ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದಲಿತರ ಮೇಲೆ ದೌರ್ಜನ್ಯ ಹೆಚ್ಚಳ: ಅನ್ನದಾನಿ

KannadaprabhaNewsNetwork |  
Published : Aug 03, 2024, 12:43 AM IST
2ಕೆಎಂಎನ್ ಡಿ17 | Kannada Prabha

ಸಾರಾಂಶ

ದಲಿತರನ್ನು ಮತ ಬ್ಯಾಂಕ್ ಆಗಿ ಕಾಂಗ್ರೆಸ್ ಪರಿವರ್ತಿಸಿಕೊಂಡು ಆ ವರ್ಗವನ್ನೇ ಕಡೆಗಣಿಸಿದೆ. ದಲಿತರ ಮತ ಪಡೆದು ಅವರಿಗೆ ರಕ್ಷಣೆ ನೀಡದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದಾದರೂ ಏತಕ್ಕೆ ಎಂಬ ಪ್ರಶ್ನೆ ಮೂಡಿದೆ ಎಂದು ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಮಳವಳ್ಳಿ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ಪರಿಶಿಷ್ಟ ವರ್ಗಗಳ ಘಟಕದ ರಾಜ್ಯಾಧ್ಯಕ್ಷ ಕೆ.ಅನ್ನದಾನಿ ಆರೋಪಿಸಿದರು.

ತಾಲೂಕಿನ ಕೆಂಚನಹಳ್ಳಿಯಲ್ಲಿ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಸವರ್ಣಿಯರು ದಲಿತ ಸಮುದಾಯದವರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಕ್ಕೆ ಭೇಟಿ ನೀಡಿ ಹಲ್ಲೆಗೊಳಗಾದ ಕುಟುಂಬದವರಿಗೆ ಧೈರ್ಯ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೆಂಚನಹಳ್ಳಿಯಲ್ಲಿ ದಲಿತರ ಮೇಲೆ ಹಲ್ಲೆ ನಡೆದಿರುವ ಘಟನೆ ಖಂಡನೀಯ. ಈ ಕೂಡಲೇ ಹಲ್ಲೆಗೊಳಗಾದ ದಲಿತ ಕುಟುಂಬಕ್ಕೆ ರಕ್ಷಣೆ ನೀಡಿ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ದಲಿತರನ್ನು ಮತ ಬ್ಯಾಂಕ್ ಆಗಿ ಕಾಂಗ್ರೆಸ್ ಪರಿವರ್ತಿಸಿಕೊಂಡು ಆ ವರ್ಗವನ್ನೇ ಕಡೆಗಣಿಸಿದೆ. ದಲಿತರ ಮತ ಪಡೆದು ಅವರಿಗೆ ರಕ್ಷಣೆ ನೀಡದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದಾದರೂ ಏತಕ್ಕೆ ಎಂಬ ಪ್ರಶ್ನೆ ಮೂಡಿದೆ ಎಂದು ಕಿಡಿಕಾರಿದರು.

ಯಾವ ಪುರುಷಾರ್ಥಕ್ಕೆ ದಲಿತರು ಕಾಂಗ್ರೆಸ್ ಗೆ ಮತ ಹಾಕಿದರು ಎಂಬಂತಾಗಿದೆ. ಈ ಸಮಾಜ ರಕ್ಷಣೆ ಮಾಡದೆ ಕೇವಲ ಓಟಿಗಾಗಿ ಬಳಕೆ ಮಾಡಿಕೊಳ್ಳುವುದು ಇನ್ನೆಷ್ಟು ದಿನ ಎಂದು ಪ್ರಶ್ನಿಸಿದರು. ಸಿಎಂ ಹಾಗೂ ಡಿಸಿಎಂ ದಲಿತರಿಗೆ ಆಗಿರುವ ಅನ್ಯಾಯ, ತೊಂದರೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಕೆಂಚನಹಳ್ಳಿಯಲ್ಲಿ ಜಮೀನಿನ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಯಾವುದೋ ಸಮಸ್ಯೆ ಬಂದಾಗ ಕಾನೂನಾತ್ಮಕವಾಗಿ ಬಗೆಹರಿಸಬೇಕು. ಬಲವಂತವಾಗಿ ಹಲ್ಲೆ ನಡೆಸುವುದು, ದೌರ್ಜನ್ಯವೆಸಗುವುದು ತಪ್ಪು. ಶಂಕರ್ ಅವರ ತಾತನವರ ಹೆಸರಿನಲ್ಲಿ 1933ರಿಂದಲೂ ಕೆಂಚನಹಳ್ಳಿಯಲ್ಲಿ 12 ಎಕರೆ ಜಮೀನಿದೆ. ಇದೀಗ ಉಳುಮೆ ಮಾಡಲೆಂದಾಗ ಈ ಘಟನೆ ನಡೆದಿರುವುದು ಖೇದಕರ ಎಂದರು.

ಗ್ರಾಮದಲ್ಲಿ ದಲಿತರು ಹಾಗೂ ಸವರ್ಣಿಯರು ಸಹೋದರರಂತೆ ಸಾಮರಸ್ಯದಿಂದ ಬಾಳ್ವೆ ನಡೆಸುತ್ತಿದ್ದಾರೆ. ಆದರೆ ಚಲುವೇಗೌಡ ಹಾಗೂ ಶಂಕರ್ ಅವರ ಕುಟುಂಬಗಳ ನಡುವೆ ಜಮೀನಿನ ಸಂಬಂಧ ಘರ್ಷಣೆಯಾಗಿದೆ. ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ ಸಮಸ್ಯೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ದಲಿತರು ಯಾವುದೇ ಆಸೆ, ಆಮೀಷಗಳಿಗೆ ಒಳಗಾಗದೆ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ನೀಡಿದ್ದಾರೆ. ಆದರೆ, ಈ ಸಮಾಜದ ರಕ್ಷಣೆ ಮಾಡಲು ಸಾಧ್ಯವಾಗದ ಕಾಂಗ್ರೆಸ್ಸಿಗರು ಅಧಿಕಾರದಲ್ಲಿರಲು ಯೋಗ್ಯರೇ ಎಂದು ಪ್ರಶ್ನಿಸಿದರು.

ಕೆಂಚನಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡೀಸಿ, ಎಸ್ಪಿ ದಲಿತರಿಗೆ ರಕ್ಷಣೆ ನೀಡಿ ಸೂಕ್ತ ನ್ಯಾಯ ಒದಗಿಸಬೇಕು. ಗಾಯಾಳುಗಳಿಗೆ ಸರ್ಕಾರ ಚಿಕಿತ್ಸೆ ಕೊಡಿಸಬೇಕು ಎಂದು ಆಗ್ರಹಿಸಿದರು.

ಎಸ್ಸಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್, ಜಿಲ್ಲಾಧ್ಯಕ್ಷ ಜಯರಾಂ, ಮುಖಂಡರಾದ ಭದ್ರಚಲಮೂರ್ತಿ, ಮುನಿರಾಜು, ಅಲ್ಪಹಳ್ಳಿ ಗೋವಿಂದಯ್ಯ, ಬೊಮ್ಮರಾಜು, ಚಲುವ, ಪ್ರಶಾಂತ್, ಕೆಂಚನಹಳ್ಳಿ ಕೃಷ್ಣಮೂರ್ತಿ, ಸೆಣಬ ಜಯಲಕ್ಷ್ಮೀ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇನ್ಫೋಸಿಸ್ ಮಾರಿದ್ದ ಜಮೀನು ನೋಂದಣಿ ಮಾಡಿಕೊಟ್ಟ ಸಬ್ ರಿಜಿಸ್ಟ್ರಾರ್ ಅಮಾನತು
ಬಳ್ಳಾರಿ ಗನ್‌ಮ್ಯಾನ್‌ ಸೇರಿ ಕೈ, ಬಿಜೆಪಿಯ 26 ಜನ ಸೆರೆ