ಬೆಣ್ಣಿಹಳ್ಳಕ್ಕೆ ತಡೆಗೋಡೆ ನಿರ್ಮಿಸಲು ಅನುದಾನವೇ ಮೀಸಲಿಟ್ಟಿಲ್ಲ: ಶಾಸಕ ಎಂ.ಆರ್. ಪಾಟೀಲ

KannadaprabhaNewsNetwork | Published : Feb 26, 2024 1:31 AM

ಸಾರಾಂಶ

ಬೆಣ್ಣಿಹಳ್ಳದ ಸಮಸ್ಯೆ ಸುಮಾರು ವರ್ಷಗಳಿಂದಲೂ ಹೀಗೆ ಇದೆ. ಕುಂದಗೋಳ ಕ್ಷೇತ್ರದ 22 ಹಳ್ಳಿಗಳಲ್ಲಿ ಬೆಣ್ಣಿಹಳ್ಳದಿಂದ ಸಮಸ್ಯೆ ಎದುರಿಸುವಂತಾಗಿದೆ ಎಂದು ಶಾಸಕ ಎಂ.ಆರ್‌.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಬೆಣ್ಣಿಹಳ್ಳಕ್ಕೆ ತಡೆಗೋಡೆ ನಿರ್ಮಾಣ ಮಾಡಬೇಕು. ಹೂಳು ತೆಗೆಯಬೇಕು. ಆದರೆ ಅದಕ್ಕೆ ಸರ್ಕಾರ ಅನುದಾನವನ್ನೇ ಮೀಸಲಿಟ್ಟಿಲ್ಲ ಎಂದು ಶಾಸಕ ಎಂ.ಆರ್‌.ಪಾಟೀಲ ಹೇಳಿದರು.

ವಿಧಾನಸೌಧದಲ್ಲಿ ನಡೆದ ಸದನದಲ್ಲಿ ಮಾತನಾಡಿದ ಅವರು, ಬೆಣ್ಣಿಹಳ್ಳ 148 ಕಿ.ಮೀ. ಹರಿಯುತ್ತಿದ್ದು, ಕುಂದಗೋಳ ಕ್ಷೇತ್ರದಲ್ಲಿ 42 ಕಿ.ಮೀ. ಉದ್ದ ಹರಿಯುತ್ತದೆ. ಪ್ರತಿವರ್ಷ ಮಳೆಗಾಲದಲ್ಲಿ ಅಪಾರ ಹಾನಿಯನ್ನುಂಟು ಮಾಡುತ್ತದೆ. ಆಯವ್ಯಯದಲ್ಲಿ ಸೂಚಿಸಿದಂತೆ ಬೆಣ್ಣಿಹಳ್ಳಕ್ಕೆ ತಡೆಗೋಡೆ ನಿರ್ಮಾಣ ಮಾಡುವುದಾಗಿ ಸರ್ಕಾರ ತಿಳಿಸಿದೆ. ಆದರೆ ಇದಕ್ಕಾಗಿ ನಿರ್ಧಿಷ್ಟ ಅನುದಾನ ಮೀಸಲಿಟ್ಟಿಲ್ಲ.

ಬೆಣ್ಣಿಹಳ್ಳದ ಸಮಸ್ಯೆ ಸುಮಾರು ವರ್ಷಗಳಿಂದಲೂ ಹೀಗೆ ಇದೆ. ಕುಂದಗೋಳ ಕ್ಷೇತ್ರದ 22 ಹಳ್ಳಿಗಳಲ್ಲಿ ಬೆಣ್ಣಿಹಳ್ಳದಿಂದ ಸಮಸ್ಯೆ ಎದುರಿಸುವಂತಾಗಿದೆ. ಪ್ರತಿವರ್ಷ ಸಾವಿರಾರು ಎಕರೆ ಬೆಳೆಯು ಬೆಣ್ಣಿಹಳ್ಳದಿಂದ ಹಾಗೂ ಇದರ ಉಪಹಳ್ಳಗಳಾದ ಕಗ್ಗೋಡಿ, ಮಾಸ್ತಿ, ದೇಸಾಯಿ, ಡವಗಿ, ಹಾಗೂ ಗೂಗಿಹಳ್ಳಗಳಿಂದ ನಾಳವಾಗುತ್ತದೆ. ಹಾಗಾಗಿ, ಬೆಣ್ಣಿಹಳ್ಳಕ್ಕೆ ಕೇವಲ ತಡೆಗೋಡೆಯಷ್ಟೇ ಅಲ್ಲ. ಇದರ ಉಪಹಳ್ಳಗಳ ಹೂಳು ತೆಗೆಯುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಮೇವು ಬ್ಯಾಂಕ್‌:

ತಾಲೂಕಿನಲ್ಲಿ ತೀವ್ರ ಬರ ಆವರಿಸಿದೆ. ಟಾಸ್ಕ್‌ಪೋರ್ಸ್‌ ಸಮಿತಿಯಲ್ಲಿ ಮೇವು ಖರೀದಿಸಲು ರೈತರು ಖರ್ಚು ಮಾಡಲು ತಿಳಿಸಿರುವ ₹2000ವನ್ನು ಸರ್ಕಾರ ಉಚಿತವಾಗಿ ನೀಡಬೇಕು. ಗ್ರಾಮೀಣ ಭಾಗದ ಪ್ರತಿ ಕುಟುಂಬಗಳಲ್ಲಿ 8 ರಿಂದ 10 ಟನ್ ಮೇವು ಅವಶ್ಯವಿದೆ. ಇದನ್ನು ಉಚಿತವಾಗಿ ನೀಡಬೇಕು. ಸದ್ಯ ಸರಕಾರ ಬರ ಪರಿಹಾರ ಎಂದು ಪ್ರತಿ ಖಾತೆದಾರನಿಗೆ ₹ 2000 ಮಾತ್ರ ನೀಡುತ್ತಿದ್ದು, ಇದು ಕನಿಷ್ಠ ₹ 25,000ಗೆ ಏರಿಸಬೇಕು. ಬರಪೀಡಿತ ತಾಲೂಕುಗಳಿಗೆ ತುರ್ತು ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲು ₹25 ಲಕ್ಷ ಹಂಚಿಕೆ ಮಾಡಿದ್ದು, ಇದು ಏತಕ್ಕೂ ಸಾಲಗಾಗಿದೆ. ಜಿಲ್ಲಾಡಳಿತವು ನೀಡಿದ ವರದಿಯನ್ವಯ ನಮ್ಮ ತಾಲೂಕಿಗೆ ಕನಿಷ್ಠ ₹50 ಕೋಟಿ ಅನುದಾನ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು.

ಕುಂದಗೋಳ ಕ್ಷೇತ್ರ ಪ್ರತಿಶತ 70ರಷ್ಟು ಯರೇಭೂಮಿಯಿಂದ ಕೂಡಿದೆ. ಇಲ್ಲಿರುವ ಕೆರೆಗಳ ನೀರು ಬರಗಾಲವಿರುವುದರಿಂದ ಬತ್ತಿ ಹೋಗಿವೆ. ಹಾಗಾಗಿ, ಬರಪೀಡಿತ ತಾಲೂಕಿರುವುದರಿಂದ ಹೆಚ್ಚಿನ ಅನುದಾನವನ್ನು ನೀಡಬೇಕು. ಜನರು ಕೆಲಸ ಅರಸಿ ಬೇರೆಕಡೆಗೆ ಗೂಳೆ ಹೋಗುವುದನ್ನು ತಪ್ಪಿಸಲು ರಸ್ತೆ ಕಾಮಗಾರಿ, ಬರಗಾಲ ಕಾಮಗಾರಿ ಕೈಗೊಳ್ಳಲು ಅದಕ್ಕಾಗಿ ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಆಶ್ರಯ ಯೋಜನೆ

ಆಶ್ರಯ ಯೋಜನೆಯಡಿ ಬಡವರಿಗೆ ಸೂರು ಕಲ್ಪಿಸಿ ಸಹಾಯ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ತ್ವರಿತವಾಗಿ ಅನುದಾನ ನೀಡಬೇಕು. ಪ್ರತಿ ವಿದ್ಯಾರ್ಥಿಗಳಿಗೂ ವಿದ್ಯಾನಿಧಿ ಯೋಜನೆಯ ಸೌಲಭ್ಯ ನೀಡಬೇಕು. ಯೋಜನೆಯನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು.

Share this article