ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾ ಬುಡಕಟ್ಟು ಜನರಿಗೆ ಸರ್ಕಾರ ನೀಡುತ್ತಿರುವ ಸವಲತ್ತುಗಳನ್ನು ಅನುಷ್ಠಾನಗೊಳಿಸದೇ ತಾರತಮ್ಯ ಹಾಗೂ ವಿಳಂಬ ಧೋರಣೆ ಮಾಡುತ್ತಿರುವ ಅಧಿಕಾರಿ ವರ್ಗದವರ ವಿರುದ್ಧ ಅನಿರ್ದಿಷ್ಟಾವಧಿಯ ಬೃಹತ್ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಬುಡಕಟ್ಟು ಜನರು ೧೪೮ ಕಾಲೋನಿಗಳಲ್ಲಿ ವಾಸವಾಗಿದ್ದು, ಸುಮಾರು ೪೭ ಸಾವಿರ ಜನಸಂಖ್ಯೆಯನ್ನು ಹೊಂದಿದ್ದು, ಸ್ವಾತಂತ್ರ್ಯ ಬಂದು ೭೬ ವರ್ಷಗಳು ಕಳೆದರೂ ಬುಡಕಟ್ಟು ಆದಿವಾಸಿಗಳು ವಾಸಿಸುವ ಹಾಡಿಗಳಲ್ಲಿ ಸರಿಯಾಗಿ ವಿದ್ಯುತ್ ಇಲ್ಲದೆ ಕಗ್ಗತ್ತಲಿನಲ್ಲಿ ಬದುಕನ್ನು ಸಾಗಿಸುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಹಾಡಿಗಳಿಂದ ಸೇರಿ ೨,೦೦೦ ಜನರಿಗೆ ರೇಷನ್ ಕಾರ್ಡ್ ದೊರೆಕಿಲ್ಲ. ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ, ೩೦೦೦ ಜನರಿಗೆ ಬರುತ್ತಿಲ್ಲ. ಹಕ್ಕುಪತ್ರ ನೀಡಿರುವ ಭೂಮಿಗಳಿಗೆ ಆರ್‌ಟಿಸಿ ಕೊಡದೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಗ್ರಾಪಂಯಿಂದ ನರೇಗಾ ಕೆಲಸಗಳನ್ನು ನೀಡದೆ ಜನರು ವಲಸೆ ಹಾಗೂ ಜೀತ ಪದ್ಧತಿಗೆ ಹೋಗುವುದು ಸರ್ವೆ ಸಾಮಾನ್ಯವಾಗಿದೆ. ಈ ಎಲ್ಲಾ ಸಮಸ್ಯೆಗಳಿಂದ ಬುಡಕಟ್ಟು ಜನರ ದಿನನಿತ್ಯದ ನರಕದ ಜೀವನವನ್ನು ನಡೆಸುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.ಸರ್ಕಾರವು ಬುಡಕಟ್ಟು ಜನಾಂಗದವರಿಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿದರೂ, ಸಂಬಂಧಪಟ್ಟ ಅಧಿಕಾರಿ ವರ್ಗದವರು ತಾರತಮ್ಯ ಮತ್ತು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.
ಬೆಳಕನ್ನೆ ನೋಡದ ೧೮ ಹಾಡಿಗಳಿಗೆ ಈ ಕೂಡಲೇ ವಿದ್ಯುತ್ ಸಂಪರ್ಕ ಅಳವಡಿಸಬೇಕು. ಗ್ರಾಪಂಯಿಂದ ಬುಡಕಟ್ಟು ಜನಾಂಗಕ್ಕೆ ಸಿಗಬೇಕಾದ ಸವಲತ್ತುಗಳನ್ನು ಕಡ್ಡಾಯವಾಗಿ ಕೊಡಿಸಬೇಕು. ಡೀಸಿ ಅಧ್ಯಕ್ಷತೆಯಲ್ಲಿ ಎರಡು ತಿಂಗಳಿಗೊಮ್ಮೆ ಆದಿವಾಸಿಗಳ ಮುಖಂಡರ ಸಭೆ ಕರೆಯಬೇಕು. ಈ ಸಭೆಗೆ ಎಲ್ಲಾ ಇಲಾಖೆ ಅಧಿಕಾರಿಗಳು ಹಾಜರಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಅಧ್ಯಕ್ಷ ನಾಗೇಂದ್ರ ಗಾಣಿಗ, ಕಾರ್ಯದರ್ಶಿ ಎಂ.ಗಿರಿ, ಪ್ರವೀಣ್, ಮಾದಮ್ಮ, ಮಾರ, ಪಾಂಡ್ಯ, ಚಿಕ್ಕದುಂಡಮ್ಮ, ಮಾದೇವಿ, ಕೆಂಪಮ್ಮ, ನೀಲಯ್ಯ, ಮಾಸ್ತಮ್ಮ, ಈರಣ್ಣ, ಪಳನಿಯಮ್ಮ ಇತರರು ಭಾಗವಹಿಸಿದ್ದರು.