ಗದಗ ಜಿಲ್ಲೆಯಲ್ಲಿ ಹೆಚ್ಚಿದ ಮಳೆ, ತಾಡಪತ್ರಿಗೆ ಬೇಡಿಕೆ

KannadaprabhaNewsNetwork |  
Published : Nov 08, 2025, 02:15 AM IST

ಸಾರಾಂಶ

ಮಳೆಗಾಲದಲ್ಲಿ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರವು ಕೃಷಿ ಇಲಾಖೆ ಮೂಲಕ ರಿಯಾಯ್ತಿ ದರದಲ್ಲಿ ಗುಣಮಟ್ಟದ ತಾಡಪತ್ರಿಗಳನ್ನು ನೀಡುತ್ತ ಬರುತ್ತಿದೆ.

ವಿಶೇಷ ವರದಿ

ಗದಗ: ಪ್ರಸ್ತುತ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಮಳೆರಾಯನ ಆರ್ಭಟ ಹೆಚ್ಚಾಗಿ, ನಿರಂತರ ಮಳೆ ಸುರಿದ ಪರಿಣಾಮ ಮತ್ತು ಬೆಳ್ಳಂಬೆಳಗ್ಗೆ ವಿಪರೀತ ಮಂಜು ಬೀಳುವ ಕಾರಣದಿಂದ ಜಿಲ್ಲೆಯ ರೈತರ ವಲಯದಲ್ಲಿ ತಾಡಪತ್ರಿ ಬೇಡಿಕೆ ಹೆಚ್ಚಾಗಿದೆ. ಕೃಷಿ ಇಲಾಖೆ ಮೂಲಕ ನೀಡುತ್ತಿದ್ದ ತಾಡಪತ್ರಿಗಳಿಗೆ ಬೇಡಿಕೆ ದುಪ್ಪಟ್ಟಾಗಿದೆ.

ಮಳೆಗಾಲದಲ್ಲಿ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರವು ಕೃಷಿ ಇಲಾಖೆ ಮೂಲಕ ರಿಯಾಯ್ತಿ ದರದಲ್ಲಿ ಗುಣಮಟ್ಟದ ತಾಡಪತ್ರಿಗಳನ್ನು ನೀಡುತ್ತ ಬರುತ್ತಿದೆ. ಪ್ರತಿವರ್ಷ ಈ ತಾಡಪತ್ರಿಗಳ ಬೇಡಿಕೆ ಅಷ್ಟಕ್ಕಷ್ಟೇ ಇತ್ತು. ಆದರೆ, ಈ ವರ್ಷ ಅದರಲ್ಲೂ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ವಾಡಿಕೆಗಿಂತಲೂ ಮೂರ್ನಾಲ್ಕು ಪಟ್ಟು ಹೆಚ್ಚುವರಿ ಮಳೆಯಾಗಿದ್ದರಿಂದ ಕಟಾವಿಗೆ ಬಂದಿದ್ದ ಫಸಲು ರಕ್ಷಣೆಗೆ ಅಥವಾ ಇದ್ದ ಮನೆಯನ್ನು ಮಳೆಯಿಂದ ರಕ್ಷಿಸಿಕೊಳ್ಳಲಾಗಲೀ ರೈತರು ತಾಡಪತ್ರಿಗಳನ್ನು ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಿದ್ದಾರೆ.ಭಾರೀ ಬೇಡಿಕೆ: ಕಳೆದ ವರ್ಷ ಕೃಷಿ ಇಲಾಖೆಯಿಂದ ಜಿಲ್ಲಾದ್ಯಂತ 3882 ತಾಡಪತ್ರಿಗಳನ್ನು ವಿತರಿಸಿತ್ತು. ಪ್ರಸಕ್ತ ವರ್ಷ ನಿರಂತರವಾಗಿ ಸುರಿದ ಮಳೆಗೆ ಹೆಸರು ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ಇನ್ನೂ ಕೆಲವೆಡೆ ಕಟಾವು ಮಾಡಿ ಹಾಕಿರುವ ಮೆಕ್ಕೆಜೋಳ, ಕಟಾವಿಗೆ ಬಂದಿರುವ ಈರುಳ್ಳಿ ಬೆಳೆಗಳನ್ನು ರಕ್ಷಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ಮುಂದುವರಿದು ಮೆಕ್ಕೆಜೋಳಕ್ಕೆ ತುರ್ತು ತಾಡಪತ್ರಿ ಬೇಕಾಗಾಗಿದೆ. ಕೃಷಿ ಇಲಾಖೆ ಕೂಡ ಹೆಚ್ಚುವರಿ ತಾಡಪತ್ರಿ ವಿತರಿಸಲು ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಪ್ರಸಕ್ತ ಸಾಲಿನಲ್ಲಿ 7232 ತಾಡಪತ್ರಿ ವಿತರಣೆ ಮಾಡಿದರೂ ರೈತರ ಬೇಡಿಕೆ ಮಾತ್ರ ಪೂರ್ಣಗೊಂಡಿಲ್ಲ.

ಗುಣಮಟ್ಟದ ತಾಡಪತ್ರಿ

ಕೃಷಿ ಇಲಾಖೆ ಮೂಲಕ ರಿಯಾಯಿತಿ ದರದಲ್ಲಿ ಈ ಹಿಂದೆ ವಿತರಿಸುತ್ತಿದ್ದ ತಾಡಪತ್ರಿಗಳಿಗಿಂತಲೂ ಕಳೆದ ಎರಡು ವರ್ಷಗಳಿಂದ ವಿತರಿಸುತ್ತಿರುವ ತಾಡಪತ್ರಿಗಳು ಉತ್ತಮ ಗುಣಮಟ್ಟದ್ದಾಗಿವೆ ಎನ್ನಲಾಗಿದೆ. ಹೀಗಾಗಿ ಇದೀಗ ಐದು ಲೇಯರ್‌ನ 250 ಜಿಎಸ್ಎಂನ ತಾಡಪತ್ರಿಯನ್ನು ₹1550ಕ್ಕೆ ನೀಡಲಾಗುತ್ತಿದ್ದು, ಇದರಿಂದಾಗಿಯೇ ವ್ಯಾಪಕವಾದ ಬೇಡಿಕೆ ಕಂಡುಬರುತ್ತಿದೆ ಎನ್ನುತ್ತಾರೆ ಕೆಲ ಅಧಿಕಾರಿಗಳು.

ಲಾಟರಿ ಮೂಲಕ ಆಯ್ಕೆಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 50ರ ದರದಲ್ಲಿ ತಾಡಪತ್ರಿಗಳನ್ನು ಸರ್ಕಾರ ನೀಡುತ್ತಿದೆ. ಹೀಗಾಗಿ ಅವರಲ್ಲಿ ಪೈಪೋಟಿ ಹೆಚ್ಚಾಗಿದೆ. ಪೈಪೋಟಿ ತಪ್ಪಿಸಿ ಪಾರದರ್ಶಕವಾಗಿ ವಿತರಣೆ ಮಾಡುವ ಉದ್ದೇಶದಿಂದ ತಾಡಪತ್ರಿಗೆ ಅರ್ಜಿ ಹಾಕಿದ ಎಲ್ಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತಿದೆ. ಬೇಡಿಕೆ ದುಪ್ಪಟ್ಟು: ಜಿಲ್ಲೆಯಲ್ಲಿ ಗದಗ, ಬೆಟಗೇರಿ ಸೇರಿ ಒಟ್ಟು 11 ರೈತ ಸಂಪರ್ಕಗಳಿವೆ. 2023- 24ರಲ್ಲಿ ಗದಗ ಮತ್ತು ಬೆಟಗೇರಿ ಹೋಬಳಿಗೆ ತಲಾ 316, ಲಕ್ಷ್ಮೇಶ್ವರ 132, ಡಂಬಳ ಮತ್ತು ಮುಂಡರಗಿ ಹೋಬಳಿಗೆ ತಲಾ 375, ಕೊಣ್ಣೂರ 185, ನರಗುಂದ 565, ಹೊಳೆಆಲೂರ 326, ನರೇಗಲ್ಲ 398, ರೋಣ 393 ಮತ್ತು ಶಿರಹಟ್ಟಿ 531 ಸೇರಿ ಒಟ್ಟು 3,882 ತಾಡಪತ್ರಿಗಳು ಹಂಚಿಕೆ ಆಗಿದ್ದವು.ಆದರೆ, 2024- 25ರಲ್ಲಿ ಈ ಸಂಖ್ಯೆ ದುಪ್ಪಟ್ಟಾಗಿದೆ. ಗದಗ ಮತ್ತು ಬೆಟಗೇರಿ ಹೋಬಳಿಗೆ ತಲಾ 455, ಡಂಬಳ 768, ಮುಂಡರಗಿ 769, ಕೊಣ್ಣೂರ ಮತ್ತು ನರಗುಂದ ಹೋಬಳಿಗೆ ತಲಾ 300, ಹೊಳೆಆಲೂರ, ನರೇಗಲ್ಲ ಮತ್ತು ರೋಣ ಹೋಬಳಿಗೆ ತಲಾ 860 ಹಾಗೂ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ಹೋಬಳಿಗೆ ತಲಾ 805 ಸೇರಿ ಒಟ್ಟು 7,232 ತಾಡಪತ್ರಿಗಳು ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಹಂಚಿಕೆ ಆಗಿವೆ. ಒಂಬತ್ತು ಹೋಬಳಿಗಳಲ್ಲಿ ಶೇ. 98ರಷ್ಟು ತಾಡಪತ್ರಿಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ವಿತರಣೆಯಾಗಿವೆ ಎನ್ನುತ್ತಿವೆ ಕೃಷಿ ಇಲಾಖೆ ಕಡತಗಳು.

ಹೆಚ್ಚಿನ ಅನುಕೂಲ: ಕೃಷಿ ಇಲಾಖೆ ನೀಡುತ್ತಿರುವ ತಾಡಪತ್ರಿ ಗುಣಮಟ್ಟದ್ದಿದೆ. ಅಷ್ಟೇ ಅಲ್ಲದೇ ಈ ವರ್ಷ ಮಳೆ ವಿಪರೀತ ಆಗಿದ್ದರಿಂದ ರೈತರಿಗೆ ತಾಡಪತ್ರಿಗಳು ಹೆಚ್ಚು ಬೇಕಾಗುತ್ತವೆ. ಬೇಡಿಕೆ ಇದ್ದಾಗಲೇ ಸರ್ಕಾರ ಕೃಷಿ ಇಲಾಖೆ ಮೂಲಕ ಪೂರೈಸುವ ಕೆಲಸ ಮಾಡಿದರೆ ರೈತರಿಗೆ ಇನ್ನು ಹೆಚ್ಚಿನ ಅನುಕೂಲವಾಗುತ್ತದೆ ಎಂದು ಮಲ್ಲಾಪೂರ ಗ್ರಾಮದ ರೈತ ವಿರುಪಾಕ್ಷಪ್ಪ ಚಳಗೇರಿ ತಿಳಿಸಿದರು.

PREV

Recommended Stories

ಬ್ರಾಹ್ಮಣ ಸಮುದಾಯಕ್ಕೆ ಸೌಲಭ್ಯ ನೀಡಲು ಬದ್ಧ : ಸಚಿವ ದಿನೇಶ್‌ ಗುಂಡೂರಾವ್‌
ಬೆಂಗಳೂರು ನಗರದ 6 ಆರ್‌ಟಿಒ ಕಚೇರಿ ಮೇಲೆ ದಾಳಿ: ಹಲವು ಅಕ್ರಮ ಪತ್ತೆ