿ, ದೇವಿಂದ್ರನಾಥ ನಾದ, ಮಲ್ಲಪ್ಪ ಮೇಳಗಿ, ರಾಜಾ ವೇಣು ಮಾದವ ನಾಯಕ, ಗುರು ಕಾಮಾ, ನಿಂಗಪ್ಪ ಹತ್ತಿಮನಿ, ರಮೇಶ ದೊಡ್ಮನಿ, ವಿಲಾಸ್ ಪಾಟೀಲ್, ಸುರೇಶ ಅಂಬಿಗೇರ, ಶ್ರೀಕಾಂತ ಸುಂಗಲಕರ್, ವಿರುಪಾಕ್ಷಯ್ಯಸ್ವಾಮಿ ಹೆಡಗಿಮದ್ರಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
13ವೈಡಿಆರ್13 : ಪಿಎಸೈ ಪರಶುರಾಮ ಸಾವಿನ ತನಿಖೆಗೆ ಆಗ್ರಹಿಸಿ ಯಾದಗಿರಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.