23ರಿಂದ ಬೆಂಗಳೂರಲ್ಲಿ ಗ್ರಾಪಂ ನೌಕರರ ಅನಿರ್ದಿಷ್ಟಾವಧಿ ಧರಣಿ

KannadaprabhaNewsNetwork | Published : Jul 15, 2024 1:54 AM

ಸಾರಾಂಶ

ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ, ಪಿಂಚಣಿ ಸೇರಿದಂತೆ ವಿವಿಧ 19 ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಜು.23ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಗ್ರಾಮ ಪಂಚಾಯಿತಿ (ಸಿಐಟಿಯು) ನೌಕರರ ಸಂಘದ ನೇತೃತ್ವದಲ್ಲಿ ಗ್ರಾ.ಪಂ.ಗಳ ನೌಕರರು ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದಾರೆ ಎಂದು ಸಂಘದ ರಾಜ್ಯ ಖಜಾಂಚಿ ಆರ್.ಎಸ್. ಬಸವರಾಜ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಕನಿಷ್ಠ ವೇತನ, ಪಿಂಚಣಿ ಸೇರಿ 19 ಬೇಡಿಕೆ ಈಡೇರಿಸಲು ಒತ್ತಾಯ: ಬಸವರಾಜ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ, ಪಿಂಚಣಿ ಸೇರಿದಂತೆ ವಿವಿಧ 19 ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಜು.23ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಗ್ರಾಮ ಪಂಚಾಯಿತಿ (ಸಿಐಟಿಯು) ನೌಕರರ ಸಂಘದ ನೇತೃತ್ವದಲ್ಲಿ ಗ್ರಾ.ಪಂ.ಗಳ ನೌಕರರು ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದಾರೆ ಎಂದು ಸಂಘದ ರಾಜ್ಯ ಖಜಾಂಚಿ ಆರ್.ಎಸ್. ಬಸವರಾಜ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದಿನಿಂದ ನಡೆಯುವ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಪಾಲ್ಗೊಳ್ಳಲು ಜಿಲ್ಲೆಯಿಂದ ಸುಮಾರು 1 ಸಾವಿರಕ್ಕೂ ಅಧಿಕ ಗ್ರಾಪಂ ನೌಕರರು ಬೆಂಗಳೂರಿಗೆ ತೆರಳಲಿದ್ದಾರೆ. ರಾಜ್ಯದ ವಿವಿಧೆಡೆಯಿಂದ 30 ಸಾವಿರಕ್ಕೂ ಅಧಿಕ ಗ್ರಾಪಂ ನೌಕರರು ಅನಿರ್ದಿಷ್ಟಾವಧಿ ಹೋರಾಟದ ಮೂಲಕ ಬೇಡಿಕೆಗಳ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಿದ್ದಾರೆ ಎಂದರು.

ರಾಜ್ಯಾದ್ಯಂತ ಗ್ರಾ.ಪಂ.ಗಳಲ್ಲಿ ಕೆಲಸ ಮಾಡುವ ಬಿಲ್ ಕಲೆಕ್ಟರ್, ನೀರಗಂಟಿ, ಕಂಪ್ಯೂಟರ್ ಆಪರೇಟರ್‌, ಜವಾನ, ಕ್ಲರ್ಕ್‌ಗಳಿಗೆ ಕನಿಷ್ಠ ₹31 ಸಾವಿರ ವೇತನ ನಿಗದಿಪಡಿಸಬೇಕು. ಗ್ರಾಪಂಗಳಲ್ಲಿ ಕೆಲಸ ಮಾಡಿ, ನಿವೃತ್ತರಾದವರಿಗೆ ವರ್ಷಕ್ಕೆ 15 ದಿನಗಳ ವೇತನ ಆಧರಿಸಿ, ಪಿಂಚಣಿ ನೀಡಬೇಕು. ಆದರೆ, ಪಿಂಚಣಿ ಮಾತ್ರ ಇಂದಿಗೂ ನೀಡುತ್ತಿಲ್ಲ. ಕನಿಷ್ಠ ₹6 ಸಾವಿರ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.

ಕರ ವಸೂಲಿಗಾರರು, ಕಂಪ್ಯೂಟರ್ ಆಪರೇಟರ್‌ಗಳು, ಗ್ರೇಡ್-2 ಕಾರ್ಯದರ್ಶಿ ಇತರೆ ಹುದ್ದೆಗಳಿಗೆ ಬಡ್ತಿ ಪಡೆಯುವ ಅವಕಾಶ ಇದೆ. ಆದರೆ, ಅನೇಕ ಗ್ರಾಪಂಗಳು ಮೇಲ್ದರ್ಜೆಗೇರದ ಹಿನ್ನೆಲೆಯಲ್ಲಿ ಬಡ್ತಿ ಪಡೆಯಲು ಆಗುತ್ತಿಲ್ಲ. 5626 ಗ್ರಾಪಂಗಳ ಪೈಕಿ 1500 ಗ್ರಾಪಂಗಳು ಮಾತ್ರ ಮೇಲ್ದರ್ಜೆಗೇರಿವೆ. ಅರ್ಹ ಗ್ರಾ.ಪಂ.ಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಪದೋನ್ನತಿಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ 196 ಗ್ರಾಪಂಗಳಲ್ಲಿ ಯಾವ್ಯಾವ ಗ್ರಾ.ಪಂ.ಗಳು ಮೇಲ್ದರ್ಜೆಗೇರಿವೆ ಎಂಬ ಬಗ್ಗೆ ಸರ್ಕಾರವೂ ಮಾಹಿತಿ ನೀಡಿಲ್ಲ. ಅರ್ಹ ಗ್ರಾಪಂಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ಆಗಬೇಕು. ಸಂಘದ ನೇತೃತ್ವದಲ್ಲಿ ಗ್ರಾಪಂ ನೌಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಾಗಲೀ, ರಾಜ್ಯ ಸರ್ಕಾರವಾಗಲೀ ಇಲ್ಲಿವರೆಗೂ ಸ್ಪಂದಿಸಿಲ್ಲ ಎಂದು ದೂರಿದರು.

ಜನವರಿ 2024ರಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಭರವಸೆ ನೀಡಿದ್ದರು. ಅದು ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಹಿನ್ನೆಲೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜು.23ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಂಘವು ಮುಂದಾಗಿದೆ ಎಂದು ಬಸವರಾಜ ವಿವರಿಸಿದರು.

ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ಎಚ್. ಆನಂದರಾಜ, ಜಿಲ್ಲಾಧ್ಯಕ್ಷ ಶ್ರೀನಿವಾಸಾಚಾರಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಬೇತೂರು, ಚಂದ್ರಪ್ಪ ಇತರರು ಇದ್ದರು.

- - -

ಬಾಕ್ಸ್‌ * ಬೇಡಿಕೆಗಳೇನು? - ಬಿಲ್ ಕಲೆಕ್ಟರ್, ನೀರಗಂಟಿ, ಕಂಪ್ಯೂಟರ್ ಆಪರೇಟರ್‌, ಜವಾನ, ಕ್ಲರ್ಕ್‌ಗಳಿಗೆ ಕನಿಷ್ಠ ₹31 ಸಾವಿರ ವೇತನ ನೀಡಬೇಕು

- ನಿವೃತ್ತರಾದವರಿಗೆ ವರ್ಷಕ್ಕೆ 15 ದಿನಗಳ ವೇತನ ಆಧರಿಸಿ, ಪಿಂಚಣಿ ನೀಡಬೇಕು

- ಅರ್ಹ ಗ್ರಾ.ಪಂ.ಗಳನ್ನು ಮೇಲ್ದರ್ಜೆಗೇರಿಸಿ ಪದೋನ್ನತಿಗೆ ಅವಕಾಶ ಮಾಡಿಕೊಡಬೇಕು

- - -

-14ಕೆಡಿವಿಜಿ3:

ದಾವಣಗೆರೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ (ಸಿಐಟಿಯು) ನೌಕರರ ಸಂಘದ ರಾಜ್ಯ ಖಜಾಂಚಿ ಆರ್.ಎಸ್. ಬಸವರಾಜ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

Share this article