ಹುಬ್ಬಳ್ಳಿ:
ಟ್ರಸ್ಟ್ ಅಧ್ಯಕ್ಷ ಶಾಂತರಾಜ ಪೋಳ ಮಾತನಾಡಿ, ರಾಜ್ಯ ಸರ್ಕಾರವು ಡಿಜಟಲೀಕರಣದ ಹೆಸರಿನಲ್ಲಿ ಕಾವೇರಿ 0.1, ಕಾವೇರಿ 0.2 ತಂತ್ರಾಂಶಗಳನ್ನು ಜಾರಿಗೆ ತಂದು, ಈಗ ಕಾವೇರಿ 0.3 ಬರುತ್ತಿದ್ದು ಫೇಸ್‌ಲೇಸ್ ಹಾಗೂ ಪೇಪರ್‌ಲೆಸ್ ನೋಂದಣಿಗೆ ಮುಂದಾಗಿದೆ. ಇದು ಆರಂಭವಾದರೆ ಪತ್ರ ಬರಹಗಾರರಿಗೆ ಕೆಲಸವಿರುವುದಿಲ್ಲ. ಈ ವೃತ್ತಿ ನಂಬಿಕೊಂಡು ಜೀವನ ಸಾಗಿಸುತ್ತಿರುವ ರಾಜ್ಯದ 10000ಕ್ಕೂ ಅಧಿಕ ಕುಟುಂಬಗಳು ಬೀದಿಗೆ ಬೀಳುವ ಆತಂಕವಿದೆ ಎಂದರು.
ಇದನ್ನು ಸರ್ಕಾರ ಚಿಂತಿಸದೆ ಕೆಲವೇ ಅಧಿಕಾರಿಗಳ ಸಲಹೆ ಪಡೆದು ವಿದೇಶದಲ್ಲಿರುವ ಫೇಸ್‌ಲೆಸ್ ಹಾಗೂ ಪೇಪರಲೆಸ್ ನೋಂದಣಿ ಕಾರ್ಯಕ್ಕೆ ಮುಂದಾಗಿದೆ ಎಂದ ಅವರು, ಈ ಪ್ರಕ್ರಿಯೆ ಕೈಬಿಡಬೇಕೆಂದು ಒಂದು ವರ್ಷದಿಂದ ಇಲಾಖೆ ಅಧಿಕಾರಿಗಳು, ಕಂದಾಯ ಸಚಿವರಿಗೆ ಮೂರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.ಪತ್ರ ಬರಹಗಾರರ ಹುದ್ದೆ ತೆಗೆಯುವುದಿಲ್ಲ ಎಂದು ಸರ್ಕಾರ ಹೇಳುತ್ತಲೇ ಪರೋಕ್ಷವಾಗಿ ಮೂಲೆಗುಂಪು ಮಾಡುತ್ತಿದೆ. ಈ ಎಲ್ಲ ಅಂಶಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಲು ಒಕ್ಕೂಟದ ವತಿಯಿಂದ ಡಿ. 16ರಂದು ಸುವರ್ಣಸೌಧದ ಎದುರು ಧರಣಿ ನಡೆಸಲಾಗುವುದು ಎಂದು ತಿಳಿಸಿದರು.
ಹೊರರಾಜ್ಯದಂತೆ ಇಲ್ಲಿಯೂ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್, ನೋಂದಣಿ ಆಗುವ ದಸ್ತಾವೇಜುಗಳನ್ನು ಕಡ್ಡಾಯವಾಗಿ ಪತ್ರ ಬರಹಗಾರರ ಅಥವಾ ವಕೀಲ ಬಿಕ್ಕಲಂ ಕಡ್ಡಾಯಗೊಳಿಸಬೇಕು ಹಾಗೂ ಅನಧಿಕೃತ ವ್ಯಕ್ತಿಗಳನ್ನು ತಡೆಗಟ್ಟುವುದು ಮತ್ತು ಪತ್ರ ಬರಹಗಾರರಿಗೆ ಗುರುತಿನ ಚೀಟಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.ಈ ವೇಳೆ ಪ್ರಧಾನ ಕಾರ್ಯದರ್ಶಿ ವಿನೋದಗೌಡ ಪಾಟೀಲ, ಸಹಾಯಕ ಕಾರ್ಯದರ್ಶಿ ಗುರುನಾಥ ಯಾತಗೇರಿ, ವ್ಯವಸ್ಥಾಪಕ ನಿರ್ದೇಶಕಿ ರುಕ್ಮಿಣಿಬಾಯಿ ಚಲವಾದಿ, ಗುರುನಾಥ ಯಾವಗಲ್ಲ ಸೇರಿದಂತೆ ಹಲವರಿದ್ದರು.