ಹೆಚ್ಚುತ್ತಿರುವ ಎಲೆಚುಕ್ಕೆ ರೋಗ: ಆತಂಕ

KannadaprabhaNewsNetwork |  
Published : Oct 03, 2025, 01:07 AM IST
ಪೊಟೋ2ಎಸ್.ಆರ್‌.ಎಸ್6  (ಎಲೆಚುಕ್ಕೆ ರೋಗ ತಗುಲಿರುವುದು.) | Kannada Prabha

ಸಾರಾಂಶ

ಹವಾಮಾನದ ವೈಪರೀತ್ಯದಿಂದ ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಎಲೆಚುಕ್ಕೆ ರೋಗದ ವ್ಯಾಪ್ತಿಯು ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಿದೆ.

ಸಂಶೋಧನೆ ನಡೆಸುತ್ತಿರುವ ತೋಟಗಳಲ್ಲೇ ನಿಯಂತ್ರಣಕ್ಕೆ ಬರುತ್ತಿಲ್ಲ ರೋಗಕನ್ನಡಪ್ರಭ ವಾರ್ತೆ ಶಿರಸಿ

ಹವಾಮಾನದ ವೈಪರೀತ್ಯದಿಂದ ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಎಲೆಚುಕ್ಕೆ ರೋಗದ ವ್ಯಾಪ್ತಿಯು ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಿದ್ದು, ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಸಂಶೋಧನೆ ನಡೆಸುತ್ತಿರುವ ಅಡಿಕೆ ತೋಟಗಳಲ್ಲಿ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರಿಂದ ಬೆಳೆಗಾರರು ಮತ್ತಷ್ಟು ಆತಂಕಕ್ಕೆ ಒಳಗಾಗುವಂತಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ಎಲೆಚುಕ್ಕೆ ತನ್ನ ವ್ಯಾಪ್ತಿಯನ್ನು ಏರಿಸಿಕೊಳ್ಳುತ್ತಲೇ ಇದೆ. ಮಳೆಗಾಲ ಮುಗಿಯುತ್ತಿದ್ದಂತೆಯೇ ಅಡಕೆ ಎಲೆಗಳ ಮೇಲೆ ಹಳದಿ ವರ್ತುಲಗಳು, ಮಧ್ಯೆ ಕಪ್ಪು ಚುಕ್ಕ ಮೂಡುವ ಈ ರೋಗದಲ್ಲಿ ಎಲೆಗಳಲ್ಲಿ ಆಹಾರ ಉತ್ಪಾದನೆ ಸಾಧ್ಯವಾಗದೇ ಮರ ಸೊರಗಲಾರಂಭಿಸುತ್ತವೆ. ಹೆಡೆಗಳು ಕೆಳಕ್ಕೆ ಬಾಗಿ ಮರಗಳು ಸೋತು ನಿಂತಂತೆ ಭಾಸವಾಗುತ್ತವೆ. ಎಲೆಚುಕ್ಕಿ ಬಾಧಿತ ಅಡಕೆ ತೋಟಗಳಲ್ಲಿ ಹಿಡುವಳಿಯೂ ಕ್ಷೀಣಿಸತೊಡಗುತ್ತದೆ. ಕಳೆದ ಮೂರು ವರ್ಷಗಳ ಎಲೆಚುಕ್ಕಿ ಪರಿಣಾಮವಾಗಿ ಜಿಲ್ಲೆಯ ಅನೇಕ ಅಡಕೆ ತೋಟಗಳ ರೈತರು ಈ ವರ್ಷ ಇಳುವರಿಯೇ ಕಡಿಮೆ ಆಗಲಿದೆ ಎಂಬ ಭಯವನ್ನು ರೈತರನ್ನು ಕಾಡುತ್ತಿದೆ.

ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆಯಿಂದ ಉಚಿತ ಔಷಧವನ್ನೂ ಸಹ ನೀಡಲಾಗಿತ್ತು. ಅಲ್ಲದೇ, ಸಿಪಿಸಿಆರ್‌ಐ ತಂಡವು ಶಿರಸಿ ತಾಲೂಕಿನ ಮುಂಡಿಗೇಸರ ಮತ್ತು ನೇರ್ಲವಳ್ಳಿ ಗ್ರಾಮದಲ್ಲಿ ಎಲೆಚುಕ್ಕಿ ನಿಯಂತ್ರಣಕ್ಕೆ ಪ್ರಯೋಗ ಸಹ ನಡೆಸುತ್ತಿದೆ. ಈಗಾಗಲೇ ಅಡಕೆ ಮರದ ಎಲೆಗಳಿಗೆ ಬೋರ್ಡೋ ಸಿಂಪಡಿಸಿದ್ದರೂ ಪ್ರಯೋಗ ನಡೆಸುತ್ತಿರುವ ತೋಟದಲ್ಲಿಯೂ ಎಲೆಚುಕ್ಕಿ ಕಾಣಿಸಿಕೊಳ್ಳತೊಡಗಿದೆ. ಅಡಕೆ ಗೊನೆಗಳಿಗೂ ಈ ಚುಕ್ಕಿಗಳು ಆವರಿಸಿಕೊಂಡು ಇನ್ನೂ ಬೆಳೆಯದ ಅಡಕೆಕಾಯಿಗಳು ಉದುರಲಾರಂಭಿಸಿವೆ. ಇದರ ಹೊರತಾಗಿ ಇದುವರೆಗೂ ಎಲೆಚುಕ್ಕಿ ಕಾಣಿಸಿಕೊಂಡಿರದಿದ್ದ ಬನವಾಸಿ ಭಾಗದಲ್ಲಿಯೂ ಈ ವರ್ಷ ಅಡಕೆ ಮರಗಳು ಕೆಂಪಾಗತೊಡಗಿವೆ.

ಕೃಷಿ ವಿಜ್ಞಾನಿಗಳು ಹೇಳುವ ಪ್ರಕಾರ ವಾತಾವರಣದಲ್ಲಿಯ ಆರ್ದತೆಯ ಪ್ರಮಾಣ ಜಾಸ್ತಿ ಇದ್ದರೆ ಎಲೆಚುಕ್ಕಿ ರೋಗವೂ ತೀವ್ರವಾಗಿ ವಿಸ್ತರಿಸಿಕೊಳ್ಳುತ್ತದೆ. ಮಲೆನಾಡಿನಲ್ಲಿ ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಈ ವಾತಾವರಣ ಇರುವುದರಿಂದ ಕಳೆದ ವರ್ಷ ಈ ತಿಂಗಳಿನಲ್ಲಿಯೇ ಎಲೆಚುಕ್ಕಿ ವೇಗವಾಗಿ ಹಬ್ಬಿತ್ತು. ರೈತರು ಬೋರ್ಡೋ ಸೇರಿದಂತೆ ವಿವಿಧ ಔಷಧವನ್ನು ಡಿಸೆಂಬರ್ ತಿಂಗಳ ವೇಳೆ ಮತ್ತೆ ಸಿಂಪಡಣೆ ಮಾಡಿದ್ದರಿಂದ ಮತ್ತು ವಾತಾವರಣದ ಆದ್ರತೆ ಕಡಿಮೆ ಆದ ಕಾರಣ ಆ ಬಳಿಕ ರೋಗ ನಿಯಂತ್ರಣಕ್ಕೆ ಬಂದಿತ್ತು. ಚಳಿಗಾಲ ಮತ್ತು ಬೇಸಿಗೆಯ ದಿನಗಳಲ್ಲಿ ಮಲೆನಾಡಿನ ರೋಗಪೀಡಿತವಾಗಿದ್ದ ತೋಟಗಳು ಸ್ವಲ್ಪ ಚೇರಿಸಿಕೊಂಡು ಹಸಿರಾಗಿದ್ದವು. ಈ ವರ್ಷ ಮುನ್ನೆಚ್ಚರಿಕೆಯಾಗಿ ಹಲವು ರೈತರು ಮೇ ತಿಂಗಳಿನಲ್ಲಿ ಸಹ ಎಲೆಗಳಿಗೆ ಬೋರ್ಡೋ ಸಿಂಪಡಣೆ ಮಾಡಿದ್ದರು. ಆದಾಗ್ಯೂ ಈ ಯಾವುದಕ್ಕೂ ಬಗ್ಗದ ಎಲೆಚುಕ್ಕಿ ಈಗ ಮತ್ತೆ ಜಿಲ್ಲೆಯಾದ್ಯಂತ ವಿಸ್ತರಿಸಿಕೊಂಡಿದೆ. ಸೆಪ್ಟೆಂಬರ್ ತಿಂಗಳ ವೇಳೆ ವ್ಯಾಪಕವಾಗಿ ರೋಗ ಹಬ್ಬುವ ಸಾಧ್ಯತೆ ಇನ್ನಷ್ಟು ದಟ್ಟವಾಗಿದೆ.ಅಡಿಕೆ ಬೆಳೆಗಾರರ ಆಗ್ರಹ:

ಸಿಪಿಸಿಆರ್‌ಐ ತಾಲೂಕಿನ ಎರಡು ಗ್ರಾಮಗಳಲ್ಲಿ ಅಡಕೆ ತೋಟದ ವ್ಯವಸ್ಥಿತ ನಿರ್ವಹಣೆ, ವಿವಿಧ ಪ್ರಯೋಗಗಳ ಮೂಲಕ ಎಲೆಚುಕ್ಕಿ ನಿಯಂತ್ರಣಕ್ಕೆ ಪ್ರಯೋಗ ನಡೆಸುತ್ತಿದೆ. ಒಟ್ಟೂ ಎರಡು ವರ್ಷಗಳ ಕಾಲ ಈ ಪ್ರಯೋಗ ನಡೆಸಲಿದೆ. ಸಿಪಿಸಿಆರ್‌ಐ ಪ್ರಯೋಗ ನಡೆಸುವ ಜತೆಯಲ್ಲಿಯೇ ಯಾವ ವೇಳೆ ಬೋರ್ಡೋ ಸಿಂಪಡಿಸಬೇಕು, ತೋಟಕ್ಕೆ ಯಾವ ಪೋಷಕಾಂಶ ನೀಡಬೇಕು, ಬಸಿ ಕಾಲುವೆ ನಿರ್ವಹಣೆ ಹೇಗೆ ಮಾಡಬೇಕು ಎಂಬ ಮಾಹಿತಿಯನ್ನೂ ನೀಡಬೇಕು. ಈಗ ನಡೆಯುತ್ತಿರುವ ಪ್ರಯೋಗಗಳ ಫಲಿತಾಂಶ 2 ವರ್ಷಗಳ ಬಳಿಕ ರೈತರಿಗೆ ಲಭಿಸಿ, ಆ ಬಳಿಕ ರೈತರು ಅದನ್ನು ಅನುಷ್ಟಾನಗೊಳಿಸುವಷ್ಟರಲ್ಲಿ ರೋಗ ನಿಯಂತ್ರಣ ಕೈ ಮೀರಬಹುದು. ಅದರ ಬದಲು ಸಿಪಿಸಿಆರ್‌ಐ ಮಾದರಿಯನ್ನೇ ತಾವೂ ಅಳವಡಿಸಿಕೊಂಡು ತೋಟ ರಕ್ಷಿಸಿಕೊಳ್ಳುತ್ತೇವೆ ಎಂದು ಹಲವು ಅಡಿಕೆ ಬೆಳೆಗಾರರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ