-ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ -ರಾಜ್ಯಾದ್ಯಂತ ಸೋಮವಾರ ಏಕಕಾಲದಲ್ಲಿ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಮುಷ್ಕರ ಆರಂಭಕನ್ನಡಪ್ರಭ ವಾರ್ತೆ ರಾಮನಗರ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ವೃಂದ ಸಂಘಗಳು ಹಾಗೂ ಗ್ರಾಪಂ ಸದಸ್ಯರ ಒಕ್ಕೂಟದ ಪದಾಧಿಕಾರಿಗಳು ಸೋಮವಾರದಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಒಗಳು, ದ್ವಿತೀಯ ದರ್ಜೆ ಸಹಾಯಕರು, ಡೇಟಾ ಎಂಟ್ರಿ ಅಪರೇಟರ್ಸ್ ಗಳು , ಕರವಸೂಲಿಗಾರರು, ನೀರುಘಂಟಿಗಳು, ಸ್ವಚ್ಛತಗಾರರು ತಮ್ಮ ಕೆಲಸ ಕಾರ್ಯ ಸ್ಥಗಿತಗೊಳಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತಿದ್ದು, ಗ್ರಾಮ ಪಂಚಾಯಿತಿ ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ನೌಕರರ ವಿವಿಧ ಬೇಡಿಕೆಗಳನ್ನು ಶೀಘ್ರದಲ್ಲಿಯೇ ಈಡೇರಿಸಬೇಕು ಎಂದು ಎಚ್ಚರಿಸಿದರು.
ಕಳೆದ ಮೂರು ದಿನಗಳ ಹಿಂದೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಬೇಡಿಕೆ ಈಡೇರಿಸುವ ಸಂಬಂಧ ಇಲಾಖೆ ಹಾಗೂ ಸರ್ಕಾರದಿಂದ ಸೂಕ್ತ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯಾದ್ಯಂತ ಏಕಕಾಲದಲ್ಲಿ ಆಯಾ ಜಿಲ್ಲೆಯ ಜಿಪಂ ಆವರಣದಲ್ಲಿ ಸಂಘಟನೆ ವತಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಲಾಗಿದೆ.ಪಿಡಿಒಗಳ ಬೇಡಿಕೆ:
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತೀಕರಿಸಬೇಕು. ಜೇಷ್ಠತಾ ಪಟ್ಟಿಯ್ನು ಕೂಡಲೇ ಅಂತಿಮಗೊಳಿಸಿ ಬಡ್ತಿ ನೀಡಲು ಕ್ರಮಕೈಗೊಳ್ಳಬೇಕು. ಕುಂದುಕೊರತೆ ಪ್ರಾಧಿಕಾರವನ್ನು ಪೊಲೀಸ್ ಇಲಾಖೆಯ ಮಾದರಿಯಲ್ಲಿ ಸದೃಢಗೊಳಿಸಬೇಕು. ಮತ್ತು ತಜ್ಞರ ಸಮಿತಿ ನೇಮಿಸಬೇಕು. ಜತೆಗೆ ಏಕ ರೂಪದಲ್ಲಿ ಆಡಿಟ್ ಪದ್ಧತಿಯಲ್ಲಿ ಜಾರಿಗೊಳಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇತರೆ ಇಲಾಖೆಯಲ್ಲಿರುವ ಸಮಾನಾಂತರ ಹುದ್ದೆಗಳಿಗೆ ನಿಯೋಜನೆ ಮೇಲೆ ಹೋಗಲು ಒಟ್ಟು ಮಂಜೂರಾದ ಹುದ್ದೆಗಳಲ್ಲಿ 25ರಷ್ಟು ಹುದ್ದೆಗಳಿಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.ಪಂಚಾಯಿತಿ ಇತರೆ ನೌಕರರ ಬೇಡಿಕೆಗಳು:
ಕರವಸೂಲಿಗಾರು, ಕ್ಲರ್ಕ್ ಡಾಟಾ ಎಂಟ್ರಿ ಅಪರೇಟರ್, ನೀರಗಂಟಿ, ಜವಾನರು, ಸ್ವಚ್ಛತಾಗಾರರ ವೃಂದಕ್ಕೆ ಗ್ರಾಮ ಪಂಚಾಯಿತಿ ನೌಕರುಗಳಿಗೆ ಕಾಮರ್ಿಕ ಇಲಾಖೆ ವೇತನವನ್ನು ಹೊರತು ಪಡಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ವೇತನ ನಿಗದಿಪಡಿಸಿ ನೌಕರರ ಖಾತೆಗಳಿಗೆ ಜಮಾ ಮಾಡಬೇಕು. ಇಎಸ್ಐ ಮತ್ತು ಪಿಎಫ್ ಜಾರಿ ಮಾಡಬೇಕು. ಆರೋಗ್ಯ ವಿಮೆ 50ಸಾವಿರ ಬದಲಿಗೆ 5 ಲಕ್ಷ ಆರೋಗ್ಯ ವಿಮೆಯನ್ನು ಜಾರಿ ಮಾಡಬೇಕು.ಗ್ರಾಮ ಪಂಚಾಯಿತಿ ಪಂಚ ನೌಕರುಗಳಿಗೆ ನಿವೃತ್ತ ಉಪಧನವನ್ನು 60 ತಿಂಗಳ ವೇತನದ ಮೊತ್ತವನ್ನು ಉಪಧವನ್ನು ನೀಡಬೇಕು. ಕ್ಲರ್ಕ್ , ಡಿಇಒ ಬಿಲ್ ಕಲೆಕ್ಟರ್ ಗಳು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇವುಗಳನ್ನು ನಿವಾರಣೆ ಮಾಡಬೇಕು ಎಂದು ಪ್ರತಿಭಟನಾ ನಿತರರು ಆಗ್ರಹಿಸಿದರು.
ಗ್ರೇಡ್-1 ಕಾರ್ಯದರ್ಶಿಗಳ ಬೇಡಿಕೆ :ವೃಂದದ ಜೇಷ್ಠತಾ ಪಟ್ಟಿಯನ್ನು ತುರ್ತಾಗಿ ಪ್ರಕಟಣೆ ಮಾಡಿ ಪಿಡಿಒ ವೃಂದಕ್ಕೆ ಮುಂಬಡ್ತಿ ನೀಡಬೇಕು. 7 ವರ್ಷದಿಂದ ಒಂದೇ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರನ್ನು ಜಿಲ್ಲೆಯ ಬೇರೆ ತಾಲೂಕಿಗೆ ವರ್ಗಾಯಿಸುವ ಅಧಿಸೂಚನೆಯನ್ನ ಹಿಂಪಡೆಯಬೇಕು.
ಗ್ರೇಡ್-2 ಕಾರ್ಯದರ್ಶಿಗಳ ಬೇಡಿಕೆ:ಗ್ರೇಡ್-2 ಹುದ್ದೆಯಿಂದ ಗ್ರೇಡ್-1 ಕಾರ್ಯದರ್ಶಿಗಳ ಹುದ್ದೆಗೆ ಕಳೆದ ಹಲವು ವರ್ಷಗಳಿಂದ ಮುಂಬಡ್ತಿ ಇಲ್ಲ. ಜತೆಗೆ, ನೇರ ನೇಮಕಾತಿ ಕೋಟಾದಡಿಯಲ್ಲಿ ಒಂದು ಬಾರಿ ಏಕ ಕಾಲಕಾಲದಲ್ಲಿ ಬಡ್ತಿ ನೀಡಬೇಕು. ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯನ್ನು ಕೈಬಿಟ್ಟು ಜಿಲ್ಲಾ ಮಟ್ಟ ಜೇಷ್ಠತಾ ಪಟ್ಟಿಂನ್ನು ಮಾಡಬೇಕು. ಗ್ರೇಡ್-1 ಕಾರ್ಯದರ್ಶಿಗೆ ಹುದ್ದೆಎ ಬಡ್ತಿ ಶೇ.33ರಷ್ಟಿದ್ದು ಅದನ್ನು ಶೇ.80ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ದ್ವಿತೀಯ ದರ್ಜೆ ಸಹಾಯಕರ ಬೇಡಿಕೆಗಳು:ಗ್ರೇಡ್-2 ಗ್ರಾಪಂಗಳಿಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆ ಸೃಜಿಸಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಗ್ರೇಡ್ -1 ಗ್ರಾಪಂಗಳಿಗೆ ಪ್ರಥಮ ದರ್ಜೆ ಲೆಕ್ಕ ಸಹಾಯಕ ಹುದ್ದೆಯನ್ನು ಸೃಷ್ಟಿಸಿ ಮುಂಬಡ್ತಿ ನೀಡಬೇಕು. ಕಳೆದ 10 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಒಂದೇ ಬಾರಿಗೆ ಶೇ.100ರಷ್ಟು ಬಡ್ತಿ ನೀಡಿ ಗ್ರೇಡ್- ಕಾರ್ಯದರ್ಶಿ ಹುದ್ದೆಗೆ ಪರಿಗಣಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬೆಟ್ಟಸ್ವಾಮಿಗೌಡ, ರಾಜು, ಹನುಮಂತರಾಜು, ಕೆ.ಸಿ.ರಘು, ಮಹೇಶ್ ,ನರಸಿಂಹಮೂರ್ತಿ, ಪುರುಷೋತ್ತಮ್, ನಾಗರಾಜು, ಪ್ರದೀಪ್ , ಶೋಭಾ, ಭಾಗ್ಯಲಕ್ಷ್ಮಮ್ಮ, ರಾಜೇಗೌಡ, ಲೋಕೇಶ್ , ಸವಿತಾ, ಜಯಶಂಕರ್ , ಸುರೇಶ್ , ರಾಜೇಶ್ , ಕೃಷ್ಣಮೂರ್ತಿ, ಜಯಲಿಂಗು, ಖಮ್ರುದ್ದೀನ್ ಪಾಷ, ಪ್ರಸಾದ್ , ದೇವರಾಜು, ರೇಣುಕಪ್ಪ, ವೈರಮುಡಿ ಮತ್ತಿತರರು ಭಾಗವಹಿಸಿದ್ದರು.