ಡ್ರಗ್ಸ್ ದಂಧೆ ಎಂಬುದು ಕೇವಲ ಪುರುಷರಿಗಷ್ಟೇ ಸೀಮಿತವಾಗಿಲ್ಲ. ಮಹಿಳೆಯರೂ ಈ ದಂಧೆಯಲ್ಲಿ ಶಾಮೀಲಾಗುತ್ತಿದ್ದಾರೆ. ಪೊಲೀಸ್ ಕಾರ್ಯಾಚರಣೆ ವೇಳೆ ಸಾಕಷ್ಟು ವಿದೇಶಿ, ರಾಜ್ಯ, ಹೊರರಾಜ್ಯದ ಮಹಿಳೆಯರೂ ಸಿಕ್ಕಿಬೀಳುತ್ತಿರುವ ಉದಾಹರಣೆಗಳಿವೆ.
ಮಂಜುನಾಥ.ಕೆ
ಬೆಂಗಳೂರು : ಡ್ರಗ್ಸ್ ದಂಧೆ ಎಂಬುದು ಕೇವಲ ಪುರುಷರಿಗಷ್ಟೇ ಸೀಮಿತವಾಗಿಲ್ಲ. ಮಹಿಳೆಯರೂ ಈ ದಂಧೆಯಲ್ಲಿ ಶಾಮೀಲಾಗುತ್ತಿದ್ದಾರೆ. ಪೊಲೀಸ್ ಕಾರ್ಯಾಚರಣೆ ವೇಳೆ ಸಾಕಷ್ಟು ವಿದೇಶಿ, ರಾಜ್ಯ, ಹೊರರಾಜ್ಯದ ಮಹಿಳೆಯರೂ ಸಿಕ್ಕಿಬೀಳುತ್ತಿರುವ ಉದಾಹರಣೆಗಳಿವೆ.
ಮುಖ್ಯವಾಗಿ ಆಫ್ರಿಕಾದ ನೈಜೀರಿಯಾ, ಉಂಗಾಡ, ಘಾನಾ, ತಾಂಜೇನಿಯಾ, ರುವಾಂಡ ಮತ್ತಿತರ ದೇಶಗಳ ಮಹಿಳೆಯರು ಡ್ರಗ್ಸ್ ದಂಧೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಹಣದ ಆಸೆಗಾಗಿ ಸ್ಥಳೀಯ ಮಹಿಳೆಯರೂ ಈ ದಂಧೆಯ ಭಾಗವಾಗುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಡ್ರಗ್ಸ್ ಸಾಗಣೆಗೆ ಬಳಕೆ:
ಡ್ರಗ್ಸ್ ಜಾಲದವರು ಮಾದಕವಸ್ತುಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಸಾಗಿಸಲು ಮಹಿಳೆಯರನ್ನು ಒಂದು ರೀತಿ ಕೊರಿಯರ್ ರೀತಿ ಬಳಸಿಕೊಳ್ಳುತ್ತಿದ್ದಾರೆ. ಮಹಿಳೆಯರ ಆರ್ಥಿಕ ಪರಿಸ್ಥಿತಿ ದುರುಪಯೋಗಪಡಿಸಿಕೊಳ್ಳುವ ಕಿಂಗ್‌ಪಿನ್ ಡ್ರಗ್ ಪೆಡ್ಲರ್‌ಗಳು ಅವರಿಗೆ ಹಣದ ಆಮಿಷವೊಡ್ಡಿ ಈ ದಂಧೆಗೆ ನೂಕುತ್ತಾರೆ. ಪುರುಷರ ಕೈಯಲ್ಲಿ ಡ್ರಗ್ ಸಾಗಿಸಿದರೆ ಸಿಕ್ಕಿ ಬೀಳುವ ಸಾಧ್ಯತೆ ಹೆಚ್ಚು. ಮಹಿಳೆಯರ ಕೈಯಲ್ಲಿ ಡ್ರಗ್ಸ್ ಸರಬರಾಜು ಮಾಡಿಸಿದರೆ ಸುಲಭಕ್ಕೆ ಅನುಮಾನ ಬರುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ಕೊರಿಯರ್‌ಗಳಾಗಿ ಬಳಸಿಕೊಳ್ಳುತ್ತಿದ್ದಾರೆ.
ಡ್ರಗ್ಸ್ ವಿಚಾರವಾಗಿಯೇ ಈ ವರ್ಷ ನಗರ ಮತ್ತು ಸಿಸಿಬಿ ಪೊಲೀಸರು ಸುಮಾರು 303 ವಿದೇಶಿ ಮಹಿಳೆಯರನ್ನು ಅವರ ದೇಶಕ್ಕೆ ಗಡೀಪಾರು (ಡಿಪೋರ್ಟ್) ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಟ್ಟೆಗಳಲ್ಲಿ ಡ್ರಗ್ಸ್ ಸಾಗಾಟ:
ಚೂಡಿದಾರ ಸೇರಿ ಬಟ್ಟೆಗಳಲ್ಲಿ ಅಡಗಿಸಿಟ್ಟು ಡ್ರಗ್ಸ್ ಸಾಗಣೆ ಮಾಡುತ್ತಿದ್ದ ವಿದೇಶಿ ಮಹಿಳೆಯನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಹಾಗೂ ಚಿಕ್ಕಜಾಲ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕಳೆದ ಜೂನ್‌ನಲ್ಲಿ ಬಂಧಿಸಿದ್ದರು. ಆಕೆಯಿಂದ 10 ಕೋಟಿ ರು. ಮೌಲ್ಯದ 5 ಕೆ.ಜಿ 325 ಗ್ರಾಂ. ಎಂಡಿಎಂಎ ಕ್ರಿಸ್ಟಲ್, 11 ಜೊತೆ ಚೂಡಿದಾರ್ ಜಪ್ತಿ ಮಾಡಿಕೊಂಡಿದ್ದರು.
2021ರಲ್ಲಿ ಬ್ಯುಸಿನೆಸ್ ವೀಸಾದಡಿ ದೆಹಲಿಗೆ ಬಂದಿದ್ದ ಈಕೆ, ದೆಹಲಿಯ ಉತ್ತಮ್ ನಗರದಲ್ಲಿ ನೆಲಸಿದ್ದಳು. ಅಲ್ಲಿ ಪೆಡಿಕ್ಯೂರ್ ಕೆಲಸ ಮಾಡುತ್ತಿದ್ದಳು. ಹೆಚ್ಚಿನ ಹಣ ಸಂಪಾದನೆ ಆಸೆಯಿಂದ ಡ್ರಗ್ಸ್ ಮಾರಾಟ ದಂಧೆಗೆ ಇಳಿದಿದ್ದಳು. ಡ್ರಗ್ಸ್ ಸಾಗಣೆಗೆಂದು ಚೂಡಿದಾರ್‌ಗಳನ್ನು ಖರೀದಿಸಿ ಅದರಲ್ಲಿ ಎಂಡಿಎಂಎ ಕ್ರಿಸ್ಟಲ್ ಬಚ್ಚಿಟ್ಟುಕೊಂಡು ಬಸ್ ಹಾಗೂ ರೈಲುಗಳ ಮೂಲಕ ನಗರಕ್ಕೆ ಬರುತ್ತಿದ್ದಳು.
ತಾಂಜೇನಿಯಾ ಮಹಿಳೆಯಿಂದ 28 ಕೋಟಿ ಡ್ರಗ್ಸ್ ಜಪ್ತಿ:
ಡಿ.3ರಂದು ಸಿಸಿಬಿ ಪೊಲೀಸರು ತಾಂಜೇನಿಯಾದ ಮಹಿಳೆ ಸೇರಿ ಇಬ್ಬರು ವಿದೇಶಿ ಡ್ರಗ್ ಫೆಡ್ಲರ್ ಗಳನ್ನು ಬಂಧಿಸಿ 28.75 ಕೋಟಿ ರು. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದರು. 10 ಕೆ.ಜಿ ಎಂಡಿಎಂಎ ಕ್ರಿಸ್ಟೆಲ್, 8 ಕೆ.ಜಿ. ಹೈಡ್ರೋಗಾಂಜಾ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದರು. ತಾಂಜಾನಿಯಾ ಮಹಿಳೆ ಸಂಪಿಗೆಹಳ್ಳಿಯ ರಾಚೇನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಳು. ಹಣದಾಸೆಗೆ ಡ್ರಗ್ ಮಾರಾಟ ದಂಧೆಯಲ್ಲಿ ತೊಡಗಿದ್ದಳು.
ಮಹಿಳಾ ಸೆಲೆಬ್ರಿಟಿಗಳ ಸೆರೆ:
ಡ್ರಗ್ಸ್ ಕೇಸ್‌ನಲ್ಲಿ ಸ್ಯಾಂಡಲ್‌ವುಡ್, ಕಾಲಿವುಡ್ ಹಾಗೂ ಹಾಲಿವುಡ್‌ನ ಸೆಲೆಬ್ರಿಟಿಗಳೂ ನಗರ ಪೊಲೀಸರಿಂದ ಬಂಧನವಾಗಿದ್ದುಂಟು. ನಟಿಯರಾದ ಸಂಜನಾ, ರಾಗಿಣಿ, ಶ್ರದ್ಧಾ ಕಪೂರ್ ಸಹೋದರ ಸಿದಾರ್ಥ್, ತೆಲುಗು ನಟಿ ಹೇಮಾ ಅವರನ್ನು ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದರು.
ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದ ಆರೋಪಡಿ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿಯನ್ನು 2020 ರ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು. ಹಲವು ತಿಂಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಇಬ್ಬರೂ ನಂತರ ಜಾಮೀನು ಮೇಲೆ ಬಿಡುಗಡೆಯಾದರು. ಎಲೆಕ್ಟ್ರಾನಿಕ್ ಸಿಟಿಯ ಜಿ.ಆರ್.ಫಾರ್ಮ್‌ಹೌಸ್‌ನಲ್ಲಿ ರೇವ್ ಪಾರ್ಟಿ ಮಾಡಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ತೆಲುಗು ನಟಿ ಹೇಮಾರನ್ನು 2024 ರ ಜೂನ್‌ನಲ್ಲಿ ಬಂಧಿಸಿದ್ದರು. ಡ್ರಗ್ಸ್ ಹಾಗೂ ರೇವ್ ಪಾರ್ಟಿ ಆಯೋಜನೆಯಲ್ಲಿ ಹೇಮಾ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಶ್ರದ್ಧಾ ಕಪೂರ್ ಸಹೋದರ ಸಿದ್ದಾರ್ಥ್ ಕಪೂರ್‌ನನ್ನು ಡ್ರಗ್ಸ್ ಕೇಸ್‌ನಲ್ಲಿ 2022 ರಲ್ಲಿ ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದರು. ಡಿ.ಜೆ. ಆಗಿರುವ ಸಿದ್ದಾರ್ಥ್ ಕಪೂರ್ ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ನಡೆದ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ.
ಬಡ ವಿವಾಹಿತ ಮಹಿಳೆಯರನ್ನೇ ಟಾರ್ಗೆಟ್ ಮಾಡುವ ಪ್ರಮುಖ ಡ್ರಗ್ ಪೆಡ್ಲರ್‌ಗಳು, ಹಣದ ಆಮಿಷವೊಡ್ಡಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಮಾದಕ ವಸ್ತು ಸಾಗಿಸಲು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ವಿದೇಶಿ ಮಹಿಳೆಯರು ಮೊದಲ ಬಾರಿ ಬಂಧನವಾದರೆ ಅವರನ್ನು ಡಿಪೋರ್ಟ್ ಮಾಡಲಾಗುತ್ತದೆ. ಒಂದಕ್ಕಿಂತ ಹೆಚ್ಚಿನ ಬಾರಿ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದರೆ ಅವರನ್ನು ವಿದೇಶಿಗರ ಡಿಟೆನ್ಶನ್ ಸೆಂಟರ್‌ಗೆ ಕಳುಹಿಸುತ್ತದೆ. ಮಹಿಳಾ ಪೆಡ್ಲರ್‌ಗಳ ಮೇಲೆಯೂ ಹದ್ದಿನ ಕಣ್ಣಿಡಲಾಗಿದೆ.
-ರಾಜಾ ಇಮಾಮ್ ಖಾಸಿಂ, ಸಿಸಿಬಿ, ಡಿಸಿಪಿ

