ಕನ್ನಡಪ್ರಭ ವಾರ್ತೆ ಬೇಲೂರು
ಇತಿಹಾಸ ಪ್ರಸಿದ್ಧ ವಿಷ್ಣುಸಮುದ್ರ ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಶಾಸಕ ಎಚ್.ಕೆ. ಸುರೇಶ್ ಶುಕ್ರವಾರ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಚ್ ಕೆ ಸುರೇಶ್, ಇತಿಹಾಸ ಪ್ರಸಿದ್ಧ ವಿಷ್ಣುಸಮುದ್ರ ಕೆರೆ ಸಂಪೂರ್ಣ ಭರ್ತಿಯಾಗಿದ್ದು ಸಂತೋಷ ತಂದಿದೆ. ಕೆರೆಯ ಸುತ್ತಮುತ್ತಲ ಪರಿಸರವನ್ನು ಸ್ವಚ್ಛಗೊಳಿಸಿ ಪ್ರವಾಸಿಗರು ಕೆರೆ ವೀಕ್ಷಣೆಗೆ ಬರುತ್ತಿದ್ದು ಇದನ್ನು ಅಭಿವೃದ್ಧಿಗೊಳಿಸಲು ವಿಷ್ಣುಸಮುದ್ರ ಮತ್ತು ನಗರದಲ್ಲಿರುವ ಕಳಸಿನಕೆರೆ ಹಳೇಬೀಡಿನ ದ್ವಾರಸಮುದ್ರ ಕೆರೆಯನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿ ಹಂತ ಹಂತವಾಗಿ ಕೆರೆಯನ್ನು ಅಭಿವೃದ್ಧಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಸದ್ಯದಲ್ಲಿಯೇ ಕೆರೆಯ ಅಭಿವೃದ್ಧಿ ಪಡಿಸಲಾಗುತ್ತದೆ. ಕಳೆದ ಬಾರಿ ಸಾಮಾನ್ಯ ಕಾರ್ಯಕರ್ತನಾಗಿ ಬಾಗಿನ ಅರ್ಪಿಸಿದ್ದೆ. ಈ ಬಾರಿ ಕ್ಷೇತ್ರದ ಜನರ ಆಶೀರ್ವಾದದಿಂದ ಕ್ಷೇತ್ರದ ಸೇವಕನಾಗಿ ಶಾಸಕರಾಗಿ ಕೆರೆಗೆ ಬಾಗಿನ ಅರ್ಪಿಸುವ ಸೌಭಾಗ್ಯ ತಮಗೆ ದೊರಕಿದೆ ಎಂದರು.
ತಾಲೂಕಿನಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿ ಕ್ಷೇತ್ರದ ಜನರ ಸೇವೆಗೆ ನಿರತನಾಗಿದ್ದು ಗ್ರಾಮಗಳಿಗೆ ಭೇಟಿ ನೀಡಿ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ ಸೇವೆ ಸಲ್ಲಿಸುತ್ತಿದ್ದೇನೆ. ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಬಸ್ ನಿಲ್ದಾಣ ಸ್ಥಳಾಂತರಿಸಲು ಮುಂದಾಗಿಲ್ಲ. ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಈಗಿರುವ ಬಸ್ ನಿಲ್ದಾಣ ಸ್ಥಳ ಚಿಕ್ಕದಾಗಿದ್ದು ಪ್ರತಿನಿತ್ಯ 800ಕ್ಕೂ ಹೆಚ್ಚು ಬಸ್ಸುಗಳು ನಿಲ್ದಾನಕ್ಕೆ ಬರುತ್ತಿದ್ದು ಈ ಸ್ಥಳದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ಸ್ಥಳದ ಕೊರತೆ ಇದೆ. ಹಾಗಾಗಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜನಸಾಮಾನ್ಯರಿಗೆ ವಿದ್ಯಾರ್ಥಿಗಳಿಗೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ನೂತನ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ಮುಂದಾಗಿದ್ದೆವೇ ಹೊರತು ಇದರಲ್ಲಿ ಯಾವುದೇ ಕುತಂತ್ರ ಮನೋಭಾವ ಇಲ್ಲ ಎಂದು ಸ್ಪಷ್ಟಪಡಿಸಿದರು.ಹೃದಯ ಭಾಗದಲ್ಲಿರುವ ಹಳೆಯ ಬಸ್ ನಿಲ್ದಾಣ ವಿಸ್ತೀರ್ಣದ ಕುರಿತು ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗವನ್ನು ಹಸ್ತಾಂತರಿಸಬೇಕೆಂದು 2006ರಿಂದ ಮನವಿ ಸಲ್ಲಿಸುತ್ತಿದ್ದು ಯಾವ ಕಾರಣಕ್ಕೆ ಹಿನ್ನಡೆಯಾಗಿದೆ ಎಂದು ಹಳೆಯ ಕಡತಗಳನ್ನು ಪರಿಶೀಲಿಸಿ ನಿಲ್ದಾಣದ ಪಕ್ಕದಲ್ಲಿರುವ ಲೋಕೋಪಯೋಗಿ ಸ್ಥಳವನ್ನು ಬಸ್ ನಿಲ್ದಾಣಕ್ಕೆ ನೀಡಿದರೆ ನೂತನ ಬಸ್ ನಿಲ್ದಾಣ ನಿರ್ಮಿಸಲು ಅನುಕೂಲವಾಗುತ್ತದೆ ಎಂದು ಲೋಕೋಪಯೋಗಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಕಡತಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಲೋಕೋಪಯೋಗಿ ಸಚಿವರು ಭರವಸೆ ನೀಡಿದ್ದಾರೆ. ಆದರೆ ಕೆಲವರಿಗೆ ಮಾಹಿತಿಯ ಕೊರತೆಯಿಂದ ಇಲ್ಲಸಲ್ಲದ ಟೀಕೆ ಟಿಪ್ಪಣಿ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ತಾವು ಹೆಚ್ಚು ಮಾತನಾಡುವುದಿಲ್ಲ, ಟೀಕೆ ಮಾಡುವವರಿಗೆ ಕೆಲಸದ ಮೂಲಕ ಉತ್ತರ ಕೊಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸನ್ಯಾಸಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್, ಪಿಡಿಒ ಸರಸ್ವತಿ, ಪುರಸಭಾ ಮುಖ್ಯ ಅಧಿಕಾರಿ ಸುಜಯ್, ಆರೋಗ್ಯಾಧಿಕಾರಿ ಲೋಹಿತ್, ಮುಖಂಡರಾದ ಎಚ್.ಎಂ ದಯಾನಂದ್, ನೆಹರು ನಗರ ಮಂಜುನಾಥ್, ಬಿಜೆಪಿ ನಗರ ಅಧ್ಯಕ್ಷ ವಿನಯ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.