ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರಕ್ಕಾಗಿ ಅನಿರ್ದಿಷ್ಟಾವಧಿ ಧರಣಿ

KannadaprabhaNewsNetwork |  
Published : Jul 24, 2026, 01:15 AM IST
ಮೃತರ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿದ ಹೋರಾಟಗಾರರು. | Kannada Prabha

ಸಾರಾಂಶ

ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ₹೨ ಲಕ್ಷ ಹಾಗೂ ಚಿಕಿತ್ಸೆ ಮತ್ತು ಸೂಕ್ತ ಪರಿಹಾರದ ಘೋಷಣೆಯನ್ನು ಆಡಳಿತ ನೀಡಿತ್ತು. ಆದರೆ ಘಟನೆ ನಡೆದು ೬ ತಿಂಗಳು ಗತಿಸಿದ್ದರೂ ಕುಟುಂಬಗಳು ಪರಿಹಾರಕ್ಕಾಗಿ ಕಚೇರಿಗಳನ್ನು ಅಲೆಯುವ ದುಸ್ಥಿತಿ ಬಂದಿದೆ.

ಗಜೇಂದ್ರಗಡ: ಕೂಲಿ ಕೆಲಸಕ್ಕೆ ತೆರಳಿದ್ದ ಮೂವರು ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟು ೬ ತಿಂಗಳು ಗತಿಸಿದರೂ ಮುಖ್ಯಮಂತ್ರಿ ಪರಿಹಾರ ನಿಧಿ ನೀಡಿಲ್ಲ ಎಂದು ಆರೋಪಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಬಳಿ ಮೃತ ಸಂತ್ರಸ್ತ ಕುಟುಂಬಸ್ಥರು, ಕರ್ನಾಟಕ ಪ್ರಾಂತ ರೈತ ಸಂಘಟನೆ ನೇತೃತ್ವದಲ್ಲಿ ಗುರುವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಂಡರು.

6 ತಿಂಗಳ ಹಿಂದೆ ರೋಣ ಸಮೀಪದ ಜಿಗಳೂರು ಗ್ರಾಮದ ಬಳಿ ಕಡಲೆ ಫಸಲು ಕೀಳಲು ತೆರಳಿದ್ದ ಪಟ್ಟಣದ ಶಿವಾಜಿಪೇಟೆಯ ೨೦ ಕೂಲಿ ಕಾರ್ಮಿಕರ ವಾಹನ ಅಪಘಾತಕ್ಕೀಡಾಗಿ ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಹಲವು ಕೂಲಿ ಕಾರ್ಮಿಕರು ಗಾಯಗೊಂಡಿದ್ದರು. ಹೀಗಾಗಿ ಮೃತರ ಹಾಗೂ ಗಾಯಾಳುಗಳ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹಿಸಲಾಗಿತ್ತು.

ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ₹೨ ಲಕ್ಷ ಹಾಗೂ ಚಿಕಿತ್ಸೆ ಮತ್ತು ಸೂಕ್ತ ಪರಿಹಾರದ ಘೋಷಣೆಯನ್ನು ಆಡಳಿತ ನೀಡಿತ್ತು. ಆದರೆ ಘಟನೆ ನಡೆದು ೬ ತಿಂಗಳು ಗತಿಸಿದ್ದರೂ ಕುಟುಂಬಗಳು ಪರಿಹಾರಕ್ಕಾಗಿ ಕಚೇರಿಗಳನ್ನು ಅಲೆಯುವ ದುಸ್ಥಿತಿ ಬಂದಿದೆ. ೪ ದಿನದಲ್ಲಿ ಪರಿಹಾರ ಕೊಡಿಸುತ್ತೇವೆ ಎಂದು ಭರವಸೆ ನೀಡಿದ ತಾಲೂಕಾಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಮೃತ ಕೂಲಿ ಕಾರ್ಮಿಕರ ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದರು.

ಮುಖಂಡ ಎಂ.ಎಸ್. ಹಡಪದ, ದಾವಲ ತಾಳಿಕೋಟಿ ಹಾಗೂ ಪೀರು ರಾಠೋಡ ಮಾತನಾಡಿ, ಪಟ್ಟಣದ ಶಿವಾಜಿಪೇಟೆಯ ಅನ್ನಪೂರ್ಣಾ ಚಂಗಳಿ, ಮರಿಯುಂಬಿ ಹುನಗುಂದ ಹಾಗೂ ಸುಜಾತಾ ಹೊಸಮನಿ ಅಪಘಾತದಲ್ಲಿ ಅಸುನಿಗಿದ್ದರು. ಸ್ಥಳದಲ್ಲೇ ಪರಿಹಾರಕ್ಕೆ ಆಗ್ರಹಿಸಿದ್ದ ಆಡಳಿತದ ಪಕ್ಷದ ಮುಖಂಡರು ವಾರದೊಳಗೆ ಸಿಎಂ ಪರಿಹಾರ ನಿಧಿ ಕೊಡಿಸುವ ಭರವಸೆ ನೀಡಿದ್ದರು. ಬಳಿಕ ಶಾಸಕ ಜಿ.ಎಸ್. ಪಾಟೀಲ ಅವರು ಮೃತರ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವುದರ ಜತೆಗೆ ₹೨ ಲಕ್ಷದ ಪರಿಹಾರ ನೀಡಲಾಗುವುದು ಎಂದಿದ್ದರು.

ಆದರೆ ತಹಸೀಲ್ದಾರ್ ಕಚೇರಿಗೆ ಮೃತರ ಎಲ್ಲ ದಾಖಲೆಗಳನ್ನು ೩- ೪ ಬಾರಿ ನೀಡಿ ತಿಂಗಳುಗಳು ಉರುಳಿದವು. ಆದರೆ ಪರಿಹಾರ ಮಾತ್ರ ಮೃತರ ಕುಟುಂಬಗಳಿಗೆ ತಲುಪಿಲ್ಲ. ಪರಿಹಾರ ಕಲ್ಪಿಸಲು ಆಡಳಿತ ಮುಂದಾಗದಿದ್ದರೆ ಪಾದಯಾತ್ರೆಯ ಮೂಲಕ ಶಾಸಕರ ಮನೆಗೆ ಮುತ್ತಿಗೆ ಹಾಕುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಈ ವೇಳೆ ಮೈಬೂ ಹವಾಲ್ದಾರ, ಚಂದ್ರು ರಾಠೋಡ, ಚನ್ನಪ್ಪ ಗುಗಲೋತ್ತರ, ರೂಪೇಶ ಮಾಳೋತ್ತರ, ಗಣೇಶ ರಾಠೋಡ, ಮೈಬು ಹುನಗುಂದ, ರಾಜಪ್ಪ ಹೊಸಮನಿ, ಚಂದ್ರು ಚಂಗಳಿ, ರಾಜು ಕೇಶಣ್ಣವರ, ಶಶಿ ಕೇಶಣ್ಣವರ, ಬಸವರಾಜ ಹೊಸಮನಿ, ಮಾರುತಿ ರಾಮಜಿ, ಚಂದ್ರು ಜಾನಾಯಿ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ, ಹೊಸಪೇಟೆಯಲ್ಲಿ ತಮಟೆ ಚಳವಳಿ
ಬರ ನಿರ್ವಹಣೆ ಸಮರ್ಪಕವಾಗಿ ಮಾಡಿ: ಕೆ. ನೇಮರಾಜನಾಯ್ಕ