ರಿಯಾಜಅಹ್ಮದ ಎಂ ದೊಡ್ಡಮನಿಕನ್ನಡಪ್ರಭ ವಾರ್ತೆ ಡಂಬಳಹೋಬಳಿಯ 26 ಹಳ್ಳಿಗಳಲ್ಲಿಯೇ ಡಂಬಳ 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಈಚೆಗೆ ಇಲ್ಲಿಯ ರೈತರ ಒಕ್ಕಲುತನದ ಸಾಮಗ್ರಿಗಳು ಹಾಗೂ ಸಾಕುಪ್ರಾಣಿಗಳ ಕಳ್ಳತನಗಳು ಹೆಚ್ಚಾಗಿದ್ದು, ಗ್ರಾಮದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಹಿಂದೇಟು ಹಾಕುತ್ತಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.ಡಂಬಳದಲ್ಲಿ 10 ವರ್ಷದ ಹಿಂದೆ ಅಳವಡಿಸಿದ್ದ ಎರಡು ಕ್ಯಾಮೆರಾಗಳು ನಿದ್ರೆಗೆ ಜಾರಿವೆ. ಬಳಿಕ ಕ್ಯಾಮೆರಾ ಅಳವಡಿಸುವ ವ್ಯವಸ್ಥೆ ಆಗಿಲ್ಲ.
ಐತಿಹಾಸಿಕ ಸ್ಥಳಗಳು: ಗ್ರಾಮದ ಆರಾಧ್ಯ ದೇವರಾದ ಜಗದ್ಗುರು ತೋಂಟದಾರ್ಯ ಮಠ, ಐತಿಹಾಸಿಕ ದೊಡ್ಡಬಸವೇಶ್ವರ, ಸೋಮೇಶ್ವರ, ಹನುಮಂತ ದೇವಾಲಯ, ಜಪದಬಾವಿ ಹತ್ತಿರ ಇರುವ ಐತಿಹಾಸಿಕ ಸಿದ್ದೇಶ್ವರ ದೇವಾಲಯವನ್ನು ನಿಧಿ ಆಸೆಗಾಗಿ ದೇವಾಲಯದ ಒಳಭಾಗದಲ್ಲಿ ಸಂಪೂರ್ಣ ಹಾಳು ಮಾಡಿದ್ದು, ಇಂತಹ ಐತಿಹಾಸಿಕ ಸ್ಥಳಗಳ ಸುರಕ್ಷತೆಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಬೇಕು ಎನ್ನುತ್ತಾರೆ ಸಾರ್ವಜನಿಕರು.
ರೈತರ ಪರಿಕರಗಳ ಕಳ್ಳತನ: ಡಂಬಳ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಅರಿತು ಜಿಲ್ಲಾ ಪೊಲೀಸ್ ಇಲಾಖೆಯ ನಿರ್ದೇಶನದ ಮೂಲಕ ಮುಂಡರಗಿ ಮತ್ತು ಡಂಬಳದ ಪೊಲೀಸರು ಕಾರ್ಯಾಚರಣೆಯ ಮೂಲಕ ಟ್ರ್ಯಾಕ್ಟರ್ ಕಳ್ಳರನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ. ಆದರೆ ಕಳೆದ ಎರಡು ವರ್ಷದಿಂದ ಜಮೀನುಗಳಲ್ಲಿ ಅಳವಡಿಸಿರುವ ಡ್ರೀಪ್ ಪೈಪ್ ಮತ್ತು ಬೋರವೆಲ್ಲ, ಕುಂಟೆ, ರಂಟೆ, ಬಿತ್ತುವ ಯಂತ್ರಗಳನ್ನು ಕಳ್ಳತನ, ಸಾಕು ಪ್ರಾಣಿಗಳ ಕಳ್ಳತನ ನಿರಂತರವಾಗಿ ನಡೆಯುತ್ತಿದ್ದು, ಪೊಲೀಸ್ ಇಲಾಖೆಗೆ ತಲೆನೋವಾಗಿದೆ.ಡಂಬಳ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿರಂತರವಾಗಿ ರೈತರ ಪರಿಕರಗಳನ್ನು ಕಳ್ಳತನ ಮಾಡುತ್ತಿದ್ದು, ಬಹುತೇಕ ಎಲ್ಲಾ ಹಳ್ಳಿಗಳ ರಸ್ತೆಗಳು ಡಂಬಳ ಮಾರ್ಗವನ್ನು ಸಂಪರ್ಕಿಸುತ್ತವೆ. ಗ್ರಾಮದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದರೆ ಕಳ್ಳರನ್ನು ಸುಲಭವಾಗಿ ಹಿಡಿಯಬಹುದು. ಇಲಾಖೆ ಎಚ್ಚೆತ್ತುಕೊಂಡು ರೈತರ ಹಿತಕ್ಕಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಬೇಕು ಎಂದು ಗ್ರಾಮಸ್ಥ ರಾಮಪ್ಪ ಡಂಬಳ ಆಗ್ರಹಿಸಿದ್ದಾರೆ.
ಈಗಾಗಲೇ ಟ್ರ್ಯಾಕ್ಟರ್ ಕಳ್ಳರನ್ನು ಹಿಡಿಯುವಲ್ಲಿ ಸಫಲವಾಗಿದ್ದು, ಬೇರೆ ಪರಿಕರಗಳ ಕಳ್ಳರನ್ನು ಹಿಡಿಯಲು ತಂಡವನ್ನು ಕೂಡಾ ರಚಿಸಿದ್ದು, ಡಂಬಳ ಗ್ರಾಮದಲ್ಲಿಯೂ ಕೂಡಾ ಶೀಘ್ರದಲ್ಲಿಯೇ ಥರ್ಡ್ ಐ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಎಸ್ಪಿ ಬಿ.ಎಸ್. ನೇಮಗೌಡ ಹೇಳಿದ್ದಾರೆ.