ಹಾವೇರಿ: ಜಿಲ್ಲಾಡಳಿತದಿಂದ ಆ.೧೫ರಂದು ಆಯೋಜಿಸುವ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆಯಲ್ಲಿ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಕೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸ್ವಾತಂತ್ರ್ಯೋತ್ಸವದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಆಯೋಜನೆಯಲ್ಲಿ ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಈ ಕುರಿತಂತೆ ವಿವಿಧ ಇಲಾಖೆಗಳಿಗೆ ವಹಿಸಿರುವ ಕೆಲಸಗಳನ್ನು ಸಮನ್ವಯದಿಂದ ಹಾಗೂ ಅತ್ಯಂತ ಜವಾಬ್ದಾರಿಯಿಂದ ಮಾಡಬೇಕು ಎಂದು ನಿರ್ದೇಶನ ನೀಡಿದರು.ಸ್ವಾತಂತ್ರ್ಯೋತ್ಸವದ ಆಮಂತ್ರಣ ಪತ್ರಿಕೆ, ಎಸ್.ಎಸ್.ಎಲ್.ಸಿ., ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರದ ಸಾಧಕರ ಸನ್ಮಾನಕ್ಕೆ ಆಯ್ಕೆ, ಕ್ರೀಡಾಂಗಣದಲ್ಲಿ ವೇದಿಕೆ ನಿರ್ಮಾಣ, ಅಲಂಕಾರ, ರಾಷ್ಟ್ರಧ್ವಜಾರೋಹಣಕ್ಕೆ ಸಿದ್ಧತೆ, ಆಸನ ವ್ಯವಸ್ಥೆ, ಕವಾಯತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಿದ್ಧತೆ, ಲಘು ಉಪಹಾರ, ಶಿಷ್ಟಾಚಾರದಂತೆ ಆಸನ ವ್ಯವಸ್ಥೆ ಸೇರಿದಂತೆ ಎಲ್ಲ ಪೂರಕ ಸಿದ್ಧತೆಗಳನ್ನು ಮಾಡಲು ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಆ.೧೪ಮತ್ತು ೧೫ರಂದು ನಗರದ ವಿವಿಧ ವೃತ್ತಗಳು, ನಗರ ಸ್ವಚ್ಛತೆ, ವಿವಿಧ ವೃತ್ತಗಳಿಗೆ ದೀಪಾಲಂಕಾರ, ಕಚೇರಿಗಳಿಗೆ ದೀಪಾಲಂಕಾರ, ರಾಷ್ಟ್ರಗೀತೆ ಹಾಗೂ ನಾಡಗೀತೆ ತಂಡದ ಆಯ್ಕೆ, ಪೊಲೀಸ್ ಬ್ಯಾಂಡ್, ರಾಷ್ಟ್ರಧ್ವಜಾರೋಹಣಕ್ಕೆ ಹಾಗೂ ಪಥಸಂಚಲನಕ್ಕೆ ಸಿದ್ಧತೆ, ಸ್ವಾತಂತ್ರ್ಯ ಯೋಧರು, ಸನ್ಮಾನಿತರು, ಮಾಧ್ಯಮದವರು, ಗಣ್ಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ, ಕ್ರೀಡಾಂಗಣದಲ್ಲಿ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಸೂಕ್ತ ಪೊಲೀಸ್ ಬಂದೋಬಸ್ತ್, ಆಂಬ್ಯುಲೆನ್ಸ್ ಹಾಗೂ ಪ್ರಥಮ ಚಿಕಿತ್ಸೆ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಆ. ೧೫ರ ಬೆಳಗ್ಗೆ ಎಲ್ಲ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿ ೭-೪೫ಕ್ಕೆ ಮೈಲಾರ ಮಹದೇವಪ್ಪ ವೃತ್ತಕ್ಕೆ ಆಗಮಿಸಬೇಕು. ಬೆಳಿಗ್ಗೆ ೭-೩೦ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ, ೭-೪೫ಕ್ಕೆ ಹುತಾತ್ಮ ಮೈಲಾರ ಮಹದೇವ ವೀರಸೌಧಕ್ಕೆ ಗೌರವ ಮತ್ತು ಪುಷ್ಮಾರ್ಚನೆ ಮಾಡುವುದು, ಬೆಳಗ್ಗೆ ೮ ಗಂಟೆಗೆ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಬೆಳಗ್ಗೆ ೯ ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ, ೯-೧೫ಕ್ಕೆ ಪೊಲೀಸ್, ಗೃಹರಕ್ಷಕದಳ, ಎನ್.ಸಿ.ಸಿ., ಸ್ಕೌಟ್ಸ್ ಆಂಡ್ ಗೈಡ್ಸ್, ಅಬಕಾರಿ, ಅರಣ್ಯ ಇಲಾಖೆ, ಸೇವಾದಳ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಪಥಸಂಚಲನ, ಜಿಲ್ಲಾ ಉಸ್ತುವಾರಿ ಸಚಿವರಿಂದ ಸ್ವಾತಂತ್ರ್ಯೋತ್ಸವ ಸಂದೇಶ, ೯-೩೦ರಿಂದ ೧೦-೩೦ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಂಜೆ ಗುರುಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು.ಸಭೆಯಲ್ಲಿ ಉಪವಿಭಾಗಾಧಿಕಾರಿ ಚೆನ್ನಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ನಾಗರಾಜ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಅಬಕಾರಿ ಇಲಾಖೆ ಉಪ ಆಯುಕ್ತರಾದ ಶೈಲಜಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.