ರಸ್ತೆ ಸೌಲಭ್ಯಕ್ಕಾಗಿ ಇಂದಿನಿಂದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ

KannadaprabhaNewsNetwork |  
Published : Feb 26, 2024, 01:31 AM IST
ಕಬ್ಬಿನ ಟ್ರ್ಯಾಕ್ಟರ್ ಸುಗಮವಾಗಿ ಹೋಗುವಂತೆ ಮಾಡಲು ರೈತರು ಹದಗೆಟ್ಟ ರಸ್ತೆಯನ್ನು ಜೆಸಿಬಿ ಯಂತ್ರದಿಂದ ಸರಿಪಡಿಸಿಕೊಳ್ಳುತ್ತಿರುವುದು.  | Kannada Prabha

ಸಾರಾಂಶ

ಚಕ್ರ, ತ್ರಿಚಕ್ರ ವಾಹನಗಳು ಮುಗುಚಿ ಬಿದ್ದು ಅನೇಕರು ಗಾಯಗೊಂಡಿದ್ದಾರೆ. ಕಬ್ಬಿನ ಟ್ರ್ಯಾಕ್ಟರ್‌ಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಸಾರಿಗೆ ಬಸ್‌ ಸೇರಿ ಯಾವುದೇ ದೊಡ್ಡ ವಾಹನ ಸಂಚರಿಸಿದರೆ ಧೋಳೋ ಧೂಳು.

ರಾಹುಲ್ ದೊಡ್ಮನಿ ಬಡದಾಳ

ಕನ್ನಡಪ್ರಭ ವಾರ್ತೆ ಚವಡಾಪುರ

ಕನಿಷ್ಠ ಸೌಕರ್ಯವನ್ನೂ ನಮ್ಮೂರಿಗೆ ನೀಡುತ್ತಿಲ್ಲ. ಗ್ರಾಮಕ್ಕೆ ಸಂಪರ್ಕಿಸುವ ಎಲ್ಲಾ ರಸ್ತೆ ಹದಗೆಟ್ಟಿವೆ. ಹೀಗಾಗಿ ವ್ಯವಸ್ಥೆ ಬಗ್ಗೆ ಬೇಸತ್ತಿರುವ ಗ್ರಾಮಸ್ಥರು ಲೋಕಸಭೆ ಚುನಾವಣೆ ಬಹಿಷ್ಕರಿಸಲು ತೀರ್ಮಾನಿಸಿದ್ದಲ್ಲದೆ, ಅನಿಷ್ಟ ಧರಣಿ ಸತ್ಯಾಗ್ರಹಕ್ಕೂ ಮುಂದಾಗಿದ್ದಾರೆ.

ಅಫಜಲ್ಪುರ ತಾಲೂಕು ಕೇಂದ್ರದಿಂದ 15 ಕಿ.ಮೀ ದೂರದಲ್ಲಿರುವ ಬಡದಾಳ ಗ್ರಾಮಕ್ಕೆ ನಾಲ್ಕು ದಿಕ್ಕುಗಳಿಂದ ಸಂಪರ್ಕ ರಸ್ತೆಗಳಿವೆ. ಆದರೆ ಒಂದೇ ಒಂದು ರಸ್ತೆಯೂ ಸರಿಯಾಗಿಲ್ಲ. ಬಡದಾಳದಿಂದ ಬಳೂರ್ಗಿ ರಾಷ್ಟ್ರೀಯ ಹೆದ್ದಾರಿಗೆ 4 ಕಿ.ಮೀ, ರೇವೂರ ಜಿಲ್ಲಾ ಮುಖ್ಯರಸ್ತೆಗೆ 4 ಕಿ.ಮೀ, ಅರ್ಜುಣಗಿ ಅಂತಾರಾಜ್ಯ ಸಂಪರ್ಕ ರಸ್ತೆಗೆ 4 ಕಿ.ಮೀ ಹಾಗೂ ಚಿಂಚೋಳಿ ಸಂಪರ್ಕ ರಸ್ತೆ 4 ಕಿ.ಮೀ ಇದೆ. ಆದರೆ ಈ ರಸ್ತೆಗಳಲ್ಲಿ ಮೊಳಕಾಲುದ್ದದ ಹೊಂಡಗಳು ಬಿದ್ದಿವೆ. ಜೊತೆಗೆ ದೊಡ್ಡ ಕಲ್ಲುಗಳು ಎದ್ದಿದ್ದು ವಾಹನ ಸವಾರರು ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ.

ದ್ವಿಚಕ್ರ, ತ್ರಿಚಕ್ರ ವಾಹನಗಳು ಮುಗುಚಿ ಬಿದ್ದು ಅನೇಕರು ಗಾಯಗೊಂಡಿದ್ದಾರೆ. ಕಬ್ಬಿನ ಟ್ರ್ಯಾಕ್ಟರ್‌ಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಸಾರಿಗೆ ಬಸ್‌ ಸೇರಿ ಯಾವುದೇ ದೊಡ್ಡ ವಾಹನ ಸಂಚರಿಸಿದರೆ ಧೋಳೋ ಧೂಳು. ಈ ವಾಹನದ ಹಿಂದೆ ಸಂಚರಿಸುವ ವಾಹನ ಸವಾರರ ಪಾಡಂತೂ ಹೇಳತೀರದು.

ಕೆಲ ತಿಂಗಳ ಹಿಂದೆ ನಿರ್ಮಿಸಿದ ರಸ್ತೆ ಹಾಳು:

ಬಡದಾಳ ಅರ್ಜುಣಗಿ ಸಂಪರ್ಕ ರಸ್ತೆ ಕಳೆದ ಕೆಲ ತಿಂಗಳ ಹಿಂದಷ್ಟೆ ನಿರ್ಮಿಸಲಾಗಿದ್ದು, ಆಗಲೆ ಕಿತ್ತು ಹೋಗಿದೆ. ಇನ್ನೊಂದೆಡೆ ಬಡದಾಳ - ಬಳೂರ್ಗಿ ರಸ್ತೆ ಕಳೆದ ಅಕ್ಟೋಬರ್‌ನಲ್ಲಿ ಡಾಂಬರೀಕರಣಕ್ಕಾಗಿ ಅಗೆದು ಹಾಗೆ ಬಿಟ್ಟಿದ್ದಾರೆ. ರೈತರು ಕಾರ್ಖಾನೆಗೆ ಕಬ್ಬು ಸಾಗಿಸಲು ಸಾಧ್ಯವಾಗದೆ ತಮ್ಮ ಸ್ವಂತ ಖರ್ಚಿನಲ್ಲಿ ಅನೇಕ ಬಾರಿ ರಸ್ತೆ ರಿಪೇರಿ ಮಾಡಿಸಿದ್ದೂ ಆಗಿದೆ.

ಚಿಂಚೋಳಿ ರಸ್ತೆಯಲ್ಲೂ ಮೊಣಕಾಲುದ್ದ ಗುಂಡಿ ಹೊಂಡ. ಜತೆಗೆ ಕಿರಿದಾದ ರಸ್ತೆಯಿಂದಾಗಿ ಯಾವ ವಾಹನ ಬಂದರೂ ಸರಾಗವಾಗಿ ಸಂಚರಿಸಲಾಗುತ್ತಿಲ್ಲ. ರೇವೂರ ರಸ್ತೆಯ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಮಳೆಗಾಲದಲ್ಲಿ ಕೆಸರಿನ ಕಾಟವಾದರೆ, ಈಗ ಬೇಸಿಗೆಯಲ್ಲಿ ಧೂಳಿನ ಕಿರಿಕಿರಿ. ಹೀಗಾಗಿ ಆಕ್ರೋಶಗೊಂಡಿರುವ ಗ್ರಾಮಸ್ಥರು ಸೋಮವಾರದಿಂದ ಗ್ರಾಮದ ಬಸವಣ್ಣ ದೇವರ ಗುಡಿ ಮುಂದೆ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ