ಬಾಗಿನ ಅರ್ಪಣೆ ನಮ್ಮ ಸಂಸ್ಕೃತಿ-ಶಾಸಕ ಯು.ಬಿ. ಬಣಕಾರ

KannadaprabhaNewsNetwork | Published : Aug 3, 2024 12:43 AM

ಸಾರಾಂಶ

ನಮ್ಮ ಸನಾತನ ಸಂಸ್ಕೃತಿಯಲ್ಲಿ ಪ್ರಕೃತಿಯನ್ನು ಮಾತೃ ಸ್ವರೂಪದಲ್ಲಿ ಕಾಣುತ್ತೇವೆ ಕಾರಣ ಗಂಗೆ ತುಂಬಿ ಹರಿಯುವ ಸಂದರ್ಭದಲ್ಲಿ ಬಾಗಿನ ಅರ್ಪಣೆ ಮಾಡುವುದು ನಮ್ಮ ಸಂಸ್ಕೃತಿ ಎಂದು ಶಾಸಕ ಯು.ಬಿ. ಬಣಕಾರ ಅಭಿಪ್ರಾಯ ವ್ಯಕ್ತಪಡಿಸಿದರು.

ರಟ್ಟೀಹಳ್ಳಿ: ನಮ್ಮ ಸನಾತನ ಸಂಸ್ಕೃತಿಯಲ್ಲಿ ಪ್ರಕೃತಿಯನ್ನು ಮಾತೃ ಸ್ವರೂಪದಲ್ಲಿ ಕಾಣುತ್ತೇವೆ ಕಾರಣ ಗಂಗೆ ತುಂಬಿ ಹರಿಯುವ ಸಂದರ್ಭದಲ್ಲಿ ಬಾಗಿನ ಅರ್ಪಣೆ ಮಾಡುವುದು ನಮ್ಮ ಸಂಸ್ಕೃತಿ ಎಂದು ಶಾಸಕ ಯು.ಬಿ. ಬಣಕಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಮಹಾಲಕ್ಷ್ಮೀ ದೇವಿಗೆ ಪೂಜೆ ಸಲ್ಲಿಸಿ ನಂತರ ತುಂಗಾ ಮೇಲ್ದಂಡೆ ಕಾಲುವೆಗೆ ಬಾಗಿನ ಅರ್ಪಣೆ ಮಾಡಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತ ಸಮುದಾಯ ಸಮೃದ್ಧಿ ಜೀವನ ನಡೆಸಿ ರಾಜ್ಯ ಸುಭಿಕ್ಷವಾಗಿರಲಿ ಎಂದು ಗಂಗಾ ಮಾತೆಗೆ ಬಾಗಿನ ಅರ್ಪಣೆ ಮಾಡುವ ಮೂಲಕ ಭಕ್ತಿ ಸಮರ್ಪಣೆ ಮಾಡಿಲಾಯಿತು. ಮುಂಬರುವ ದಿನಗಳಲ್ಲಿ ತುಂಗಾ ಮೇಲ್ದಂಡೆ ಕಾಲುವೆಗೆ ಆಧುನಿಕರಣಗೊಳಿಸಲಾಗುವುದು ಎಂದರು.

ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಇನ್ನೆರಡು ತಿಂಗಳಲ್ಲಿ ಗೃಹ ಮಂತ್ರಿ ಡಾ. ಜಿ ಪರಮೇಶ್ವರ ಅವರಿಂದ ನೂತನ ಫೈರ್‌ ಎಂಜಿನ್ ಆಫೀಸ್ ಉದ್ಘಾಟಿಸಲಾಗುವುದು ಎಂದರು. ತುಂಗಾ ಮೇಲ್ದಂಡೆ ಕಾಲುವೆಯ ಎರಡನೇ ಹಂತದ ಕಾಮಗಾರಿ ಕೈಗೊಳ್ಳಲು ಮುಖ್ಯಮಂತ್ರಿಯಾದಿಯಾಗಿ ಸಂಬಂಧ ಪಟ್ಟ ಸಚಿವರಿಗೆ ಮನವಿ ಮಾಡಲಾಗುವುದು ಎಂದರು.

ತುಂಗಾ ಮೇಲ್ದಂಡೆ ಕಾಲುವೆ ನಿರ್ಮಾಣದ ಹರಿಕಾರ ಹಾಗೂ ಮಾಜಿ ಶಾಸಕ ಬಿ.ಹೆಚ್. ಬನ್ನಿಕೋಡ ಮಾತನಾಡಿ 1984ರಲ್ಲಿ ತುಂಗಾ ಮೇಲ್ದಂಡೆ ಯೋಜನೆ ಕೈಗೊಳ್ಳುವ ತಾಲೂಕಿನ ಅನೇಕ ಪ್ರಮುಖರ ಹೋರಾಟದ ಫಲವಾಗಿ ತಾಲೂಕಿನ 27 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವಂತಾಗಿದೆ. ತಾಲೂಕಿನಾದ್ಯಂತ ಕಾಲುವೆಗಳಿಗೆ 33 ಟಿಎಂಸಿ ನೀರು ಪಡೆಯುವ ಯೋಜನೆಯಾಗಿದ್ದು ಆದರೆ ನಮಗೆ ಕೇವಲ 12.5 ಟಿಎಂಸಿ ನೀರು ಬಿಡಲಾಗುತ್ತಿದೆ. ಉಳಿದ 19.5 ಟಿಎಂಸಿ ನೀರಿಗಾಗಿ ಹೋರಾಟ ಕೈಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಶಿವಮೊಗ್ಗ ಜಿಲ್ಲೆ ಮಂಡಗದ್ದೆಯಲ್ಲಿ ಎರಡನೇ ಹಂತದ ತುಂಗಾ ಮೇಲ್ದಂಡೆ ಯೋಜನೆ ಹೋರಾಟಕ್ಕೆ ಪಕ್ಷಾತೀತವಾಗಿ ರಾಜಕೀಯ ಮುಖಂಡರು, ಸ್ವಾಮೀಜಿಗಳು, ಸಾರ್ವಜನಿಕರು ಹೋರಾಟಕ್ಕೆ ಸಜ್ಜಾಗಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ತುಂಗಾ ಮೇಲ್ದಂಡೆ ಯೋಜನೆಯ ಹರಿಕಾರ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಅವರನ್ನು ಸನ್ಮಾನಿಸಲಾಯಿತು.

ಕಬ್ಬಿಣ ಕಂತಿ ಮಠದ ಪೀಠಾಧಿಪತಿ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ, ರಮೇಶ ಮಡಿವಾಳರ, ರವಿ ಮುದಿಯಪ್ಪನವರ, ಮಹೇಶ ಗುಬ್ಬಿ, ಹನಮಂತಗೌಡ ಭರಮಣ್ಣನವರ, ಅನ್ನಪೂರ್ಣ ಬಣಕಾರ, ನಿಂಗಪ್ಪ ಚಳಗೇರಿ, ಮಂಜುನಾಥ ತಂಬಾಕದ, ನಾಗನಗೌಡ ಕೋಣ್ತಿ, ಮಂಜು ಮಾಸೂರ, ಸುಜಾತ ಬಳೂಲ, ಸುಷ್ಮಾ ಪಾಟೀಲ ಮುಂತಾದವರು ಇದ್ದರು.

Share this article