* ಏರಿದ ರಬ್ಬರ್‌ ಧಾರಣೆ : ರೈತರ ಮೊಗದಲ್ಲಿ ಮಂದಹಾಸ

KannadaprabhaNewsNetwork |  
Published : Mar 22, 2024, 01:06 AM IST
ನರಸಿಂಹರಾಜಪುರ ತಾಲೂಕಿನ ಬಿ.ಎಚ್‌.ಕೈಮರದ ಬಿ.ವಿ.ದೀಪಕ್ ಅವರ ರಬ್ಬರ್ ತೋಟ | Kannada Prabha

ಸಾರಾಂಶ

ಕಳೆದ 12 ವರ್ಷಗಳಿಂದಲೂ ರಬ್ಬರ್‌ ಧಾರಣೆ ಕುಸಿದಿದ್ದು ತಾಲೂಕಿನ ನೂರಾರು ರೈತರು ರಬ್ಬರ್‌ ಬೆಳೆಯ ಸಹವಾಸವೇ ಬೇಡ ಎಂದು ಅಡಕೆ ಗಿಡ ನೆಟ್ಟಿರುವ ಈ ಸಂದರ್ಭದಲ್ಲಿ ಮತ್ತೆ ಗ್ರೇಡ್‌ ರಬ್ಬರ್ ಧಾರಣೆ 182 ರು. ಗೆ ಏರಿಕೆ ಕಂಡಿದ್ದು ರಬ್ಬರ್‌ ತೋಟ ಉಳಿಸಿಕೊಂಡವರ ಮುಖದಲ್ಲಿ ಮಂದಹಾಸ ಮೂಡಿಸಿದೆ.

- ಕಳೆದ 12 ವರ್ಷದಿಂದ ಇದೇ ಪ್ರಥಮ ಬಾರಿಗೆ ಈ ಉತ್ತಮ ಧಾರಣೆ । ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ಗ್ರೇಡ್‌ ರಬ್ಬರ್ ಗೆ 230 ರು । ಲಾಟ್ 162 ರುಪಾಯಿಗೆ ಏರಿಕೆ । 200 ರು. ದಾಟುವ ನಿರೀಕ್ಷೆ । ಗ್ರೇಡ್‌ ರಬ್ಬರ್‌ 182 ರು.

ಯಡಗೆರೆ ಮಂಜುನಾಥ್,

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕಳೆದ 12 ವರ್ಷಗಳಿಂದಲೂ ರಬ್ಬರ್‌ ಧಾರಣೆ ಕುಸಿದಿದ್ದು ತಾಲೂಕಿನ ನೂರಾರು ರೈತರು ರಬ್ಬರ್‌ ಬೆಳೆಯ ಸಹವಾಸವೇ ಬೇಡ ಎಂದು ಅಡಕೆ ಗಿಡ ನೆಟ್ಟಿರುವ ಈ ಸಂದರ್ಭದಲ್ಲಿ ಮತ್ತೆ ಗ್ರೇಡ್‌ ರಬ್ಬರ್ ಧಾರಣೆ 182 ರು. ಗೆ ಏರಿಕೆ ಕಂಡಿದ್ದು ರಬ್ಬರ್‌ ತೋಟ ಉಳಿಸಿಕೊಂಡವರ ಮುಖದಲ್ಲಿ ಮಂದಹಾಸ ಮೂಡಿಸಿದೆ. ತಾಲೂಕಿನಲ್ಲಿ ಖುಷ್ಕಿ ಭೂಮಿ, ಗುಡ್ಡ, ನೀರಿಲ್ಲದ ಮಕ್ಕಿಗದ್ದೆಗಳಲ್ಲಿ ರೈತರು ರಬ್ಬರ್‌ ಗಿಡಗಳನ್ನು ನೆಟ್ಟಿದ್ದಾರೆ. ಅಡಕೆಗೆ ಪರ್ಯಾಯವಾಗಿ ರಬ್ಬರ್‌ ಬೆಳೆಯಾಗಬಹುದು ಎಂಬುದು ರೈತರ ನಿರೀಕ್ಷೆಯಾಗಿತ್ತು. ರಬ್ಬರ್‌ ಬೆಳೆಗೆ ನೀರು ಬೇಡ.ಆದರೆ ಪ್ರತಿ ದಿನ ಆದಾಯ ತರುವ ಬೆಳೆಯಾಗಿದ್ದು ರೈತರಿಗೆ ವರವಾಗಬಹುದು ಎಂದು ನಿರೀಕ್ಷೆ ಮಾಡಿ ಬಹುತೇಕ ರೈತರು ರಬ್ಬರ್‌ ತೋಟಗಳನ್ನು ಮಾಡಿದ್ದರು.

ಆದರೆ, ರಬ್ಬರ್‌ ಬೆಳೆ ಧಾರಣೆ ಏರಿಳಿತದಿಂದಾಗಿ ರಬ್ಬರ್‌ ಬೆಳೆಗಾರರು ಪದೇ, ಪದೇ ಸಂಕಷ್ಟ ಅನುಭವಿಸಿದ್ದಾರೆ. ನರಸಿಂಹರಾಜಪುರ ಭೂ ಅಭಿವೃದ್ಧಿ ಬ್ಯಾಂಕ್ ರಬ್ಬರ್‌ ತೋಟ ಮಾಡಲು ನೂರಾರು ರೈತರಿಗೆ 2 ಕೋಟಿ ರು. ಸಾಲ ನೀಡಿತ್ತು. ರಬ್ಬರ್‌ ಮಂಡಳಿ ಸಹಾಯ ಧನ ನೀಡಿ ಪ್ರೋತ್ಸಾಹ ನೀಡಿತ್ತು. ತಾಲೂಕಿನಲ್ಲಿ 4 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರಬ್ಬರ್‌ ಗಿಡಗಳನ್ನು ನೆಡಲಾಗಿತ್ತು. ನರಸಿಂಹರಾಜಪುರ ಪಟ್ಟಣ ಹಾಗೂ ಬಿ.ಎಚ್‌.ಕೈಮರ ಸೇರಿ 7 ಕ್ಕೂ ಹೆಚ್ಚು ರಬ್ಬರ್‌ ಶೀಟುಗಳನ್ನು ಖರೀದಿ ಮಾಡುವ ಅಂಗಡಿಗಳು ಸಹ ಇದೆ.ಅಡಕೆ ಗಿಡ ನೆಟ್ಟರು: ಅಂದುಕೊಂಡಂತೆ ರೈತರಿಗೆ ರಬ್ಬರ್‌ ಬೆಳೆ ವರವಾಗಿ ಪರಿಣಮಿಸಿಲ್ಲ. ಪದೇ, ಪದೇ ರಬ್ಬರ್‌ ಬೆಲೆ ಕುಸಿಯುತ್ತದೆ. ಒಮ್ಮೆ ಕುಸಿದರೆ 10 ವರ್ಷವಾದರೂ ಚೇತರಿಕೆ ಕಂಡು ಬರುವುದಿಲ್ಲ. ಅಡಕೆಗೆ ಹಲವು ವರ್ಷಗಳಿಂದಲೂ ಉತ್ತಮ ಧಾರಣೆ ಬಂದಿದ್ದು ಎಲ್ಲರ ಚಿತ್ತ ಅಡಕೆ ಬೆಳೆಯತ್ತ ವಾಲಿರುವುದರಿಂದ ಬಹತೇಕ ರಬ್ಬರ್‌ ಬೆಳೆಗಾರರು ತಮ್ಮ ಬರಡು ಭೂಮಿಯಲ್ಲಿ ಕೊಳವೆ ಬಾವಿ ಕೊರೆಸಿ ಅಡಕೆ ತೋಟ ಮಾಡಿದ್ದಾರೆ. ಒಂದು ಅಂದಾಜಿನ ಪ್ರಕಾರ 2 ಸಾವಿರ ಎಕ್ರೆಯಷ್ಟು ರಬ್ಬರ್ ತೋಟ ಕಡಿದು ಅಡಕೆ ತೋಟವನ್ನಾಗಿ ಮಾಡಲಾಗಿದೆ. ರಬ್ಬರ್‌ ಧಾರಣೆ ಏರಿಳಿತ: 1990 ರ ದಶಕದ ಪ್ರಾರಂಭದಲ್ಲಿ ರಬ್ಬರ್‌ 1 ಕೆಜಿಗೆ 60 ರು. ಧಾರಣೆ ಇತ್ತು. ಆಗಲೇ ರೈತರಿಗೆ ರಬ್ಬರ್‌ ಬೆಳೆ ಬಗ್ಗೆ ಒಲವು ಬಂದಿತ್ತು. 1995 ರ ಹೊತ್ತಿಗೆ ರಬ್ಬರ್‌ ಬೆಲೆ ಕುಸಿದು 1 ಕೆಜಿಗೆ ಕೇವಲ 18 ರು. ಆಯಿತು. ನಂತರ 10 ವರ್ಷ ಕಳೆದರೂ ರಬ್ಬರ್‌ ಧಾರಣೆ ಏರಿಕೆಯಾಗಲೇ ಇಲ್ಲ.18 ರಿಂದ 35 ರು. ಆಸುಪಾಸಿನಲ್ಲೇ ಇತ್ತು. ಇದರಿಂದ ಬೇಸರಗೊಂಡ ರಬ್ಬರ್‌ ಬೆಳೆಗಾರರು ರಬ್ಬರ್‌ ಮರ ಕಡಿದು ಅಡಿಕೆ ನೆಡಲು ಪ್ರಾರಂಭಿಸಿದ್ದರು. 2006 ರಿಂದ ಮತ್ತೆ ರಬ್ಬರ್‌ ಧಾರಣೆ ಏರಿಕೆ ಪ್ರಾರಂಭವಾಯಿತು.2011-12 ರಲ್ಲಿ ರಬ್ಬರ್ 1 ಕೆಜಿಗೆ 200 ರಿಂದ 240 ರು.ಗೆ ಏರಿಕೆಯಾಗಿ ದಾಖಲೆ ಸೃಷ್ಠಿಸಿ ರಬ್ಬರ್ ಬೆಳಗಾರರು ಝಣ, ಝಣ ಎಂದು ಹಣ ಎಣಿಸಿದ್ದರು. ಆಗ ಮತ್ತೆ ರಬ್ಬರ್‌ ಗಿಡ ಹುಡುಕಿ ತಮ್ಮ ಒಣ ಭೂಮಿಯಲ್ಲಿ ರೈತರು ರಬ್ಬರ್ ಗಿಡ ನೆಡಲು ಪ್ರಾರಂಭಿಸಿದರು. ಕೇವಲ 1 ವರ್ಷಕ್ಕೆ ಮತ್ತೆ ರಬ್ಬರ್‌ ಧಾರಣೆ ಕುಸಿದಿತ್ತು. 2012 ರಲ್ಲಿ ರಬ್ಬರ್‌ ಬೆಲೆ ಕೇವಲ 108ಕ್ಕೆ ಕುಸಿದು ನಿಂತಿತು. ನಂತರದ ವರ್ಷಗಳಲ್ಲಿ ರಬ್ಬರ್‌ ಬೆಲೆ ಏರಿಕೆಯಾಗದೆ 120 ರಿಂದ 130ರ ವರೆಗೆ ನಿಂತು ಬಿಟ್ಟಿತ್ತು. ಆದರೆ, 2020 ರ ಹೊತ್ತಿಗೆ 1 ತಿಂಗಳು ಮಾತ್ರ ರಬ್ಬರ್‌ ಧಾರಣೆ 155ಕ್ಕೆ ಮುಟ್ಟಿ ಮತ್ತೆ ವಾಪಾಸಾಯಿತು. ಪ್ರಸ್ತುತ ಕಳೆದ 15 ದಿನದಿಂದ ಮತ್ತೆ ರಬ್ಬರ್ ಬೆಲೆ ಏರಿಕೆ ಕಾಣುತ್ತಿದ್ದು 182ಕ್ಕೆ ಮುಟ್ಟಿದ್ದು ತಜ್ಞರ ಪ್ರಕಾರ 200 ಗಡಿ ದಾಟಲಿದೆ ಎಂಬ ಅಂದಾಜಿದೆ.-- ಕೋಟ್‌, --

ನಾನು 2007ರಲ್ಲಿ 2 ಸಾವಿರ ರಬ್ಬರ್‌ ಗಿಡ ನೆಟ್ಟಿದ್ದು 2014 ರಿಂದ ಟ್ಯಾಪಿಂಗ್‌ ಮಾಡಿ ಹಾಲು ತೆಗೆಯುತ್ತಿದ್ದೇನೆ. ಕಳೆದ 10 ವರ್ಷದಿಂದಲೂ 120 ರಿಂದ 130 ರು. ಧಾರಣೆ ಮಾತ್ರ ಇತ್ತು. ಧಾರಣೆ ಕುಸಿತ ಕಂಡಾಗ ನಾನು ರಬ್ಬರ್‌ ಮರ ಕಡಿಯಲಿಲ್ಲ. ರೈತರಿಗೆ ಎಲ್ಲಾ ಬೆಳೆ ಅವಶ್ಯಕತೆ ಇದೆ. ಅಡಕೆ ಬೆಳೆ ಮಾತ್ರ ನಂಬಿ ಕುಳಿತುಕೊಳ್ಳಬಾರದು. ಈಗ ರಬ್ಬರ್‌ ಧಾರಣೆ ಏರುಮುಖವಾಗಿದ್ದು, ನನಗೆ ಖುಷಿಯಾಗಿದೆ. ಹೆಚ್ಚು ಖರ್ಚು ಇಲ್ಲದ, ರಬ್ಬರ್‌ ಬೆಳೆಯನ್ನು ರೈತರು ಉಳಿಸಿ ಕೊಳ್ಳಬೇಕು.

ಬಿ.ವಿ.ದೀಪಕ್‌,

ರಬ್ಬರ್‌ ಬೆಳೆಗಾರರು, ಬಿ.ಎಚ್‌.ಕೈಮರ -- ಕೋಟ್--

ರಬ್ಬರ್ ಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ಗ್ರೇಡ್ ರಬ್ಬರ್ ಗೆ 230 ರು.ಇದೆ. ಭಾರತದ ರಬ್ಬರ್‌ ಕಂಪನಿಗಳಲ್ಲಿ ರಬ್ಬರ್ ಶೀಟುಗಳ ದಾಸ್ತಾನು ಜಾಸ್ತಿ ಇದೆ. ವಿದೇಶದಿಂದ ಈಗ ರಬ್ಬರ್‌ ಆಮದು ಮಾಡಿ ಕೊಳ್ಳುತ್ತಿಲ್ಲ. ನರಸಿಂಹರಾಜಪುರ ತಾಲೂಕಿನಲ್ಲಿ ಶೇ. 50 ರೈತರು ರಬ್ಬರ್‌ ಕಡಿದು ಅಡಕೆ ನೆಟ್ಟಿದ್ದಾರೆ. ಗ್ಯಾಟ್‌ ಒಪ್ಪಂದ ಇರುವುದರಿಂದ ನಮ್ಮ ದೇಶದ ರಬ್ಬರ್‌ ವಿದೇಶಗಳಿಗೆ ಹೋಗಲಿದೆ. ಮುಂದಿನ ದಿನಗಳಲ್ಲಿ 200 ರು. ದಾಟಿ ರಬ್ಬರ್‌ ಗೆ ಉತ್ತಮ ಧಾರಣೆ ಬರಲಿದೆ.

ಟಿ.ವಿ.ವಿಜಯ,

ಅಧ್ಯಕ್ಷರು,

ತಾಲೂಕು ರಬ್ಬರ್‌ ಉತ್ಪಾದಕರ ಸಂಘ, ನರಸಿಂಹರಾಜಪುರ --- ಕೋಟ್‌--, ನರಸಿಂಹರಾಜಪುರ ಹಾಗೂ ಬಿ.ಎಚ್‌.ಕೈಮರ ಸೇರಿ 7 ಅಂಗಡಿಗಳಲ್ಲಿ ರಬ್ಬರ್ ಖರೀದಿ ಮಾಡಿ ಕೇರಳ, ಮಹಾರಾಷ್ಟ ರಬ್ಬರ್ ಪ್ಯಾಕ್ಟರಿಗಳಿಗೆ ಕಳಿಸುತ್ತಿದ್ದೇವೆ. ಆದರೆ, ರಬ್ಬರ್‌ ಧಾರಣೆ ಕುಸಿತದ ಪರಿಣಾಮ ರಬ್ಬರ್ ಬೆಳೆಗಾರರು ರೈನ್ ಗಾರ್ಡ ಹಾಕಿ ಮಳೆಗಾಲದಲ್ಲಿ ರಬ್ಬರ್‌ ಹಾಲು ತೆಗೆಯುತ್ತಿಲ್ಲ. ರಬ್ಬರ್‌ ಗಿಡ ಕಡಿದಿದ್ದಾರೆ. ಇದರಿಂದ ರಬ್ಬರ್ ಮಾರುಕಟ್ಟೆಗೆ ಬರುವುದೇ ಕಡಿಮೆಯಾಗಿದೆ.

ಸಾಜು,

ರಬ್ಬರ್‌ ಶೀಟು ಖರೀದಿದಾರರು, ಬಿ.ಎಚ್‌.ಕೈಮರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ