ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಬಸರಾಳು ಸಮೀಪದ ಕಾರೆಕಟ್ಟೆಯಿಂದ ಬೇರೆ ಕಡೆಗೆ ರಾಸಾಯನಿಕ ಕಾರ್ಖಾನೆಯೊಂದನ್ನು ಸ್ಥಳಾಂತರ ಮಾಡುವ ಸಮಯದಲ್ಲಿ ರಾಸಾಯನಿಕ ಟ್ಯಾಂಕ್‌ವೊಂದು ಸ್ಫೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು ಮತ್ತಿಬ್ಬರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಧಾರುಣ ಘಟನೆ ನಡೆದಿದೆ.

ಬಿಹಾರ ಮೂಲದ ಖಲೂಖಾನ್‌ (30), ಆಕಾಶ್‌ (25) ಮೃತ ಕಾರ್ಮಿಕರು. ಖಾಸಿಮ್‌, ಸಂತೋಷ್‌ ಮತ್ತು ರಾಜೀವ್‌ಕುಮಾರ್‌ ಅವರು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ಮೂಲದ ಎಲ್‌.ಎನ್‌.ಮುನಿರತ್ನಶೆಟ್ಟಿ ಎಂಬುವರು ರಾಸಾಯನಿಕ ಗೊಬ್ಬರಕ್ಕೆ ಮಿಶ್ರಣ ಮಾಡುವ ಸಲ್ಫರ್‌ನ್ನು ಉತ್ಪಾದನೆ ಮಾಡುವ ಸಲುವಾಗಿ ಕಾರೇಕಟ್ಟೆ ಬಳಿ ನಾಲ್ಕು ವರ್ಷದ ಹಿಂದೆ ರಾಸಾಯನಿಕ ಘಟಕವನ್ನು ಸ್ಥಾಪಿಸಿದ್ದರು. ಕಾರ್ಖಾನೆಯನ್ನು ಪ್ರಾಯೋಗಿಕವಾಗಿ ಆರಂಭ ಮಾಡುವ ಸಮಯದಲ್ಲೇ ರಾಸಾಯನಿಕ ಸೋರಿಕೆಯಾಗಿ‌ ನೂರಾರು ಎಕರೆ ಬೆಳೆ ಹಾನಿಯಾಗಿತ್ತು. ಎರಡು ನಾಯಿಗಳು‌‌ ಮೃತಪಟ್ಟಿದ್ದವು. ಆ ವೇಳೆ ಅದೃಷ್ಟವಶಾತ್ ಜನರಿಗೆ ಯಾವುದೇ ಪ್ರಾಣ ಹಾನಿಯಾಗಿರಲ್ಲ. ಬಳಿಕ ಕಾರ್ಖಾನೆ ಆರಂಭಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಆ ಸಮಯದಲ್ಲಿ ಹಾನಿಯಾದ ಬೆಳೆಗೆ ಮಂಡ್ಯ ಜಿಲ್ಲಾಡಳಿತ ಕಾರ್ಖಾನೆ ಮಾಲೀಕರಿಂದ ಪರಿಹಾರ ಕೊಡಿಸಿತ್ತು. ಅಲ್ಲಿಂದ ಇಲ್ಲಿಯವರೆಗೂ ಕಾರ್ಖಾನೆ ಆರಂಭವೇ ಆಗಿರಲಿಲ್ಲ. ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಮುಂದಾಗಿದ್ದರು. ಬಿಹಾರ ಮೂಲದ ಕಾರ್ಮಿಕರಿಂದ ಕಾರ್ಖಾನೆ ಸ್ಥಳಾಂತರ ಕಾರ್ಯ ಕಳೆದ ಒಂದ ತಿಂಗಳಿಂದಲೂ ನಡೆಯುತ್ತಿತ್ತು.


ಇಂದು ‌ರಾಸಾಯನಿಕ ಟ್ಯಾಂಕ್ ತೆರವು ಮಾಡುವುದಕ್ಕಾಗಿ ಗ್ಯಾಸ್‌ ಕಟರ್‌ನಿಂದ ಟ್ಯಾಂಕ್‌ನ್ನು ಕತ್ತರಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಏಕಾಏಕಿ ಟ್ಯಾಂಕ್‌ ಸ್ಫೋಟಗೊಂಡಿದೆ ಎನ್ನಲಾಗಿದೆ. ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವಿಗೀಡಾಗಿದ್ದರೆ ಮತ್ತಿಬ್ಬರು ಕಾರ್ಮಿಕರು ತೀವ್ರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟಕ ಸ್ಥಳಾಂತರ ಮಾಡುವುದಕ್ಕೆ ಸೂಕ್ತ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದಿರುವುದರಿಂದ ದುರಂತ ಸಂಭವಿಸಿದೆ ಎನ್ನಲಾಗಿದ್ದು, ಸ್ಫೋಟದ ವಿಷಯ ತಿಳಿದು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸರಾಳು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.