ತಿಪಟೂರಿನಲ್ಲಿ ಹೆಚ್ಚಾದ ಬೌಬೌ ಹಾವಳಿ

KannadaprabhaNewsNetwork |  
Published : Apr 01, 2026, 01:15 AM IST
ತಿಪಟೂರು ನಗರದಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿಗೆ ನಗರಸಭೆ ಬ್ರೇಕ್ ಹಾಕುವಂತೆ ಒತ್ತಾಯ | Kannada Prabha

ಸಾರಾಂಶ

ನಗರದಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿರುವುದರಿಂದ ಜನರು ಓಡಾಡಲು ಭಯಬೀತರಾಗುತ್ತಿದ್ದು ಹಾವಳಿ ತಡೆಗಟ್ಟಬೇಕಾದ ನಗರಸಭೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ವಿವಿಧ ಬಡಾವಣೆಗಳ ನಿವಾಸಿಗಳು ನಗರಸಭೆ ಕಾರ್ಯವೈಖರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತಿಪಟೂರು

ನಗರದಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿರುವುದರಿಂದ ಜನರು ಓಡಾಡಲು ಭಯಬೀತರಾಗುತ್ತಿದ್ದು ಹಾವಳಿ ತಡೆಗಟ್ಟಬೇಕಾದ ನಗರಸಭೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ವಿವಿಧ ಬಡಾವಣೆಗಳ ನಿವಾಸಿಗಳು ನಗರಸಭೆ ಕಾರ್ಯವೈಖರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಯಾವ ಬಡಾವಣೆಗಳಲ್ಲಿ ನೋಡಿದರೂ ಬೀದಿ ನಾಯಿಗಳದ್ದೇ ಕಾರುಬಾರಾಗಿದ್ದು, ಜನರು ಭಯದಿಂದಲೇ ಓಡಾಡುವಂತಾಗಿದೆ. ಅದರಲ್ಲೂ ರೈಲ್ವೆ ಸ್ಟೇಷನ್ ರಸ್ತೆ, ಹೌಸಿಂಗ್ ಬೋರ್ಡ್, ಚಾಮುಂಡೇಶ್ವರಿ ಬಡಾವಣೆ, ಗಾಂಧಿನಗರ, ರಂಗಾಪುರ ರಸ್ತೆ, ವಿದ್ಯಾನಗರ, ಎಪಿಎಂಸಿ ಹಳೆ ಸೇರಿದಂತೆ ಬಸ್‌ನಿಲ್ದಾಣ, ಹಳೇ ತರಕಾರಿ ಮಾರುಕಟ್ಟೆ ರಸ್ತೆಗಳಲ್ಲಿ ಬೀದಿನಾಯಿಗಳ ಕಾಟ ವಿಪರೀತವಾಗಿದೆ. ಬೆಳಗಿನ ಜಾವ ಟ್ಯೂಷನ್‌ಗೆ ಹೋಗುವ ಮಕ್ಕಳಿಂದ ಹಿಡಿದು ದಿನಪತ್ರಿಕೆಗಳ ವಿತರಿಸುವ ಹುಡುಗರು ಹಾಗೂ ವಾಕ್‌ಮಾಡಲು ತೆರಳುವವರನ್ನೂ ಬೀದಿನಾಯಿಗಳು ಅಟ್ಟಾಡಿಸಿಕೊಂಡು ಹೆದರಿಸುವ ಜೊತೆಗೆ ಕಚ್ಚುತ್ತಿವೆ. ಇತ್ತೀಚೆಗೆ ಪತ್ರಿಕೆ ಹಾಕುವ ಹುಡುಗರು ನಾಯಿಗಳ ಹಾವಳಿಗೆ ಹೆದರಿ ಪತ್ರಿಕೆ ವಿತರಿಸುವ ಕೆಲಸಕ್ಕೆ ಬರುತ್ತಿಲ್ಲ. ರಸ್ತೆಗಳಲ್ಲಿ ವಾಹನಗಳಲ್ಲಿ ಹೋಗುತ್ತಿದ್ದರೂ ಬೀದಿನಾಯಿಗಳು ಅಟ್ಟಾಡಿಸಿಕೊಂಡು ಬರುತ್ತಿದ್ದು ಇದರಿಂದ ಅಪಘಾತಗಳಾಗಿ ಕೈಕಾಲು ಮುರಿದು ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳಿಂದ ಹೊರ ಬರಬೇಕಾದರೆ ಬೀದಿನಾಯಿಗಳು ಎಲ್ಲಿ ಓಡಿಸಿಕೊಂಡು ಬರುತ್ತವೋ ಎಂದು ನೋಡಿಕೊಂಡು ಹೊರಗೆ ಬರಬೇಕಾದ ಪರಿಸ್ಥಿತಿ ಬಂದಿದೆ. ಪೋಷಕರು ಮಕ್ಕಳನ್ನು ತಾವೇ ಶಾಲೆಗಳಿಗೆ ಕರೆದುಕೊಂಡು ಹೋಗಬೇಕು, ಸಂಜೆ ಕರೆತರಬೇಕಾದ ಪರಿಸ್ಥಿತಿ ಇದೆ. ನಗರಸಭೆ ಬೀದಿ ನಾಯಿಗಳನ್ನು ನಿಯಂತ್ರಿಸುವಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ನಗರಸಭೆ ಬಜೆಟ್‌ನಲ್ಲಿ ಬೀದಿ ನಾಯಿ ನಿಯಂತ್ರಿಸಲು ಹಣ ಎತ್ತಿಡುವುದು ಬಿಟ್ಟರೆ ಈ ಕೆಲಸ ಮಾಡುತ್ತಿಲ್ಲ. ಆದ್ದರಿಂದ ನಗರಸಭೆ ತುರ್ತು ಗಮನಹರಿಸಿ ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸಿ, ನಿರ್ಭಯದಿಂದ ಓಡಾಡಲು ಅನುಕೂಲ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ನಗರಸಭೆ ಮುಂದೆ ಪ್ರತಿಭಟನೆ ಮಾಡಲಾಗುವುದೆಂದು ವಿವಿಧ ಬಡಾವಣೆಗಳ ನಿವಾಸಿಗಳು, ಸಂಘಸಂಸ್ಥೆಗಳವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ----------------------

ಕೋಟ್‌

ನಗರದ ದೊಡ್ಡಪೇಟೆ ಬೀದಿಯಲ್ಲಿ ನಾನು ಕಳೆದ ವಾರ ಪತ್ರಿಕೆಗಳನ್ನು ವಿತರಿಸುವಾಗ ನನ್ನ ದ್ವಿಚಕ್ರವಾಹನದ ಹಿಂದೆಯೇ ಓಡಿ ಬಂದು ನನ್ನ ಕಾಲನ್ನು ಕಚ್ಚಿದ್ದು ೩-ದಿನ ಪತ್ರಿಕೆಗಳನ್ನು ಹಂಚಲು ಆಗಲಿಲ್ಲ. ನಾಯಿಗಳ ಕಾಟದಿಂದ ಮಹಿಳೆಯರು, ಮಕ್ಕಳು, ವಯಸ್ಸಾದರೂ ಓಡಾಡಲು ಭಯ ಪಡುವಂತಾಗಿದೆ. ದಾರಿಯಲ್ಲಿ ಹೋಗಬೇಕಾದರೆ ಏಕಾಏಕಿ ನಾಯಿಗಳು ದಾಳಿ ಮಾಡುತ್ತವೆ. ನಗರದ ಸಾಕಷ್ಟು ಬಡಾವಣೆಗಳಲ್ಲಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ನಗರಸಭೆ ಪೌರಾಯುಕ್ತರು, ಆರೋಗ್ಯಾಧಿಕಾರಿಗಳು ತುರ್ತು ಕ್ರಮಕೈಗೊಳ್ಳಬೇಕಿದೆ. - ಪಾಂಡುರಂಗರಾವ್, ಪತ್ರಿಕಾ ವಿತರಕರು ತಿಪಟೂರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾವಗಡದಲ್ಲಿ ವಿಜಯನಗರ ಕೃಷ್ಣದೇವರಾಯನ ಶಾಸನ ಪತ್ತೆ
ಗುಣಮಟ್ಟದ ಹಾಲು ಶೇಖರಣೆಯಲ್ಲಿ ತುಮಕೂರು ರಾಜ್ಯಕ್ಕೆ ಪ್ರಥಮ