ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಶಿಕ್ಷಕರು ಮತ್ತು ಪೋಷಕರು ತಮ್ಮ ಮಕ್ಕಳಿಗೆ ಸುದ್ದಿ ಪತ್ರಿಕೆಗಳು ಹಾಗೂ ಸಾಹಿತ್ಯ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಬೇಕು ಎಂದು ಸಾಹಿತಿ ಟಿ.ಸತೀಶ್ ಜವರೇಗೌಡ ಕರೆ ನೀಡಿದರು.ಪಟ್ಣಣದ ಸ್ಕೂಲ್ ಆಫ್ ಇಂಡಿಯಾ ಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಕವಯತ್ರಿ ಅನಿತಾ ಚೇತನ್ ಬಾರ್ಗಲ್ ಅವರ ‘ಭಾವನೆಗೆ ಬಣ್ಣ ಹಚ್ಚೊ ಬಯಕೆ’ (ಕವನ ಸಂಕಲನ), ‘ರಮಣಮಹರ್ಷಿಗಳು’ ಮತ್ತು ‘ದಾದಾಲೇಖರಾಜ್’ (ಜೀವನ ಚರಿತ್ರೆ) ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ದಿನ ಪತ್ರಿಕೆಗಳಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ಇರುತ್ತದೆ. ಹಾಗೆಯೇ ಸಾಹಿತ್ಯ ಕೃತಿಗಳಲ್ಲಿ ಮಕ್ಕಳ ಉತ್ತಮ ಬದುಕಿಗೆ ಅಗತ್ಯವಿರುವ ಸದ್ವಿಚಾರ, ಚಿಂತನೆ, ಮೌಲ್ಯಗಳಿರುತ್ತವೆ. ಆದ್ದರಿಂದ ಪತ್ರಿಕೆ ಮತ್ತು ಪುಸ್ತಕಗಳ ಓದಲು ಪ್ರೇರೇಪಿಸಿ ಎಂದರು.ಒಂದು ಸಾಹಿತ್ಯ ಕೃತಿ ಜನ ಸಮುದಾಯಕ್ಕೆ ತಲುಪಬೇಕಾದರೆ ಅದರ ಭಾಷೆ, ಆದಷ್ಟು ಸರಳ ಮತ್ತು ಆಕರ್ಷಕ ಶೈಲಿಯಲ್ಲಿರಬೇಕು. ಮನಸ್ಸಿನ ಭಾವನೆ ಮತ್ತು ಜೀವನದ ಅನುಭವಗಳಿಗೆ ಕಲಾತ್ಮಕ ಅಭಿವ್ಯಯ ನೀಡಿದಾಗ ಒಂದು ಕೃತಿ ಮೈದಳೆದು ಓದುಗರ ಸೆಳೆದಿಡುತ್ತದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭವನ್ನು ವಿಶ್ರಾಂತ ಪ್ರಾಂಶುಪಾಲ ಹಾಗೂ ಸಾಹಿತಿ ಶಿ.ಕುಮಾರಸ್ವಾಮಿ ಉದ್ಘಾಟಿಸಿದರು. ಶಾಲೆ ಪ್ರಾಂಶುಪಾಲೆ ಶೈನಿ ಮೇರಿ ಡಯಾಸ್ ಅಧ್ಯಕ್ಷತೆ ವಹಿಸಿದ್ದರು. ಕವಯತ್ರಿ ಅನಿತಾ ಚೇತನ್ ಬಾರ್ಗಲ್, ಬ್ರಹ್ಮಕುಮಾರಿ ವಿದ್ಯಾಲಯದ ರಾಜಯೋಗಿ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಇದೇ ವೇಳೆ ವಿದ್ಯಾರ್ಥಿಗಳಿಂದ ಕನ್ನಡ ಕವನ ವಾಚನ, ಗಾಯನ, ಛದ್ಮ ವೇಷ, ಏಕಪಾತ್ರಭಿನಯ, ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಮಕ್ಕಳನ್ನು ವಿದ್ಯಾವಂತರಾಗಿಸಿ ಸದೃಢ ಸಮಾಜ ನಿರ್ಮಿಸಿ: ಮಂಗಳ ನವೀನ್ ಕುಮಾರ್
ಪಾಂಡವಪುರ:ದೇಶದ ಆಸ್ತಿಯಾಗಿರುವ ಮಕ್ಕಳನ್ನು ವಿದ್ಯಾವಂತರಾಗಿ ಮಾಡಿ ಸದೃಢ ಸಮಾಜ ನಿರ್ಮಿಮಿಸಬೇಕು ಎಂದು ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಂಗಳನವೀನ್ ಕುಮಾರ್ ಹೇಳಿದರು.
ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಇರುವ ಕಿವುಡ ಮತ್ತು ಮೂಕ ವಿಕಲಚೇತನ ಮಕ್ಕಳ ವಿಶೇಷ ವಸತಿ ಶಾಲೆಯಲ್ಲಿ ವಿಕಲಚೇತನ ಮಕ್ಕಳೊಂದಿಗೆ ತಮ್ಮ ಹುಟ್ಟಹಬ್ಬ ಆಚರಿಸಿಕೊಂಡು ಸಿಹಿ ವಿತರಿಸಿ ಮಾತನಾಡಿದರು.ಕಿವುಡ ಮತ್ತು ಮೂಕ ಮಕ್ಕಳು ದೇವರ ಮಕ್ಕಳಂತೆ. ಇಂತಹ ಮಕ್ಕಳಿಗೆ ಭಗವಂತನ ಆಶೀರ್ವಾದವಿರುತ್ತದೆ. ವಿಶೇಷ ಚೇತನ ಮಕ್ಕಳ ಬಗ್ಗೆ ಮರುಕ ವ್ಯಕ್ತಪಡಿಸುವ ಜತೆಗೆ ಇವರಿಗೆ ಸಮಾಜದಲ್ಲಿ ಸಮಾನತೆ ಅವಕಾಶ ಕಲ್ಪಿಸಬೇಕು ಎಂದರು.
ಇದೇ ವೇಳೆ ಉಡುಪಿ ಜವಾಲಿನ್ ಥ್ರೂ ಬಾಲ್ ನಲ್ಲಿ ವಿದ್ಯಾರ್ಥಿಗಳಾದ ಡೆಚ್ಚಿನ್ ಶೆಡಾಲ್, ನಂದೀಶ್ ಅವರನ್ನು ಅಭಿನಂದಿಸಲಾಯಿತು. ಮುಖಂಡರಾದ ಅಶ್ವಿನಿ, ನವೀನ್ ಕುಮಾರ್, ಬಿಜೆಪಿ ಓಬಿಸಿ ಅಧ್ಯಕ್ಷ ರಾಮಚಂದ್ರು, ಜಿಲ್ಲಾ ಕಾರ್ಯದರ್ಶಿ ಮಂಜಾಚಾರಿ, ದೇವರಾಜು, ಜ್ಞಾನ ವಿಕಾಸ ಕೇಂದ್ರದ ಉಪಾಧ್ಯಕ್ಷ ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.