ಬೆಂಗಳೂರು: ತುಮಕೂರು ಕಡೆಯಿಂದ ಅತಿ ವೇಗವಾಗಿ ತೆರಳುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಹಾರಿ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಐವರು ಯುವಕರು ಮೃತಪಟ್ಟಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ ಮೂಲದ ದುರ್ಗಾಪ್ರಸಾದ್‌(20), ಕೇಶವ್‌(19), ಲಲಿತ್‌(22) ಹರ್ಷಿತ್‌(20) ಮತ್ತು ಧನುಷ್‌(17) ಮೃತ ದುರ್ದೈವಿಗಳು.

ಶನಿವಾರ ರಾತ್ರಿ ಸುಮಾರು 11.30ಕ್ಕೆ ತುಮಕೂರು-ಬೆಂಗಳೂರು ಹೆದ್ದಾರಿಯ ಜಿಂದಾಲ್‌ ಆಸ್ಪತ್ರೆ ಸಮೀಪದ ಮೇಲ್ಸೇತುವೆಯಲ್ಲಿ ಈ ದುರ್ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್‌ನ ಚಾಲಕ, ನಿರ್ವಾಹಕ ಹಾಗೂ ಆರು ಮಂದಿಗೆ ಪ್ರಯಾಣಿಕರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ವಿವರ:

ಮೃತ ಐವರ ಪೈಕಿ ಹರ್ಷಿತ್‌ ಖಾಸಗಿ ಕಾಲೇಜಲ್ಲಿ ದ್ವಿತೀಯ ವರ್ಷದ ಬಿಕಾಂ ಓದುತ್ತಿದ್ದ. ಧನುಷ್‌ ದ್ವಿತೀಯ ಪಿಯುಸಿ ಓದುತ್ತಿದ್ದ. ಉಳಿದಂತೆ ದುರ್ಗಾ ಪ್ರಸಾದ್‌, ಕೇಶವ್‌, ಲಲಿತ್‌ ಕೆಲಸ ಮಾಡಿಕೊಂಡಿದ್ದವರು. ದೊಡ್ಡಬಳ್ಳಾಪುರ ಮೂಲದ ಈ ಐವರೂ ಸ್ನೇಹಿತರು. ಇತ್ತೀಚೆಗೆ ಲಲಿತ್‌ ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸಿದ್ದ. ಶನಿವಾರ ರಾತ್ರಿ ಐವರು ಸ್ನೇಹಿತರು ಕಾರಿನಲ್ಲಿ ದೊಡ್ಡಬಳ್ಳಾಪುರ ಕಡೆಯಿಂದ ಬೆಂಗಳೂರು ಕಡೆ ಬರುತ್ತಿದ್ದರು.


ತಡರಾತ್ರಿ ತುಮಕೂರು-ಬೆಂಗಳೂರು ಹೆದ್ದಾರಿ ಮೇಲ್ಸೇತುವೆಯಲ್ಲಿ ಕೇಶವ್‌ ವೇಗವಾಗಿ ಕಾರು ಚಲಾಯಿಸಿಕೊಂಡು ಬರುವಾಗ ಜಿಂದಾಲ್ ಆಸ್ಪತ್ರೆ ಬಳಿ ನಿಯಂತ್ರಣ ತಪ್ಪಿದ ಕಾರು, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಹಾರಿದೆ. ಇದೇ ಸಮಯಕ್ಕೆ ಬೆಂಗಳೂರಿನಿಂದ ತುಮಕೂರು ಕಡೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರು ನಜ್ಜುಗಜ್ಜಾಗಿದ್ದು, ಐವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಸ್‌ ಪ್ರಯಾಣಿಕರು ಸೇಫ್‌:

ಘಟನೆಯಲ್ಲಿ ಕೆಎಸ್ಆರ್‌ಟಿಸಿ ಬಸ್‌ ಮುಂಭಾಗದ ಗಾಜು ಒಡೆದು ಜಖಂ ಆಗಿದೆ. ಕಾರು ಗುದ್ದಿದ ರಭಸಕ್ಕೆ ಬಸ್‌ ಚಾಲಕ, ನಿರ್ವಾಹಕ ಸೇರಿ ಆರು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಳಿಕ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ವೇಳೆ ಬಸ್‌ನಲ್ಲಿ ಒಟ್ಟು 43 ಮಂದಿ ಪ್ರಯಾಣಿಕರಿದ್ದರು. ಉಳಿದ ಪ್ರಯಾಣಿಕರಿಗೆ ಬೇರೆ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲನೆ ನಡೆಸಿ ಮೃತದೇಹಗಳನ್ನು ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಮೇಲ್ಸೇತುವೆಯಲ್ಲಿ ಜಖಂ ಆಗಿದ್ದ ಬಸ್‌ ಮತ್ತು ಕಾರು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಭಾನುವಾರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

-ಬಾಕ್ಸ್‌-

ಘಟನೆ ಕುರಿತು ತನಿಖೆ: ಜಂಟಿ ಪೊಲೀಸ್‌ ಆಯುಕ್ತ ರೆಡ್ಡಿ

ಅಪಘಾತದ ಹಿನ್ನೆಲೆಯಲ್ಲಿ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಕಾರ್ತಿಕ್‌ ರೆಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಶನಿವಾರ ರಾತ್ರಿ ಸುಮಾರು 11.30ಕ್ಕೆ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಇಂಡಿಕಾ ಕಾರಿನಲ್ಲಿದ್ದ ಐವರು ಮೃತಪಟ್ಟಿದ್ದಾರೆ. ಬಸ್‌ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೇಶವ್‌ ಎಂಬಾತ ಕಾರು ಚಲಾಯಿಸುತ್ತಿದ್ದ ಎಂದು ತಿಳಿದು ಬಂದಿದೆ. ಕಾರು ಚಾಲನೆ ವೇಳೆ ಮದ್ಯಪಾನ ಮಾಡಿದ್ದರಾ ಅಥವಾ ಇಲ್ಲವಾ ಎಂಬ ಬಗ್ಗೆ ಪರಿಶೀಲಿಸಲು ರಕ್ತದ ಮಾದರಿ ಸಂಗ್ರಹಿಸಲಾಗಿದೆ. ಮೃತರಿಗೆ ಅಪರಾಧದ ಹಿನ್ನೆಲೆ ಇತ್ತಾ? ಎಂಬುದರ ಬಗ್ಗೆಯೂ ತನಿಖೆ ಮಾಡುವುದಾಗಿ ಹೇಳಿದರು.

-ಬಾಕ್ಸ್‌-

ಆಸ್ಪತ್ರೆ ಬಳಿ ಮೃತರ ಪೋಷಕರ ಆಕ್ರಂದನ

ನೆಲಮಂಗಲದ ಸರ್ಕಾರಿ ಆಸ್ಪತ್ರೆ ಬಳಿ ಐವರು ಮೃತರ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ನೇಹಿತನನ್ನು ಭೇಟಿಯಾಗಿ ಬರುವುದಾಗಿ ಹೇಳಿ ಬಂದವನು ಈಗ ಮೃತಪಟ್ಟಿದ್ದಾನೆ ಎಂದು ಮೃತ ಹರ್ಷಿತ್‌ ತಾಯಿ ಗೋಳಾಡಿದರು. ಹತ್ತೇ ನಿಮಿಷದಲ್ಲಿ ಬರುತ್ತೇನೆಂದು ಮನೆಯಿಂದ ಬಂದವನು ಬಾರದ ಲೋಕಕ್ಕೆ ಹೋಗಿದ್ದಾನೆ ಎಂದು ಮೃತ ದುರ್ಗಾಪ್ರಸಾದ್‌ ತಾಯಿ ಕಣ್ಣೀರಿಟ್ಟರು. ರಾತ್ರಿ ಅಮ್ಮ ಮತ್ತು ತಮ್ಮನನ್ನು ಬೇಕರಿಗೆ ಕರೆದೊಯ್ದು ಸ್ವೀಟ್‌ ಕೊಡಿಸಿ ಮನೆಯಿಂದ ಹೊರ ಬಂದಿದ್ದ ಮಗ ಈಗ ಶವವಾಗಿ ಮಲಗಿದ್ದಾನೆ ಎಂದು ಮೃತ ಧನುಷ್‌ ತಂದೆ ಗೋಳಾಡಿದರು. ಮೃತ ಲಲಿತ್‌ ತಾಯಿ ಆಕ್ರಂದನವಂತೂ ಮುಗಿಲು ಮುಟ್ಟಿತ್ತು. ಮೃತ ಯುವಕರ ಕುಟುಂಬದ ಸದಸ್ಯರ ಗೋಳಾಟ ನೋಡುಗರನ್ನು ಭಾವುಕರಾಗಿಸಿತು.

- ಚಿತ್ರ-

- ಮೃತರು

- ನಜ್ಜುಗುಜ್ಜಾದ ಕಾರು

--------------

- ಕೆಎಸ್‌ಆರ್‌ಟಿಸಿ ಬಸ್‌